ಶಾಸಕ ಜನಾರ್ದನ ರೆಡ್ಡಿ ಕುಟೀರ್ ಕ್ಕೆ ಬೆಂಕಿ

| Published : Dec 28 2023, 01:46 AM IST / Updated: Dec 28 2023, 01:47 AM IST

ಸಾರಾಂಶ

ಪ್ರವಾಸಿ ಬಸ್ಸೊಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್‌ ಕಂಬ ಬಿದ್ದು ತಂತಿಗಳು ಕುಟೀರದ ಮೇಲೆ ಬಿದ್ದಾಗ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ರೆಡ್ಡಿ ಬೆಂಬಲಿಗರು ಇದನ್ನು ಅಲ್ಲಗಳೆದಿದ್ದಾರೆ.

ಗಂಗಾವತಿ: ತಾಲೂಕಿನ ಪಂಪಾ ಸರೋವರ ಬಳಿ ನಿರ್ಮಾಣ ಮಾಡಲಾಗಿರುವ ಶಾಸಕ ಜನಾರ್ದನ ರೆಡ್ಡಿ ಅವರ ಕುಟೀರಕ್ಕೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಬುಧವಾರ ನಡೆದಿದೆ.

ಅಗ್ನಿ ಶಾಮಕ ದಳ ಸೇರಿದಂತೆ ಸ್ಥಳೀಯರ ಸಮಯ ಪ್ರಜ್ಞೆಯಿಂದ ಬೆಂಕಿ ನಂದಿಸಲಾಗಿದ್ದು, ಬಹುತೇಕ ಸುಟ್ಟು ಕರಕಲಾಗಿದೆ. ಕುಟೀರದಲ್ಲಿ ಯಾರೂ ಇಲ್ಲದೆ ವೇಳೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಯಾವುದೇ ಜೀವ ಹಾನಿಯಾಗಿಲ್ಲ ಮತ್ತು ಕುಟೀರದಲ್ಲಿಯೂ ಬೆಲೆಬಾಳುವ ಯಾವುದೇ ವಸ್ತುಗಳು ಇರಲಿಲ್ಲ ಎಂದೇ ಹೇಳಲಾಗುತ್ತಿದೆ.

ದುಷ್ಕರ್ಮಿಗಳ ಕೃತ್ಯ:

ಜನಾರ್ದನ ರೆಡ್ಡಿ ಅವರ ಬೆಂಬಲಿಗರು ಇದು ದುಷ್ಕರ್ಮಿಗಳ ಕೃತ್ಯವಾಗಿದೆ. ಅಂಜನಾದ್ರಿಯಲ್ಲಿ ಹನುಮಮಾಲಾ ವಿಸರ್ಜನಾ ಕಾರ್ಯಕ್ರಮವನ್ನು ಶಾಸಕ ಜನಾರ್ದನ ರೆಡ್ಡಿ ಉಸ್ತುವಾರಿಯಲ್ಲಿ ಯಶಸ್ವಿಯಾಗಿ ಮಾಡಿದ್ದರಿಂದ ಕುಪಿತಗೊಂಡ ದುಷ್ಕರ್ಮಿಗಳು ಬೆಂಕಿ ಹೊತ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ವಿದ್ಯುತ್ ತಂತಿ ಬಿದ್ದು ಘಟನೆ:

ಪ್ರವಾಸಿ ಬಸ್ಸೊಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್‌ ಕಂಬ ಬಿದ್ದು ತಂತಿಗಳು ಕುಟೀರದ ಮೇಲೆ ಬಿದ್ದಾಗ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ರೆಡ್ಡಿ ಬೆಂಬಲಿಗರು ಇದನ್ನು ಅಲ್ಲಗಳೆದಿದ್ದಾರೆ. ವಿದ್ಯುತ್ ಕಂಬ ಬಿದ್ದಿರುವುದಕ್ಕೂ ಇದಕ್ಕೂ ಸಂಬಂಧ ಇಲ್ಲ. ಇದು ದುಷ್ಕರ್ಮಿಗಳ ಕೃತ್ಯವಾಗಿದೆ. ಈ ಬಗ್ಗೆ ತನಿಖೆ ನಡೆಸಿದಾಗಲೇ ಸತ್ಯ ಗೊತ್ತಾಗುತ್ತದೆ ಎಂದಿದ್ದಾರೆ. ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.