ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕೆಲ ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಯಾದ ಪ್ರದೇಶಗಳಿಗೆ ಶಾಸಕ ಎಚ್.ಟಿ.ಮಂಜು ಭೇಟಿ ನೀಡಿ, ಪರಿಶೀಲನೆ ನಡೆಸಿದರು.ಭಾರೀ ಮಳೆಯಿಂದಾಗಿ ತಾಲೂಕಿನ ಸಂತೇಬಾಚಹಳ್ಳಿ ಮತ್ತು ಕಿಕ್ಕೇರಿ ಹೋಬಳಿಯ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಈ ಭಾಗದ ಹಲವು ಗ್ರಾಮಗಳ ಕೆರೆಗಳು ಮತ್ತು ರಸ್ತೆಗಳು ಹಾನಿಗೀಡಾಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಶಾಸಕ ಎಚ್.ಟಿ.ಮಂಜು ಅಧಿಕಾರಿಗಳೊಂದಿಗೆ ತಾಲೂಕಿನ ಕೈಗೋನಹಳ್ಳಿ, ಸಾರಂಗಿ, ಶ್ಯಾರಹಳ್ಳಿ, ಸಂತೇಬಾಚಹಳ್ಳಿ, ಹುಬ್ಬನಹಳ್ಳಿ, ಲೋಕನಹಳ್ಳಿ, ಅಘಲಯ, ದೊಡ್ಡಸೋಮನಹಳ್ಳಿ, ಮಾಳಗೂರು,ಹಲಸನಹಳ್ಳಿ, ಹಳೇ ಅತ್ತಿಗುಪ್ಪೆ, ಮಾದಿಹಳ್ಳಿ, ಅಂಕನಹಳ್ಳಿ, ದೇವರಹಳ್ಳಿ, ಚೌಡೇನಹಳ್ಳಿ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ ನೆರೆ ಪೀಡಿತ ಸಾರ್ವಜನಿಕರ ಅಹವಾಲು ಆಲಿಸಿದರು.ನೆರೆ ಹಾವಳಿಯಿಂದ ಹಾನಿಗೀಡಾಗಿರುವ ಸೇತುವೆ ಮತ್ತು ರಸ್ತೆಗಳನ್ನು ತಕ್ಷಣವೇ ಸರಿಪಡಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಹಳ್ಳದ ನೀರಿನಿಂದ ಕೆಲವು ಕಡೆ ರೈತರಿಗೆ ಬೆಳೆ ಹಾನಿಯಾಗಿದೆ. ತಕ್ಷಣವೇ ಬೆಳೆ ಹಾನಿ ಪ್ರದೇಶದ ರೈತರಿಗೆ ಸೂಕ್ತ ಪರಿಹಾರ ನೀಡಲು ಅಧಿಕಾರಿಗಳು ಕ್ರಮ ವಹಿಸುವಂತೆ ಶಾಸಕರು ಸೂಚಿಸಿದರು.
ಕಳಪೆ ಕಾಮಗಾರಿಯಿಂದ ಹಾನಿ:2021ರಲ್ಲಿ ಸುರಿದ ಮಳೆಗೆ ತಾಲೂಕಿನ ಸಂತೇಬಾಚಹಳ್ಳಿ ಕೆರೆ ಏರಿ ಒಡೆದು ಹೋಗಿತ್ತು. ಒಡೆದು ಹೋಗಿರುವ ಕೆರೆ ಏರಿ ಕಾಮಗಾರಿ ನಡೆಯುತ್ತಿದೆ. ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿದ ಕೆರೆ ಏರಿ ಕಾಮಗಾರಿ ಸಂಪೂರ್ಣ ಕಳಪೆಯಾಗಿರುವುದು ಶಾಸಕರ ಭೇಟಿ ವೇಳೆ ಕಂಡು ಬಂತು.
ಕೆರೆ ಏರಿ ಕಳಪೆ ಕಾಮಗಾರಿಯ ಬಗ್ಗೆ ರೈತರು ಶಾಸಕರ ಮುಂದೆಯೇ ಧ್ವನಿಯೆತ್ತಿದರು. ರಿಪೇರಿಯಾಗಿರುವ ಕೆರೆ ಏರಿಯಲ್ಲಿ ಮತ್ತೆ ಬಿರುಕು ಕಾಣಿಸಿಕೊಳ್ಳುತ್ತಿದೆ. ಕೆರೆ ಏರಿ ಮೇಲಿನ ವಾಕಿಂಗ್ ಪಾಥ್ ಶಿಥಿಲಗೊಂಡಿದೆ. ನಿಯಮಾನುಸಾರ ತಡೆಗೋಡೆ ಹಾಕಿಲ್ಲ ಎಂದು ದೂರಿದರು.ಇದೆಲ್ಲವನ್ನೂ ಗಮನಿಸಿದ ಶಾಸಕ ಎಚ್.ಟಿ.ಮಂಜು ಅವರು, ಕಳಪೆ ಕಾಮಗಾರಿ ನಡೆಸುತ್ತಿರುವ ನೀರಾವರಿ ಇಲಾಖೆ ಎಂಜಿನಿಯರುಗಳನ್ನು ಸ್ಥಳದಲ್ಲಿಯೇ ತರಾಟೆಗೆ ತೆಗೆದುಕೊಂಡು ಗುಣಮಟ್ಟದ ಕಾಮಗಾರಿಗೆ ಸೂಚನೆ ನೀಡಿದರು.
ಈ ವೇಳೆ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾಪಂ ಇಒ ಕೆ.ಸುಷ್ಮಾ, ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯತರ ಆನಂದ್, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ನಿರ್ಮಲೇಶ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಲೋಕೇಶ್, ಸಹಾಯಕ ಕೃಷಿ ನಿರ್ದೇಶಕ ಸಂತೋಷ್ ಕುಮಾರ್, ಪಟ್ಟಣ ಪೊಲೀಸ್ ಠಾಣೆ ಪಿ.ಎಸ್.ಐ ನವೀನ್, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ನ್.ಜಾನಕೀರಾಂ, ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಸಂತೇಬಾಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ರವಿಕುಮಾರ್, ಮುಖಂಡ ನಾರ್ಗೋನಹಳ್ಳಿ ಮಂಜು ಸೇರಿದಂತೆ ಹಲವು ಅಧಿಕಾರಿಗಳು , ಮುಖಂಡರು ಹಾಜರಿದ್ದರು.