ಸಾರಾಂಶ
ರಾಮನಗರ: ಕನ್ನಡ ನೆಲ, ಜಲ, ಭಾಷೆಗಾಗಿ ಹೋರಾಡುವ ಯಾವ ಹೋರಾಟಗಾರರು ಕನ್ನಡದ ಶಾಲನ್ನು ಮಾರಾಟ ಮಾಡಿಕೊಂಡಿಲ್ಲ. ನೀವಾದರು ಮುಗ್ಧ ಜನರಿಗೆ ಕೂಪನ್ ಆಸೆ ತೋರಿಸಿದ ಶಾಸಕರಾದ ಟೋಕನ್ ಗಿರಾಕಿ ಎಂದು ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಜಯಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ, ರೈತ, ದಲಿತ ಸಂಘಟನೆಗಳಲ್ಲಿ ಇರುವವರು ಎಲ್ಲರೂ ಹೋರಾಟಗಾರರೆ ಆಗಿದ್ದಾರೆ. ಶಾಸಕರು ಹಣದ ಬೇಡಿಕೆ ಇಟ್ಟ ರೋಲ್ ಕಾಲ್ ಗಿರಾಕಿಗಳು ಯಾರೆಂದು ಬಹಿರಂಗ ಪಡಿಸಬೇಕು. ಇಲ್ಲದಿದ್ದರೆ ಶಾಸಕರ ಕಚೇರಿ ಮತ್ತು ನಿವಾಸದ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಜನಪ್ರತಿನಿಧಿ ಎಂಬುದನ್ನು ಮರೆತು ಶಾಸಕರು ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಇತ್ತೀಚೆಗೆ ಇಂದಿರಾನಗರ ಹೋಟೆಲ್ ನಲ್ಲಿ ಶಾಸಕರ ಮತ್ತು ಮಹಿಳೆಯೊಂದಿಗೆ ಏನಾಯಿತು. ಶಾಸಕರು ಮೂರು ದಿನ ಆಸ್ಪತ್ರೆಗೆ ದಾಖಲಾಗಿದ್ದೇಕೆ ಎಂಬುದರ ದಾಖಲೆಗಳು ನನ್ನ ಬಳಿಯಿದೆ. ಮಾನ ಮರ್ಯಾದೆಗೆ ಅಂಜಿ ಆ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಆದರೆ, ಹೊಂಗಾಣಿದೊಡ್ಡಿ ರೈತರಿಗೆ ಆಗುತ್ತಿರುವ ಅನ್ಯಾಯ ಸಹಿಸದ ಆ ಮಹಿಳೆ ಮಾಧ್ಯಮಗಳ ಎದುರು ಶಾಸಕರ ನಡವಳಿಕೆ ಬಹಿರಂಗಪಡಿಸಲು ಸಿದ್ಧವಾಗಿದ್ದಾರೆ.
ಆ ರೀತಿಯ ಕೃತ್ಯಗಳಲ್ಲಿ ಸಿಲುಕುವ ಶಾಸಕರು ಅದರಿಂದ ಪಾರಾಗಲು ರೋಲ್ ಕಾಲ್ ಕೊಡುತ್ತಾರೆಯೇ ಹೊರತು ಹೋರಾಟಗಾರರಿಗೆ ಅಲ್ಲ. ಇಂತಹ ಶಾಸಕರು, ಹೋರಾಟಗಾರರ ನೈತಿಕತೆ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕೂಡಲೆ ಹೋರಾಟಗಾರರಲ್ಲಿ ಬಹಿರಂಗವಾಗಿ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದರು.ಹೊಂಗಾಣಿದೊಡ್ಡಿ ಭೂ ಮಾಲೀಕರು ಮತ್ತು ರೈತರು ತಮ್ಮ ನಡುವಿನ ಸಮಸ್ಯೆ ಬಗೆ ಹರಿಸಿಕೊಳ್ಳುತ್ತಿದ್ದರು. ಆದರೆ, ನೀವು ಮಧ್ಯ ಪ್ರವೇಶಿಸಿ ಕಳ್ಳ ಮಾರ್ಗದಲ್ಲಿ ರೈತರ 67 ಎಕರೆ ಭೂಮಿಯನ್ನು ಕಬಳಿಸಿದ್ದೀರಿ. ಭೂ ಮಾಲೀಕರು ಶೀಘ್ರದಲ್ಲಿಯೇ ಸತ್ಯಾಂಶ ಬಹಿರಂಗ ಪಡಿಸಲಿದ್ದಾರೆ ಎಂದರು.
ಈ ಬಗ್ಗೆ ನಾವು ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ. ಮುಂದೆ ಸಿಬಿಐ ಮತ್ತು ಇಡಿ ತನಿಖೆ ನಡೆಸುವಂತೆಯೂ ದೂರು ಸಲ್ಲಿಸುತ್ತೇವೆ. ತಪ್ಪು ಮಾಡಿಲ್ಲ ಎನ್ನುವುದಾದರೆ ಶಾಸಕರು ಏಕೆ ಹೆದರಬೇಕು. ಶಾಸಕರ ಭೂ ಕಬಳಿಕೆ ವಿರುದ್ಧ ವಿಪಕ್ಷದವರು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ಕುಮಾರಸ್ವಾಮಿ ಹೇಳಿದರು.ರೈತಸಂಘ ರಾಜ್ಯ ಉಪಾಧ್ಯಕ್ಷ ಮಲ್ಲಯ್ಯ ಮಾತನಾಡಿ, ಶಾಸಕರ ಭೂ ಕಬಳಿಕೆ ಮಾಡಿಲ್ಲ ಎನ್ನುವುದಾದರೆ ಅವರ ಹೆಸರಿಗೆ ಭೂಮಿ ನೋಂದಣಿ ಹೇಗಾಯಿತು. ರೈತರಿಗೆ ವಾಪಸ್ ಬರೆದು ಕೊಡಲು ಅವರ ಪಿತ್ರಾರ್ಜಿತ ಆಸ್ತಿಯಲ್ಲ. ನೈತಿಕತೆ ಇದ್ದರೆ ರೈತರಿಗೆ ಭೂಮಿ ವಾಪಸ್ ಕೊಡಲಿ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಐಜೂರು ಜಗದೀಶ್, ಜಿಲ್ಲಾಧ್ಯಕ್ಷ ಜಯಕುಮಾರ್, ರೈತಸಂಘ ಸಂಚಾಲಕ ಚೀಲೂರು ಮುನಿರಾಜು, ದಲಿತ ಮುಖಂಡ ಪ್ರಶಾಂತ್ ಹೊಸದುರ್ಗ, ವೈಭವ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಪುಟ್ಟಲಿಂಗಯ್ಯ, ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕನ್ನಡ ಭಾಸ್ಕರ್, ಮುಖಂಡರಾದ ಕೆಂಪರಾಜು, ಗಂಗಾಧರ್, ಗಿರೀಶ್, ಕುಮಾರ್, ಲೋಕೇಶ್, ನಾಗೇಶ್ ಇತರರಿದ್ದರು.28ಕೆಆರ್ ಎಂಎನ್ 3.ಜೆಪಿಜಿ
ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.