ರಾಮನಗರ: ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಯುಗಾದಿ ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಹಿ ಸುದ್ದಿ ಸಿಗುವ ವಿಶ್ವಾಸವಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ತಾಲೂಕಿನ ಕೈಲಾಂಚ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಗುರುವಾರ ಮೊಟ್ಟೆದೊಡ್ಡಿ ಏತ ನೀರಾವರಿ ಯೋಜನೆ ಪುನಶ್ಚೇತನ ಕಾಮಗಾರಿ ವೀಕ್ಷಿಸಿದ ಬಳಿಕ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರು 6 ವರ್ಷಗಳನ್ನು ಪೂರೈಸಿರುವುದು ಸಂತಸ ತಂದಿದೆ. ನಮ್ಮ ನಾಯಕರ ನೇತೃತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರಿಗೆ ಭವಿಷ್ಯವಿದ್ದು ಯುಗಾದಿ ನಂತರ ದೇವರು ಅವರಿಗೆ ಸಿಹಿಸುದ್ದಿ ಕೊಡುತ್ತಾನೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಮತಯಾಚನೆ ಮಾಡಿದಾಗ ರಾಮನಗರದಲ್ಲಿ ನಾನು ಅಭ್ಯರ್ಥಿ ಎಂದೇ ಮತ ಕೇಳಿದ್ದರು. ಅದರಿಂದ ನಾನು ಗೆಲುವು ಸಾಧಿಸಿದ್ದು, ಹಾಗಾಗಿ ಅವರು ನನ್ನ ಕೈ ಹಿಡಿದು ಮುನ್ನಡೆಸುತ್ತಿದ್ದಾರೆ. ಅವರ ಸಹಕಾರದಲ್ಲಿಯೇ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದು, ನನ್ನ ಕಷ್ಟ-ಸುಖ ಅಳಲು ಎಲ್ಲವನ್ನು ಅವರ ಮೇಲೆಯೇ ಹಾಕುತ್ತಿದ್ದೇನೆ ಎಂದು ಹೇಳಿದರು.

ರಾಮನಗರ ಕ್ಷೇತ್ರದಲ್ಲಿ 25 ವರ್ಷಗಳ ಬಳಿಕ ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ. ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಅದೆಲ್ಲವೂ ಹುಸಿಯಾಗಿದೆ. ಈ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನನಗೆ ಎಷ್ಟು ಜವಾಬ್ದಾರಿ ಇದೆಯೋ ಡಿ.ಕೆ.ಶಿವಕುಮಾರ್ ಅವರ ಮೇಲೂ ಅಷ್ಟೇ ಜವಾಬ್ದಾರಿ ಇದೆ. ಅವರ ಸಹಕಾರದಿಂದಲೇ ನಾನು ಕ್ಷೇತ್ರದ ಅಭಿವೃದ್ದಿ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು.

ರಾಜ್ಯ ಬಜೆಟ್ ನಿರಾಸೆ ತರಿಸಿದೆ:


ಕ್ಷೇತ್ರದ ಹಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೆ. ಆದರೆ, ಈ ಸಾಲಿನ ಬಜೆಟ್‌ನಲ್ಲಿ ಅನುದಾನ ನೀಡದಿರುವುದು ನನಗೆ ಬಹಳ ನಿರಾಸೆಯಾಗಿದೆ. ಕೃಷಿ, ರೇಷ್ಮೆ ಇಲಾಖೆ, ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ಭಕ್ಷಿಕೆರೆ ಹೊಡದು ಸೀರಳ್ಳ ನೆರೆಯಿಂದ ಉಂಟಾದ ಅನಾಹುತಗಳನ್ನು ಸರಿಪಡಿಸಲು ಅನುದಾನ ಕೊಡುವಂತೆ ನಾನೇ ಖುದ್ಧಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದೆ. ಅವರು ಚಿಂತನೆ ನಡೆಸಿ ರಾಮನಗರಕ್ಕೆ ಅನುದಾನ ನೀಡುತ್ತಾರೆ ಎಂಬ ವಿಶ್ವಾಸ, ನಂಬಿಕೆ ಇಟ್ಟಿದ್ದೆ. ಆದರೆ, ಬಜೆಟ್‌ನಲ್ಲಿ ಅದು ಸಾಕಾರವಾಗದಿರುವುದು ಬೇಸರ ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ತಾಲೂಕುಗಳು ಬೆಂಗಳೂರಿಗೆ ಸಮೀಪವಿದ್ದು, ಒಂದು ದಿನದ ಪ್ರವಾಸಿ ಸರ್‌ಕ್ಯೂಟ್ ಮಾಡಲು ಸಂಗಮ, ರೇವಣಸಿದ್ದೇಶ್ವರ ಬೆಟ್ಟ, ಜಾನಪದ ಲೋಕ, ಕಣ್ವ ಜಲಾಶಯ, ರಾಮದೇವರ ಬೆಟ್ಟ, ಸಾವನದುರ್ಗ, ಮಂಚನಬೆಲೆ ಜಲಾಶಯಗಳಂತಹ ಹಲವು ಇತಿಹಾಸವಿರುವ ತಾಣಗಳು ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿವೆ. ಈ ಸಾಲಿನ ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದೆ. ಅದು ಕೂಡ ಸಾಕಾರವಾಗಿಲ್ಲ. ಅದಕ್ಕೆ ಆದ್ಯತೆ ಕೊಟ್ಟಿದ್ದರೆ ಪ್ರವಾಸಿ ತಾಣಗಳ ಅಭಿವೃದ್ದಿ ಜೊತೆಗೆ ರೆವಿನ್ಯೂ ಸಹ ಬರುತ್ತಿತ್ತು ಎಂದು ಇಕ್ಬಾಲ್ ಹುಸೇನ್ ಹೇಳಿದರು.

ಈ ಸಂದರ್ಭದಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮೊಟ್ಟೆದೊಡ್ಡಿ ಏತ ನೀರಾವರಿ ಯೋಜನೆ ಪುನಶ್ಚೇತನ ಕಾಮಗಾರಿ ವೀಕ್ಷಿಸಿದ ಶಾಸಕರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಅಚ್ಚಲು ಗ್ರಾಮದಲ್ಲಿ ಸಿಸಿ ರಸ್ತೆ, ಚನ್ನಮಾನ ಹಳ್ಳಿಯಲ್ಲಿ ಸಿಸಿ ರಸ್ತೆ, ಚರಂಡಿ, ಕುಂಬಾಪುರ ಕಾಲೋನಿಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ, ಕುಂಬಾಪುರ ದಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ಲೋಕಾರ್ಪಣೆ ಮಾಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಚ್.ರಾಜು , ಮುಖಂಡರಾದ ಗುರುಪ್ರಸಾದ್, ರಂಜಿತ್, ಅಪ್ಪಾಜಣ್ಣ, ಚಿಕ್ಕೇಗೌಡ, ಅಚ್ಚಲು ಕಿರಣ್, ಗೋಪಾಲ್, ಶ್ರೀನಿವಾಸ್, ಸಿದ್ದೇಗೌಡ, ಕುಂಬಾಪುರ ಪಾರ್ಥ, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಕೊಟ್ರೇಶ್, ಇಇ ನೂತನ್ ಇತರರಿದ್ದರು.

12ಕೆಆರ್ ಎಂಎನ್ 1.ಜೆಪಿಜಿ

ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮೊಟ್ಟೆದೊಡ್ಡಿ ಏತ ನೀರಾವರಿ ಯೋಜನೆ ಪುನಶ್ಚೇತನ ಕಾಮಗಾರಿಯನ್ನು ಶಾಸಕ ಇಕ್ಬಾಲ್ ಹುಸೇನ್ ವೀಕ್ಷಿಸಿದರು.