ರಾಮನಗರ: ತಾಲೂಕು ಪಂಚಾಯಿತಿ ಹೆಸರಿನಲ್ಲಿರುವ ಜಾಗ ಜಿಲ್ಲಾ ನ್ಯಾಯಾಲಯಕ್ಕೆ ಮಂಜೂರಾಗುವವರೆಗೆ ನಾನು ವಕೀಲರ ಸಂಘಕ್ಕೆ ಕಾಲಿಡುವುದಿಲ್ಲ. ನಾನು ಸುಳ್ಳು ಹೇಳುವುದಿಲ್ಲ. ಬೇಕಾದರೆ ನೀವೇ ಕಾದು ನೋಡಿ
ರಾಮನಗರ: ತಾಲೂಕು ಪಂಚಾಯಿತಿ ಹೆಸರಿನಲ್ಲಿರುವ ಜಾಗ ಜಿಲ್ಲಾ ನ್ಯಾಯಾಲಯಕ್ಕೆ ಮಂಜೂರಾಗುವವರೆಗೆ ನಾನು ವಕೀಲರ ಸಂಘಕ್ಕೆ ಕಾಲಿಡುವುದಿಲ್ಲ. ನಾನು ಸುಳ್ಳು ಹೇಳುವುದಿಲ್ಲ. ಬೇಕಾದರೆ ನೀವೇ ಕಾದು ನೋಡಿ...
ಹೀಗೆ ಆರೇಳು ತಿಂಗಳ ಹಿಂದೆ ಮಾಡಿದ ಶಪಥ ಸಾಧಿಸಿದ ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ವಕೀಲರ ಸಂಘಕ್ಕೆ ಗುರುವಾರ ಆಗಮಿಸಿ ತಾಲೂಕು ಪಂಚಾಯಿತಿಗೆ ಸೇರಿದ 1 ಎಕರೆ 6 ಗುಂಟೆ ಜಾಗವನ್ನು ಜಿಲ್ಲಾ ನ್ಯಾಯಾಲಯಕ್ಕೆ ಮಂಜೂರು ಮಾಡಿರುವ ದಾಖಲೆಗಳು ಮಾತ್ರವಲ್ಲದೆ ಇ-ಖಾತೆಯನ್ನೂ ಹಸ್ತಾಂತರಿಸಿದರು.ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಅಣ್ಣಯ್ಯನವರ್ ಅವರಿಗೆ ಜಿಲ್ಲಾ ನ್ಯಾಯಾಲಯಕ್ಕೆ ಮಂಜೂರಾಗಿರುವ 1.6 ಎಕರೆ ಜಾಗದ ಇ - ಖಾತೆಯನ್ನು ಹಸ್ತಾಂತರಿಸುವ ಜೊತೆಗೆ ರಾಜ್ಯ ಬಜೆಟ್ ನಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣ ವಿಷಯ ಸೇರಿಸಿದ ಶಾಸಕ ಇಕ್ಬಾಲ್ ಹುಸೇನ್ ಕಾರ್ಯವೈಖರಿಯನ್ನು ನ್ಯಾಯಾಧೀಶರು ಹಾಗೂ ವಕೀಲರು ಗುಣಗಾನ ಮಾಡಿದರು.
ನುಡಿದಂತೆ ನಡೆದು ತೋರಿಸಿದ್ದೇನೆ:ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಮೇ ತಿಂಗಳಲ್ಲಿ ಭೂಮಿಪೂಜೆ ನೆರವೇರಿಸಿ ಸುಸಜ್ಜಿತದ ನ್ಯಾಯಾಲಯ ಕಟ್ಟಡವನ್ನು ನಿರ್ಮಿಸಲಾಗುವುದು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಸಹ ಬಜೆಟ್ ನಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಘೋಷಣೆ ಮಾಡಿಸಿದ್ದಾರೆ. ಅವರ ಉಪಸ್ಥಿತಿಯಲ್ಲಿಯೇ ಮುಂದಿನ ತಿಂಗಳು ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.
ಜಿಲ್ಲಾ ಕೇಂದ್ರ ರಾಮನಗರದಲ್ಲಿ ನ್ಯಾಯಾಲಯದ ಕಲಾಪಗಳಿಗೆ ಅನನುಕೂಲವಾಗುವಂತೆ ಕಟ್ಟಡ ನಿರ್ಮಾಣಕ್ಕೆ ಜಾಗ ಮತ್ತು ಕಕ್ಷಿದಾರರಿಗೆ ಬೇಕಿರುವ ಸೌಲಭ್ಯಗಳ ಬಗ್ಗೆ ವಕೀಲರ ಸಂಘದ ಪದಾಧಿಕಾರಿಗಳು ಮನವಿ ಮಾಡುತ್ತಲೇ ಬಂದಿದ್ದರು. ಈ ಸ್ಥಳದಲ್ಲಿ ತಾಲೂಕು ಪಂಚಾಯಿತಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ತೀರ್ಮಾನಿಸಿತ್ತು. ಎಲ್ಲ ಅಡೆತಡೆಗಳನ್ನು ನಿವಾರಿಸಿ ತಾಪಂ ಜಾಗವನ್ನು ಜಿಲ್ಲಾ ನ್ಯಾಯಾಲಯಕ್ಕೆ ಮಂಜೂರು ಮಾಡಿಸಿದ್ದೇನೆ. ನ್ಯಾಯಾದೀಶರಿಗೆ ದಾಖಲೆ - ಇ ಖಾತಾ ಹಸ್ತಾಂತರಿಸುವ ಮೂಲಕ ನಾನು ನುಡಿದಂತೆ ನಡೆದುಕೊಂಡಿದ್ದೇನೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಎಚ್.ಅಣ್ಣಯ್ಯನವರ್ ಮಾತನಾಡಿ, ಮನಸ್ಸು ಶ್ರೀಮಂತವಾದರೆ ಬಡವನು ಸಹ ಶ್ರೀಮಂತನಾಗಿರುತ್ತಾನೆ. ಮನಸ್ಸು ದುರ್ಬಲವಾಗಿದ್ದರೆ ಶ್ರೀಮಂತನು ಬಡವನಾಗುತ್ತಾನೆ. ಹೀಗಾಗಿ ಯಾವುದೇ ಕೆಲಸ ಮಾಡಲು ಮನಸ್ಸು ಮುಖ್ಯ. ಅಂತಹ ಕೆಲಸವನ್ನು ಶಾಸಕರು ಮಾಡುವ ಮೂಲಕ ತಮ್ಮ ಮನಸ್ಸಿನ ಶ್ರೀಮಂತಿಕೆಯನ್ನು ತೋರಿಸಿದ್ದಾರೆ. ಶೀಘ್ರವಾಗಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಮಾಡಿ ಜನರಿಗೆ ಉಪಯುಕ್ತವಾಗಲಿ ಎಂದರು.
ಜಿಲ್ಲಾ ಕೇಂದ್ರ ರಾಮನಗರದಲ್ಲಿ ನ್ಯಾಯಾಲಯಕ್ಕೆ ಸೂಕ್ತ ಕಟ್ಟಡ ಇಲ್ಲದ ಪರಿಣಾಮ 5 ನ್ಯಾಯಾಲಯಗಳು ಮಂಜೂರಾಗಿದ್ದರೂ ಅವುಗಳು ಇಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಸುಸಜ್ಜಿತವಾದ ಕಟ್ಟಡ ನಿರ್ಮಾಣಗೊಂಡರೆ ಮಂಜೂರಾಗಿರುವ 5 ನ್ಯಾಯಾಲಯಗಳ ಜೊತೆಗೆ ಬೇರೆ ನ್ಯಾಯಾಲಯಗಳನ್ನು ಹೈ ಕೋರ್ಟಿನಿಂದ ತರಲು ಅನುಕೂಲವಾಗಲಿದೆ ಎಂದು ಹೇಳಿದರು.ಶಾಸಕರ ಹೆಸರು ಅಜರಾಮರ:
ವಕೀಲರಾದ ಶ್ರೀವತ್ಸ, ಶಿವಣ್ಣಗೌಡ ಹಾಗೂ ತಿಮ್ಮೇಗೌಡ ಮಾತನಾಡಿ, ಶಾಸಕರು ವಕೀಲರ ಮನವಿಗೆ ಸ್ಪಂದಿಸಿ ನ್ಯಾಯಾಲಯದ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ ನಿರ್ಮಾಣ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿ ತಮ್ಮ ಬದ್ಧತೆ ಪ್ರದರ್ಶಿಸಿದ್ದಾರೆ ಎಂದು ತಿಳಿಸಿದರು.ತಾಪಂಗೆ ಸೇರಿದ ಜಾಗವನ್ನು ಜಿಲ್ಲಾ ನ್ಯಾಯಾಲಯಕ್ಕೆ ಮಂಜೂರು ಮಾಡಿಸುವುದು ಸುಲಭದ ಕೆಲಸವಲ್ಲ. ಇದರ ಹಿಂದೆ ಶಾಸಕ ಇಕ್ಬಾಲ್ ಹುಸೇನ್ ರವರ ಪರಿಶ್ರಮ ಸಾಕಷ್ಟಿದೆ. ನ್ಯಾಯಾಂಗ ವ್ಯವಸ್ಥೆ ಜೀವಂತವಾಗಿರುವವರೆಗೂ ಶಾಸಕರ ಹೆಸರು ಅಜರಾಮರವಾಗಿರುತ್ತದೆ ಎಂದು ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ನಿವೇಶನ ಮಂಜೂರು ಮಾಡಲು ಸಹಕರಿಸಿದ ಜಿಲ್ಲಾದಿಕಾರಿ ಯಶ್ವಂತ್ ವಿ. ಗುರುಕರ್, ಜಿಪಂ ಸಿಇಒ ಅನ್‌ಮೋಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ನಗರಸಭೆ ಆಯುಕ್ತ ಡಾ.ಜಯಣ್ಣ ಅವರನ್ನು ಸನ್ಮಾನಿಸಲಾಯಿತು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತಾ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ವಕೀಲರ ಸಂಘದ ಅಧ್ಯಕ್ಷ ಕೆ.ಕೆಂಪಯ್ಯ ಮಾತನಾಡಿದರು. ಸಂಘದ ಉಪಾಧ್ಯಕ್ಷ ಜಯರಾಮ್ , ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಜ್ಯೋತಿ, ವಕೀಲರಾದ ಶಂಕರಯ್ಯ, ಸಿದ್ದೇಗೌಡ, ಶಿವಣ್ಣ, ಧನಂಜಯ್ಯ, ನಾಗೇಶ್, ರವಿ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ವಕೀಲರು ಉಪಸ್ಥಿತರಿದ್ದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನಾ ನ್ಯಾಯಾಲಯದ ಆವರಣದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ ವತಿಯಿಂದ ನಿರ್ಮಿಸಿರುವ ಶುದ್ದ ಕುಡಿಯುವ ನೀರಿನ ಘಟಕ ಮತ್ತು 2023-24ನೇ ಸಾಲಿನ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯವನ್ನು ಗಣ್ಯರು ಲೋಕಾರ್ಪಣೆ ಮಾಡಿದರು.2ಕೆಆರ್ ಎಂಎನ್ 5.ಜೆಪಿಜಿ
ರಾಮನಗರದ ವಕೀಲರ ಸಂಘದ ಸಭಾಂಗಣದಲ್ಲಿ ಶಾಸಕ ಇಕ್ಬಾಲ್ ಹುಸೇನ್, ನ್ಯಾಯಾಧೀಶರಾದ ಅಣ್ಣಯ್ಯನವರ್ ಅವರಿಗೆ ಜಿಲ್ಲಾ ನ್ಯಾಯಾಲಯಕ್ಕೆ ಮಂಜೂರಾಗಿರುವ ಜಾಗದ ದಾಖಲೆಗಳನ್ನು ಹಸ್ತಾಂತರಿಸಿದರು.