ಹಂಪಿ ಬೈ ಸ್ಕೈ ಗೆ ಶಾಸಕ ಎಚ್.ಆರ್. ಗವಿಯಪ್ಪ ಚಾಲನೆ

| Published : Mar 02 2025, 01:18 AM IST

ಸಾರಾಂಶ

ವಿಶ್ವ ವಿಖ್ಯಾತ ಹಂಪಿ ಉತ್ಸವದ ನಿಮಿತ್ತ ಆಗಸದಿಂದ ಹಂಪಿ ಸ್ಮಾರಕಗಳ ಸೌಂದರ್ಯ ಕಣ್ತುಂಬಿಕೊಳ್ಳಲು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಆಯೋಜಿಸಲಾಗಿದ್ದ ಹಂಪಿ ಬೈ ಸ್ಕೈಗೆ ಶನಿವಾರ ಅಧಿಕೃತವಾಗಿ ಚಾಲನೆ ದೊರೆಯಿತು.

ಕನ್ನಡಪ್ರಭ ವಾರ್ತೆ ಹಂಪಿ

ವಿಶ್ವ ವಿಖ್ಯಾತ ಹಂಪಿ ಉತ್ಸವದ ನಿಮಿತ್ತ ಆಗಸದಿಂದ ಹಂಪಿ ಸ್ಮಾರಕಗಳ ಸೌಂದರ್ಯ ಕಣ್ತುಂಬಿಕೊಳ್ಳಲು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಆಯೋಜಿಸಲಾಗಿದ್ದ ಹಂಪಿ ಬೈ ಸ್ಕೈಗೆ ಶನಿವಾರ ಅಧಿಕೃತವಾಗಿ ಚಾಲನೆ ದೊರೆಯಿತು.

ಕಮಲಾಪುರದ ಹೋಟೆಲ್ ಮಯೂರ ಭುವನೇಶ್ವರಿ ಆವರಣದಲ್ಲಿ ಹಂಪಿ ಬೈ ಸ್ಕೈಗೆ ವಿಜಯನಗರ ಶಾಸಕ ಎಚ್.ಆರ್. ಗವಿಯಪ್ಪ ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ, ಹೆಲಿಕಾಪ್ಟರ್‌ನಲ್ಲಿ ಸ್ಮಾರಕಗಳ ವೀಕ್ಷಣೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಆಗಸದಿಂದ ಹಂಪಿ ಸ್ಮಾರಕಗಳನ್ನು ಕಣ್ತುಂಬಿಕೊಳ್ಳಲು ಹಂಪಿ ಬೈ ಸ್ಕೈ ಆಯೋಜಿಸಿದ್ದು, ಪ್ರವಾಸಿಗರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಇದರ ಅನುಭವ ಪಡೆದುಕೊಳ್ಳಬೇಕು ಎಂದರು.

ರಾಜ್ಯ ಸರ್ಕಾರ ಹಂಪಿ ಉತ್ಸವವನ್ನು ಜನೋತ್ಸವವಾಗಿ ಆಚರಿಸಲು ಮುಂದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮಾತನಾಡಿ, ಹಂಪಿಯನ್ನು ಆಗಸದಿಂದ ನೋಡಿದರೆ ಮಾತ್ರ ಆಹ್ಲಾದಕರ ಅನುಭವ ಸಿಗುತ್ತದೆ. ಹಂಪಿ ಬೈ ಸ್ಕೈ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.

ಹಡಗಲಿ ಶಾಸಕ ಕೃಷ್ಣನಾಯ್ಕ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ, ಸಿಬ್ಬಂದಿ ಶ್ರೀಹರಿ ಸೇರಿದಂತೆ ಇತರರು ಇದ್ದರು.

ಶುಲ್ಕ ಪಾವತಿಯ ವಿವರ:

ಸ್ಥಳದಲ್ಲಿಯೇ ನಗದು ಪಾವತಿಸಿ ಟಿಕೆಟ್ ಪಡೆಯಲು ಅವಕಾಶವಿದೆ ಹಾಗೂ ಆನ್‌ಲೈನ್ ಬುಕ್ಕಿಂಗ್, ಯುಪಿಐ/ಕ್ಯೂಆರ್ ಕೋಡ್ ಸ್ಕ್ಯಾನರ್ ವ್ಯವಸ್ಥೆ ಕಲ್ಪಿಸಲಾಗಿದೆ. ಮೂರು ದಿನಗಳ ಕಾಲ ಬೆಳಗ್ಗೆ 9 ರಿಂದ ಸಂಜೆ 5.30ರವರೆಗೆ ಕಾರ್ಯಾಚರಣೆ ನಡೆಸಲಾಗುತ್ತದೆ. ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ಸಹಿತ 7 ನಿಮಿಷಗಳ ಹಾರಾಟಕ್ಕೆ ಒಬ್ಬರಿಗೆ ₹3999 ನಿಗದಿಪಡಿಸಲಾಗಿದೆ. 2 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಶುಲ್ಕವಿರುವುದಿಲ್ಲ. ತುಂಬೇ ಏವಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಹೆಲಿಕಾಪ್ಟರ್‌ನಲ್ಲಿ 6 ಚಿಪ್ಸಾನ್ ಏವಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಹೆಲಿಕಾಪ್ಟರ್‌ನಲ್ಲಿ 5 ಪ್ರಯಾಣಿಕರು ಒಮ್ಮೆಗೆ ಪ್ರಯಾಣಿಸಬಹುದು. ಕಮಲಾಪುರ ಹೋಟಲ್ ಮಯೂರ ಭುವನೇಶ್ವರಿ ಆವರಣದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಹಂಪಿಯ ಪರಿಸರದ ಸ್ಮಾರಕಗಳು, ತುಂಗಭದ್ರ ಜಲಾಶಯ ಹಾಗೂ ಇತರೆ ಸ್ಥಳಗಳನ್ನು ಆಗಸದಿಂದ ನೋಡಬಹುದು.ನೋಂದಣಿಗಾಗಿ ತುಂಬೇ ಏವಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಮೊ.9400399999 ಮತ್ತು ಚಿಪ್ಸಾನ್ ಏವಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಮೊ.9743334888, 9942882473 ಗೆ ಸಂಪರ್ಕಿಸಬಹುದು.

ಪ್ರವಾಸಿಗರಿಂದ ಭರ್ಜರಿ ರೆಸ್ಪಾನ್ಸ್:

ಹಂಪಿ ಉತ್ಸವಕ್ಕೆ ಆಗಮಿಸಿದ್ದ ಪ್ರವಾಸಿಗರು ಆಗಸದಿಂದ ಹಂಪಿಯನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದರು. ಟಿಕೆಟ್‌ಗಳನ್ನು ಪಡೆದುಕೊಂಡು ತಮ್ಮ ಸರದಿಗಾಗಿ ಕಾಯುತ್ತಾ ನಿಂತಿದ್ದರು. ಇತರ ಪ್ರವಾಸಿಗರು ಹೆಲಿಕಾಪ್ಟರ್ ನೋಡಲು ಮೈದಾನದಲ್ಲಿ ನೆರೆದಿದ್ದರು. ಚಿಕ್ಕ ಮಕ್ಕಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಹೆಲಿಕಾಪ್ಟರ್ ನೋಡಲು ಮುಗಿಬಿದ್ದರು.