ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕಳೆದ ವರ್ಷ ಬರೆ ಕುಸಿದು ಹಾನಿಯಾಗಿದ್ದ ಕೊಯನಾಡು ಪ್ರಾಥಮಿಕ ಶಾಲೆಗೆ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಂಗಳವಾರ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಆಲಿಸಿದರು.ಈ ಸಂದರ್ಭ ಮಾತನಾಡಿದ ಎ.ಎಸ್ ಪೊನ್ನಣ್ಣ, ಕಳೆದ ವರ್ಷ ಹೆಚ್ಚಿನ ಮಳೆಯಿಂದಾಗಿ ಶಾಲಾ ಕಟ್ಟಡದ ಗೋಡೆಗೆ ಹೆಚ್ಚಿನ ಹಾನಿಯಾಗಿತ್ತು, ಮಕ್ಕಳ ಹಿತದೃಷ್ಟಿಯಿಂದ ಸಂಪಾಜೆ ಶಾಲೆಗೆ ಸ್ಥಳಾಂತರಿಸಲಾಗಿತ್ತು, ಆ ದಿಸೆಯಲ್ಲಿ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಸುಭದ್ರತೆಯ ದೃಷ್ಟಿಯಿಂದ ಎಲ್ಲರೂ ಗಮನಿಸಬೇಕು. ಬೇಸಿಗೆ ಅವಧಿಯಲ್ಲಾದರೂ ತಾತ್ಕಾಲಿಕವಾಗಿ ಕೊಯನಾಡುವಿನಲ್ಲಿ ಪುನರಾರಂಭಿಸುಂತೆ ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಮಾತನಾಡಿ, ಮಕ್ಕಳು ಶಾಲೆಯಿಂದ ವಂಚಿತರಾಗಬಾರದು. ಕೊಯನಾಡು ಶಾಲೆಯಲ್ಲಿ ಸುರಕ್ಷತೆ ಇಲ್ಲದಿರುವುದರಿಂದ ಸಂಪಾಜೆ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಗಿತ್ತು. ಸದ್ಯ ಮಕ್ಕಳಿಗೆ ಪ್ರಯಾಣಭತ್ಯೆ ಭರಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.ಕೊಯನಾಡು ಶಾಲೆ ಸುರಕ್ಷತೆಯ ಬಗ್ಗೆ ಸಂಬಂಧಪಟ್ಟವರು ಜಿಲ್ಲಾಡಳಿತಕ್ಕೆ ವರದಿ ನೀಡಿದ್ದು, ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಮುಂದಿನ ಕ್ರಮ ವಹಿಸಲಾಗುವುದು ಎಂದು ಹೇಳಿದರು. ಆ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವಂತೆ ಕೋರಿದರು.
ನಿಡಿಂಜಿ ಕುಸುಮಾಕರ ಮಾತನಾಡಿ, ಕಳೆದ 5 ತಿಂಗಳಿಂದ ಯಾರೂ ಸಹ ಇತ್ತ ತಿರುಗಿ ನೋಡಿಲ್ಲ, ಪೋಷಕರ ಜತೆ ಅಹವಾಲು ಆಲಿಸಿಲ್ಲ, ಎರಡು ಕಿ.ಮೀ ದೂರವಿರುವ ಸಂಪಾಜೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಆಟೋದಲ್ಲಿ ಕಳುಹಿಸುವುದು ಕಷ್ಟವಾಗಿದೆ. ಆದ್ದರಿಂದ ತುಂಬಾ ತೊಂದರೆಯಾಗಿದ್ದು, ಕೊಯನಾಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಬೇಕು ಎಂದು ಮನವಿ ಮಾಡಿದರು.ಸಂಪಾಜೆ ಗ್ರಾ.ಪಂ.ಸದಸ್ಯರಾದ ಸುರೇಶ್, ಕೊಯನಾಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪಾಠ ಪ್ರವಚನ ಮುಂದುವರಿಸಬೇಕು ಎಂದು ಮನವಿ ಮಾಡಿದರು.
ಕೊಯನಾಡು ಭಾಗದಲ್ಲಿ ಕೂಲಿಕಾರ್ಮಿಕರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೊಯನಾಡು ಶಾಲೆ ಪುನರಾರಂಭಿಸಬೇಕು ಎಂದು ಮೀನಾ ಕುಮಾರಿ ಮನವಿ ಮಾಡಿದರು.ಸ್ಥಳೀಯರಾದ ಗಣಪತಿ ಮಾತನಾಡಿ, ಕೊಯನಾಡು ಪ್ರಾಥಮಿಕ ಶಾಲೆಯಲ್ಲಿಯೇ ತರಗತಿ ಆರಂಭವಾಗಬೇಕು ಎಂಬುದು ಇಲ್ಲಿನ ಸ್ಥಳೀಯರ ಒಕ್ಕೊರಲ ಬೇಡಿಕೆ ಎಂದರು.
ಸ್ಥಳೀಯರಾದ ರಾಜೇಶ್ವರಿ ಮಾತನಾಡಿ, ಈಗಾಗಲೇ ಡಿ.23 ರಿಂದ ವಿದ್ಯಾರ್ಥಿಗಳು ಕೊಯನಾಡು ಶಾಲೆಗೆ ಬರುತ್ತಿದ್ದಾರೆ. ಆದ್ದರಿಂದ ಸ್ಥಳೀಯರು ಹಾಗೂ ಮಕ್ಕಳ ಪರಿಸ್ಥಿತಿ ಅರ್ಥ ಮಾಡಿಕೊಂಡು ತರಗತಿ ನಡೆಸಬೇಕು ಎಂದು ಮನವಿ ಮಾಡಿದರು.ಶಾಸಕ ಎ.ಎಸ್.ಪೊನ್ನಣ್ಣ ಜಿಲ್ಲಾಧಿಕಾರಿ ಜೊತೆ ದೂರವಾಣಿ ಮೂಲಕ ಮಾತನಾಡಿ, ಶಾಲೆಯ ಪುನರಾರಂಭ ಸಂಬಂಧ ಶೀಘ್ರ ತೀರ್ಮಾನ ತೆಗೆದುಕೊಳ್ಳುವಂತೆ ತಿಳಿಸಿದರು.
ಉಪ ವಿಭಾಗಾಧಿಕಾರಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಎ.ಎಸ್.ಪೊನ್ನಣ್ಣ ಅವರು ಕೊಯನಾಡುವಿನಲ್ಲಿ 1 ಎಕರೆ ಜಾಗವನ್ನು ಶಾಲಾ ಶಿಕ್ಷಣ ಇಲಾಖೆಗೆ ಗುರುವಾರವೇ ಹಸ್ತಾಂತರಿಸುವಂತೆ ಸೂಚಿಸಿದರು.ಕೊನೆಯಲ್ಲಿ ಎಲ್ಲರ ಮಾತು ಆಲಿಸಿದ ಪೊನ್ನಣ್ಣ ತಾತ್ಕಾಲಿಕವಾಗಿ ಕೊಯನಾಡು ಶಾಲೆಯ ಪುನರಾರಂಭಕ್ಕೆ ಸಲಹೆ ನೀಡಿದರು. ವಿದ್ಯಾರ್ಥಿಗಳ ಜತೆ ಶಾಸಕರು ಮಾತನಾಡಿದರು.
ಸಂಪಾಜೆ ಗ್ರಾ.ಪಂ.ಸದಸ್ಯರಾದ ಸುರೇಶ್ ಜಗದೀಶ್, ಶಾಲಾ ಶಿಕ್ಷಣ ಇಲಾಖೆಯ ಬಿಆರ್‌ಸಿ ಗುರುರಾಜ್, ಪಿಡಿಒ ಶೋಭಾರಾಣಿ, ಹೊಸೂರು ಸೂರಜ್ ಇತರರು ಇದ್ದರು.