ಶಸ್ತ್ರಚಿಕಿತ್ಸೆ ಹಣ ಭರಿಸಿ ಮಾನವೀಯತೆ ಮೆರೆದ ಶಾಸಕ ಇಕ್ಬಾಲ್ ಹುಸೇನ್

| Published : May 02 2025, 12:15 AM IST

ಶಸ್ತ್ರಚಿಕಿತ್ಸೆ ಹಣ ಭರಿಸಿ ಮಾನವೀಯತೆ ಮೆರೆದ ಶಾಸಕ ಇಕ್ಬಾಲ್ ಹುಸೇನ್
Share this Article
  • FB
  • TW
  • Linkdin
  • Email

ಸಾರಾಂಶ

ಹೆಣ್ಣು ಮಕ್ಕಳಿಗೆ ತಂದೆ ಮನೆ, ಅಣ್ಣ ತಮ್ಮಂದಿರ ಮನೆಯವರು ಬಾಗಿನ ಕೊಡುತ್ತಾರೆ. ಆದರೆ, ಶಾಸಕ ಇಕ್ಬಾಲ್ ಹುಸೇನ್ ರವರು ಮಹಿಳೆಯರನ್ನು ತಾಯಂದಿರು, ಸಹೋದರಿಯರು ಎಂದು ಭಾವಿಸಿ ಸಹಸ್ರಾರು ಮಹಿಳೆಯರಿಗೆ ಬಾಗಿನ ನೀಡುವ ಕೆಲಸ ಮಾಡಿದರು. ಆದರೆ, ಕಿಡಿಗೇಡಿಗಳು ಇದರಲ್ಲೂ ರಾಜಕೀಯ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರ

ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಉಂಟಾದ ನೂಕು ನುಗ್ಗಲಿನಲ್ಲಿ ಕೈ ಮುರಿದುಕೊಂಡಿದ್ದ ಮಹಿಳೆಯ ಶಸ್ತ್ರ ಚಿಕಿತ್ಸೆಗೆ ತಗುಲಿದ ಸಂಪೂರ್ಣ ವೆಚ್ಚವನ್ನು ಶಾಸಕ ಇಕ್ಬಾಲ್ ಹುಸೇನ್ ಅವರೇ ಭರಿಸಿ ಮಾನವೀಯತೆ ಮೆರೆದಿದ್ದಾರೆ.

ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಉಂಟಾದ ನೂಕು ನುಗ್ಗಲು ವೇಳೆ ನೆಲಕ್ಕೆ ಬಿದ್ದು ರಾಮನಗರ ತಾಲೂಕಿನ ಶಾನುಬೋಗನಹಳ್ಳಿಯ ಮಹಾಲಕ್ಷ್ಮೀ ಕೈ ಮುರಿದುಕೊಂಡಿದ್ದರು. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಶಾಸಕ ಇಕ್ಬಾಲ್ ಹುಸೇನ್ ರವರು ಜಿಲ್ಲಾಸ್ಪತ್ರೆಯಲ್ಲಿ ಮಹಾಲಕ್ಷ್ಮೀ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿ ಸ್ಪಂದಿಸಿದ್ದರು. ಅಲ್ಲದೆ, ಹೆಚ್ಚಿನ ಚಿಕಿತ್ಸೆಗಾಗಿ ಚನ್ನಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿಸಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದರು.

ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಮಹಾಲಕ್ಷ್ಮೀಯವರ ಅಳಿಯ ಶಾಸಕರನ್ನು ಸಂಪರ್ಕಿಸಿ ಕಷ್ಟ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ರವರು ಮಾನವೀಯತೆ ದೃಷ್ಟಿಯಿಂದ ಚಿಕಿತ್ಸೆಗೆ ತಗುಲಿದ ಸಂಪೂರ್ಣ ಖರ್ಚನ್ನು ಭರಿಸಿದ್ದಾರೆ.

ಶಾಸಕರು ನೀಡಿದ ಚಿಕಿತ್ಸೆಯ ಹಣವನ್ನು ಖಾಸಗಿ ಆಸ್ಪತ್ರೆಗೆ ಪಾವತಿಸಿದ ನಂತರ ಮಾತನಾಡಿದ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಶಾಸಕರು ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿ ಮಹಿಳೆಯರು ಪಾಲ್ಗೊಂಡಿದ್ದರು. ನೂಕು ನುಗ್ಗಲಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮಹಾಲಕ್ಷ್ಮೀ ಅವರನ್ನು ಶಾಸಕರು ಅದೇ ದಿನ ಭೇಟಿಯಾಗಿ ಸಾಂತ್ವನ ಹೇಳಿದ್ದರು. ಆದರೂ ಕೆಲ ಕಿಡಿಗೇಡಿಗಳು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.

ರೋಲ್ ಕಾಲ್ ಗಿರಾಕಿಗಳು ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಹಿಳೆಯರ ಕುರಿತು ಅಪಮಾನಿಸುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅಲ್ಲದೆ, ಶಾಸಕರ ವಿರುದ್ಧ ಅಪಪ್ರಚಾರ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಶಾಸಕರನ್ನು ತೇಜೋವಧೆ ಮಾಡುವುದನ್ನು ಮುಂದುವರೆಸಿದರೆ ಮಹಿಳಾ ಕಾಂಗ್ರೆಸ್ಸಿಗರೇ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೆಪಿಸಿಸಿ ಮಹಿಳಾ ವಿಭಾಗ ರಾಜ್ಯ ಕಾರ್ಯದರ್ಶಿ ಕೋಕಿಲಾ ಮಾತನಾಡಿ, ಹೆಣ್ಣು ಮಕ್ಕಳಿಗೆ ತಂದೆ ಮನೆ, ಅಣ್ಣ ತಮ್ಮಂದಿರ ಮನೆಯವರು ಬಾಗಿನ ಕೊಡುತ್ತಾರೆ. ಆದರೆ, ಶಾಸಕ ಇಕ್ಬಾಲ್ ಹುಸೇನ್ ರವರು ಮಹಿಳೆಯರನ್ನು ತಾಯಂದಿರು, ಸಹೋದರಿಯರು ಎಂದು ಭಾವಿಸಿ ಸಹಸ್ರಾರು ಮಹಿಳೆಯರಿಗೆ ಬಾಗಿನ ನೀಡುವ ಕೆಲಸ ಮಾಡಿದರು. ಆದರೆ, ಕಿಡಿಗೇಡಿಗಳು ಇದರಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಿಡಿಗೇಡಿಗಳು ಸಣ್ಣ ಘಟನೆಯನ್ನು ದೊಡ್ಡದಾಗಿ ಮಾಡಿ ಅಪಪ್ರಚಾರ ಮಾಡುವುದನ್ನು ಬಿಡಬೇಕು. ಇಲ್ಲದಿದ್ದರೆ ಗಾಯಾಳು ಮಹಾಲಕ್ಷ್ಮೀ ಅವರನ್ನು ಜೊತೆಯಲ್ಲಿ ಕರೆತಂದು ಶಾಸಕರ ಬಳಿ ಕ್ಷಮೆಯಾಚಿಸುವವರೆಗೂ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ , ಚನ್ನಪಟ್ಟಣ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್ , ಮುಖಂಡರಾದ ರವಿ, ಬೈರೇಗೌಡ, ಭೂಷಣ್ , ಪಿ.ಡಿ.ರಾಜು, ಅನಿಲ್ ಜೋಗೇಂದರ್ , ಸುನೀಲ್,ಮುಷೀರ್ , ವಿನಯ್ , ವಸಂತ್ , ನರಸಿಂಹಮೂರ್ತಿ ಮತ್ತಿತರರು ಹಾಜರಿದ್ದರು.