ಹಲವು ಬಾರಿ ಪುರಭವನವನ್ನು ಅಲ್ಪಸ್ವಲ್ಪ ದುರಸ್ತಿಪಡಿಸಿ ಪುರಸಭೆ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಇಂದಿಗೂ ಅಧ್ಯಕ್ಷರು ಕಾರ್ಯನಿರ್ವಹಿಸುವ ಕೊಠಡಿ ಹಾಗು ಸಿಬ್ಬಂದಿ ಕಾರ್ಯನಿರ್ವಹಿಸುವ ಕೊಠಡಿಗಳೆರಡು ಮಳೆ ನೀರಿನಿಂದ ಸೋರುತ್ತಿವೆ. ಅಲ್ಲದೆ ಸಭಾಂಗಣ ದುಸ್ಥಿತಿ ಒಳಗಾಗಿರುವುದರಿಂದ ಪುರಭವನ ಪಾಳು ಬಂಗಲೆಯಂತೆ ಬಾಸವಾಗುತ್ತಿದೆ. ದಾನಿಗಳ ಮೂಲ ಉದ್ದೇಶಕ್ಕೆ ಧಕ್ಕೆ ಬಂದಿದ್ದು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದಕ್ಕೂ ಪುರಸಭೆ ಅವಕಾಶ ನೀಡುತಿಲ್ಲ. ಒಂದು ವೇಳೆ ಅವಕಾಶ ನೀಡಿದರೂ ದುಬಾರಿ ಬಾಡಿಗೆ ವಿಧಿಸುವುದರಿಂದ ಬಹುತೇಕ ಈ ಕಟ್ಟಡದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯದಂತಾಗಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಪಟ್ಟಣದ ಹಾಡ್ಯ ಸುಬ್ಬೆಗೌಡ ಪುರಭವನದ ಜೀರ್ಣೋದ್ದಾರಕ್ಕೆ ಕೊನೆಗೂ ಕಾಲ ಕೂಡಿಬಂದಿದೆ.

1949ರಲ್ಲಿ ತಾಲೂಕಿನ ಹಾಡ್ಯ ಗ್ರಾಮದ ಬಲವಂತಗೌಡ ಎಂಬುವವರು ತಾಲೂಕು ಕೇಂದ್ರದಲ್ಲಿ ಸಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸುವ ಉದ್ದೇಶದಿಂದ ಬೆಂಗಳೂರಿನ ಪುರಭವನದಿಂದ ಪ್ರೇರಿತಗೊಂಡು ಅದೇ ಮಾದರಿಯಲ್ಲಿ ಪಟ್ಟಣದ ಹೃದಯ ಭಾಗದ ಎರಡು ಎಕರೆ ಪ್ರದೇಶದಲ್ಲಿ ಪುರಭವನ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. 1964ರಲ್ಲಿ ಕಟ್ಟಡ ಉದ್ಘಾಟನೆ ವೇಳೆ ಇವರ ತಂದೆಯ ಹೆಸರನ್ನು ಕಟ್ಟಡಕ್ಕೆ ಇಡುವ ಮೂಲಕ ಸಮಾಜಿಕ ಕಾರ್ಯಗಳಿಗೆ ಈ ಕಟ್ಟಡವನ್ನು ಮುಡುಪಾಗಿಟ್ಟಿದ್ದರು.

ಪುರಸಭೆ ವಶಕ್ಕೆ:

ಇಂದಿನ ಹೇಮಾವತಿ ವಾಣಿಜ್ಯ ಮಳಿಗೆ ಇರುವ ಪ್ರದೇಶದಲ್ಲಿ ಹಿಂದೆ ಪುರಸಭೆ ಕಾರ್ಯಾಲಯ ಸ್ಥಾಪನೆಯಾಗಿತ್ತು. ಆದರೆ, ಈ ಪುರಸಭೆ ಕಾರ್ಯಲಯ ಇದ್ದ ಕಟ್ಟಡವನ್ನು ಆಧುನೀಕರಣಗೊಳಿಸುವ ಉದ್ದೇಶದಿಂದ ತಾತ್ಕಲಿಕವಾಗಿ ಪುರಸಭೆ ಕಾರ್ಯಾಲಯವನ್ನು ಇಂದಿನ ಪುರಭವನಕ್ಕೆ ಸ್ಥಳಾಂತರಿಸಲಾಯಿತು. ಆದರೆ, ಪುರಸಭೆ ಕಾರ್ಯಾಲಯದ ಕಟ್ಟಡ ಅಧುನೀಕರಣಕ್ಕೆ ಗ್ರಹಣ ಬಡಿದ ಹಿನ್ನೆಲೆಯಲ್ಲಿ ಪುರಭವನದಲ್ಲೆ ಪುರಸಭೆ ಕಾರ್ಯಾಲಯ ಉಳಿಯುವಂತಾಯಿತು. 1980ರ ಸಾಲಿನಲ್ಲಿ ಪುರಸಭೆ ಕಾರ್ಯಾಲಯ ಇದ್ದ ಸ್ಥಳದಲ್ಲೆ ಹೇಮಾವತಿ ವಾಣಿಜ್ಯ ಸಂಕಿರ್ಣ ತಲೆ ಎತ್ತಿದ್ದರಿಂದ ದಾನಿಗಳ ವಿರೋಧದ ನಡುವೆ ಪುರಭವನದ ಎರಡು ಕಾರಿಡಾರ್‌ಗಳನ್ನು ಮುಚ್ಚಿ ಪುರಭವನದ ಎರಡು ಬದಿಯಲ್ಲಿ ಮುಖ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಅಧ್ಯಕ್ಷರ ಕೊಠಡಿ ನಿರ್ಮಿಸುವ ಮೂಲಕ ಮೂಲ ಕಟ್ಟಡದ ವಿನ್ಯಾಸಕ್ಕೆ ಮೊದಲ ಬಾರಿಗೆ ದಕ್ಕೆ ತರಲಾಯಿತು. ಅಂದಿನಿಂದ ಹಲವು ಬಾರಿ ಪುರಭವನವನ್ನು ಅಲ್ಪಸ್ವಲ್ಪ ದುರಸ್ತಿಪಡಿಸಿ ಪುರಸಭೆ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಇಂದಿಗೂ ಅಧ್ಯಕ್ಷರು ಕಾರ್ಯನಿರ್ವಹಿಸುವ ಕೊಠಡಿ ಹಾಗು ಸಿಬ್ಬಂದಿ ಕಾರ್ಯನಿರ್ವಹಿಸುವ ಕೊಠಡಿಗಳೆರಡು ಮಳೆ ನೀರಿನಿಂದ ಸೋರುತ್ತಿವೆ. ಅಲ್ಲದೆ ಸಭಾಂಗಣ ದುಸ್ಥಿತಿ ಒಳಗಾಗಿರುವುದರಿಂದ ಪುರಭವನ ಪಾಳು ಬಂಗಲೆಯಂತೆ ಬಾಸವಾಗುತ್ತಿದೆ. ದಾನಿಗಳ ಮೂಲ ಉದ್ದೇಶಕ್ಕೆ ಧಕ್ಕೆ ಬಂದಿದ್ದು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದಕ್ಕೂ ಪುರಸಭೆ ಅವಕಾಶ ನೀಡುತಿಲ್ಲ. ಒಂದು ವೇಳೆ ಅವಕಾಶ ನೀಡಿದರೂ ದುಬಾರಿ ಬಾಡಿಗೆ ವಿಧಿಸುವುದರಿಂದ ಬಹುತೇಕ ಈ ಕಟ್ಟಡದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯದಂತಾಗಿದೆ. ಆಧುನೀಕರಣಕ್ಕೆ ಶಾಸಕ ಮನಸು

ಸದ್ಯ ಪುರಭವನ ಸಂಪೂರ್ಣ ದುಸ್ಥಿತಿಗೆ ತಲುಪಿದ್ದು ಕಟ್ಟಡದ ಹಿಂಬದಿಯಲ್ಲಿ ತ್ಯಾಜ್ಯವಸ್ತುಗಳ ರಾಶಿಯೆ ಸಂಗ್ರಹವಾಗಿದ್ದರೆ, ಕಟ್ಟಡದ ಮುಂಭಾಗ ಮಳೆ ನೀರಿನಿಂದ ಸೋರುತ್ತಿದ್ದು ಸಂಭಾಂಗಣದ ಮೇಲ್ಚಾವಣಿ ವರ್ಣನೆಗೂ ನಿಲುಕದಂತೆ ದುಸ್ಥಿತಿಗೆ ಈಡಾಗಿದ್ದರೆ, ವೇದಿಕೆ ಹತ್ತುವುದು ದುಸ್ಥರವಾಗಿದೆ. ಇದಲ್ಲದೆ ಶೌಚಗೃಹಕ್ಕೆ ಕಾಲಿಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಗಮನಿಸಿರುವ ಶಾಸಕ ಸಿಮೆಂಟ್ ಮಂಜು ಕಟ್ಟಡ ದುರಸ್ತಿಗಾಗಿ ಶಾಸಕರ ವಿವೇಚನ ನಿಧಿಯನ್ನು ಬಳಸಲು ತಿರ್ಮಾನಿಸಿದ್ದು ಸುಮಾರು ₹1.5 ಕೋಟಿ ವೆಚ್ಚದಲ್ಲಿ ಕಟ್ಟಡವನ್ನು ಆಧುನೀಕರಣಗೊಳಿಸಲು ಉದ್ದೇಶಿಸಿಲಾಗಿದೆ. ಏನೇನು ಅಭಿವೃದ್ಧಿಯಾಗಲಿದೆ

ಸಭಾಂಗಣದ ನೆಲಹಾಸನ್ನು ಹೊಸದಾಗಿ ನಿರ್ಮಿಸಿ ಹೊಸ ಕುರ್ಚಿಗಳನ್ನು ಹಾಕುವುದು. ಮೇಲ್ಚಾವಣಿಗೆ ಹೊಸ ಹೆಂಚುಗಳನ್ನು ಹಾಕಿ, ಪಿಒಪಿ ಆಳವಡಿಸುವುದು. ವೇದಿಕೆಯನ್ನು ಸಂಪೂರ್ಣ ಅಭಿವೃದ್ಧಿಗೊಳಿಸುವುದು, ಶೌಚಗೃಹಗಳನ್ನು ಹೊಸದಾಗಿ ನಿರ್ಮಿಸುವುದು ಸೇರಿದಂತೆ ಹಲವು ಕಾಮಗಾರಿಗಳು ಇಲ್ಲಿ ಸೇರಿದ್ದು, ಸಂಪೂರ್ಣ ಅಭಿವೃದ್ಧಿಗೆ ಅನುದಾನ ಕೊರತೆಯಾದರೆ ಮತ್ತಷ್ಟು ಅನುದಾನದ ಮೂಲಕ ಕಟ್ಟಡವನ್ನು ಒಂದೇ ಹಂತದಲ್ಲಿ ಅಭಿವೃದ್ಧಿಗೊಳಿಸುವ ಗುರಿಯನ್ನು ಹೊಂದಲಾಗಿದೆ. ಈ ಬಗ್ಗೆ ಕಳೆದ ಎರಡು ದಿನಗಳ ಹಿಂದೆ ಪುರಸಭೆ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ರೂಪುರೇಷೆ ಸಿದ್ಧಪಡಿಸಲಾಗಿದ್ದು ಯೋಜನೆ ಅನುಮೋದನೆಗೊಂಡ ತಕ್ಷಣ ಕಾಮಗಾರಿ ಆರಂಭಿಸಲು ಚಿಂತನೆ ನಡೆಸಲಾಗಿದೆ.ಜೀವ ಭಯದಲ್ಲೆ ಕೆಲಸ

ಪುರಸಭೆ ಸಿಬ್ಬಂದಿ ಕೆಲಸ ಮಾಡುವ ಕೊಠಡಿ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಗೋಡೆ ಮೇಲ್ಮೈ ಕಳಚಿ ಬೀಳುತ್ತಿದ್ದರೆ ಕಟ್ಟಡದ ಮೇಲ್ಚಾವಣಿ ಯಾವಾಗ ಬೇಕಿದ್ದರೂ ಸಿಬ್ಬಂದಿ ಮೇಲೆ ಬೀಳಬಹುದಾಗಿದೆ. ಇದಲ್ಲದೆ ಮಳೆ ನೀರು ಸೊರುತ್ತಿರುವುದರಿಂದ ನೀರು ಸೋರುವ ಸ್ಥಳಕ್ಕೆ ಬಕೆಟ್‌ಗಳನ್ನು ಇಟ್ಟು ಕೆಲಸ ಮಾಡುತ್ತಿದ್ದಾರೆ.ಚಲ್ಲಾಪಿಲ್ಲಿ:

ಪುರಸಭೆ ಮೇಲ್ಭಾಗದಲ್ಲಿರುವ ಪುರಸಭೆ ದಾಖಲೆ ವಿಭಾಗ ಸಂಪೂರ್ಣ ಆಯೋಮಯ ಸ್ಥಿತಿಯಲ್ಲಿದ್ದು ಪುರಸಭೆ ಸಂಪೂರ್ಣ ದಾಖಲೆ ಕಡತಗಳನ್ನು ಕೇಳುವವರಿಲ್ಲದ ಸ್ಥಿತಿಗೆ ತಲುಪಿದ್ದು, ಅಮೂಲ್ಯ ದಾಖಲೆಗಳು ಸದ್ಯ ಮಳೆ ನೀರಿನಿಂದ ತೊಯ್ದು ಹಾಳಾಗುತ್ತಿವೆ. ದಾಖಲೆಗಳನ್ನು ಸಂರಕ್ಷಿಸುವಂತೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರೂ ಯಾವುದೇ ಉಪಯೋಗವಾಗಿಲ್ಲ ಎಂದು ಶಾಸಕರು ಶುಕ್ರವಾರ ದಾಖಲೆ ವಿಭಾಗವನ್ನು ಪುರಿಶೀಲಿಸಿ ಬೇಸರ ವ್ಯಕ್ತಪಡಿಸಿದರು.