ಮದ್ದೂರು ಕ್ಷೇತ್ರದಲ್ಲಿ ಬಾಕಿ ಕಾಮಗಾರಿ ಶೀಘ್ರದಲ್ಲೇ ಚಾಲನೆ: ಶಾಸಕ ಕೆ.ಎಂ.ಉದಯ್ ಭರವಸೆ

| Published : Mar 17 2025, 12:35 AM IST

ಮದ್ದೂರು ಕ್ಷೇತ್ರದಲ್ಲಿ ಬಾಕಿ ಕಾಮಗಾರಿ ಶೀಘ್ರದಲ್ಲೇ ಚಾಲನೆ: ಶಾಸಕ ಕೆ.ಎಂ.ಉದಯ್ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸಭಾ ಅಧಿವೇಶನ ಮುಂದಿನ ಐದು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಆನಂತರ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವುದು. ಮುಂದಿನ ಎರಡು ತಿಂಗಳಲ್ಲಿ ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗುವುದು.

ಕನ್ನಡಪ್ರಭ ವಾರ್ತೆ ಮದ್ದೂರು

ವಿಧಾನಸಭಾ ಅಧಿವೇಶನದ ಬಳಿಕ ಮದ್ದೂರು ಕ್ಷೇತ್ರದ ಬಾಕಿ ಉಳಿದಿರುವ ಕಾಮಗಾರಿಗಳಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭಾನುವಾರ ಹೇಳಿದರು.

ತಾಲೂಕಿನ ವಳೆಗೆರೆಹಳ್ಳಿಯಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರ ವ್ಯಾಪ್ತಿ ಪ್ರತಿ ಗ್ರಾಮದಲ್ಲೂ ಸಹ ನಾಲೆಗಳ ದುರಸ್ತಿ ಮತ್ತು ರಸ್ತೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಅಹವಾಲು ಸಲ್ಲಿಸುತ್ತಿದ್ದಾರೆ. ಪ್ರತಿ ಇಲಾಖೆವಾರು ಪಟ್ಟಿ ಮಾಡಿ ಅನುದಾನ ಬಳಸಿಕೊಂಡು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು.

ವಿಧಾನಸಭಾ ಅಧಿವೇಶನ ಮುಂದಿನ ಐದು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಆನಂತರ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವುದು. ಮುಂದಿನ ಎರಡು ತಿಂಗಳಲ್ಲಿ ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಸ್ಪಷ್ಟಪಡಿಸಿದರು.

ಈ ವೇಳೆ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್‌, ಗ್ರಾಪಂ ಅಧ್ಯಕ್ಷೆ ವಸಂತಮ್ಮ, ಸದಸ್ಯರಾದ ವಿ.ಜೆ.ಸುನಿಲ್ ಕುಮಾರ್, ಮಮತಾ, ವಿ.ಆರ್.ಸುನಿಲ್ ಕುಮಾರ್, ಮುಖಂಡರಾದ ವಿ.ಸಿ.ಉಮಾಶಂಕರ, ಉದ್ಯಮಿ ಪ್ರಣಾಂ ಸತೀಶ್, ವಿ. ಎ. ಅಲೋಕ, ನಿತಿನ್ ಗೌಡ, ಹಾಗೂ ಗ್ರಾಮದ ಮುಖಂಡರು ಇದ್ದರು.ಮುಸ್ಲಿಮರು ಮನುಷ್ಯರಲ್ಲವೇ: ಶಾಸಕ ಕೆ.ಎಂ.ಉದಯ್

ಕನ್ನಡಪ್ರಭ ವಾರ್ತೆ ಮದ್ದೂರು

ಮುಸ್ಲಿಮರು ಬೇರೆ ಧರ್ಮದವರಾಗಿದ್ದರೂ ಅವರು ಮನುಷ್ಯರಲ್ಲವೇ ಎಂದು ಶಾಸಕ ಕೆ.ಎಂ.ಉದಯ್ ಭಾನುವಾರ ಹೇಳಿದರು.

ಮುಸ್ಲಿಮರಿಗೆ ಮೀಸಲಾತಿ ನೀಡಿರುವ ಸರ್ಕಾರದ ಕ್ರಮಕ್ಕೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿ, ಬೇರೆ ಧರ್ಮದ ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದಾರೆ. ಹೀಗಾಗಿ ಧರ್ಮಭೇದ ಮಾಡಬಾರದು. ಸಂವಿಧಾನ ಬದ್ಧವಾಗಿ ನೀಡಬೇಕಾದ ಮೀಸಲಾತಿಯನ್ನು ಅವರಿಗೂ ಕೊಡಲಾಗುತ್ತಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕೇವಲ ಮುಸ್ಲಿಮರಿಗಾಗಿ ಮಾತ್ರವಲ್ಲ. ಎಲ್ಲಾ ವರ್ಗದವರಿಗೂ ಅನ್ವಯವಾಗುವಂತೆ 4 ಲಕ್ಷ 90 ಸಾವಿರ ಕೋಟಿ ರು. ಅನುದಾನ ಮೀಸಲಿಟ್ಟಿದ್ದಾರೆ ಎಂದರು.

ಎರಡು ಕೋಟಿ ವರಗಿನ ಗುತ್ತಿಗೆ ಕಾಮಗಾರಿ ಮತ್ತು ಒಂದು ಕೋಟಿ ವರೆಗಿನ ಖರೀದಿ ಸೇವೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಲು ಸಚಿವ ಸಂಪುಟದ ಸಭೆಯಲ್ಲಿ ಕೈಗೊಂಡ ತೀರ್ಮಾನಕ್ಕೆ ವಿರುದ್ಧವಾಗಿ ಧರ್ಮದ ಆಧಾರದ ಮೇಲೆ ಮೀಸಲಾತಿಗೆ ಅವಕಾಶವಿಲ್ಲ ಎಂಬ ಬಿಜೆಪಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು.

ಮುಸ್ಲಿಮರು ಕೇವಲ ಕೆಲವು ಉದ್ಯೋಗಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಅವರು ಆರ್ಥಿಕವಾಗಿ ಅಭಿವೃದ್ಧಿ ಒಂದೇ ಎಂಬ ಉದ್ದೇಶದಿಂದ ಮೀಸಲಾತಿ ಕಲ್ಪಿಸಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ನಾಯಕರು ಜಾತಿ ರಾಜಕಾರಣಕ್ಕೆ ಸೀಮಿತರಾಗಿದ್ದಾರೆ. ಧರ್ಮ ಮತ್ತು ದೇವರು ಹೆಸರಿನಲ್ಲಿ ಹಿಂದೂ ಅಸ್ತ್ರ ಇಟ್ಟುಕೊಂಡು ಧರ್ಮಗಳ ವಿಭಜನೆ ಮಾಡುವ ಹುನ್ನಾರ ನಡೆಸಿ ತಮ್ಮ ಬೆಳೆ ಬೇಯಿಸಿಕೊಳ್ಳುತ್ತಿದ್ದರು. ಹೀಗಾಗಿ ಬಿಜೆಪಿಯವರು ಈ ಚುನಾವಣೆಯಲ್ಲಿ ಮುಗ್ಗರಿಸುತ್ತಿದ್ದರು. ಆದರೆ, ಸ್ವಲ್ಪ ಅಂತರದಲ್ಲಿ ಬಚಾವಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಆ ಪಕ್ಷದ ನಾಯಕರು ಹಿಗ್ಗಾಮುಗ್ಗ ಮುಗ್ಗರಿಸುವುದು ಶತಸಿದ್ಧ ಎಂದು ಭವಿಷ್ಯ ನುಡಿದರು.

ಈ ವೇಳೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಮತಾ ಶಂಕರೇಗೌಡ. ಮಾಜಿ ಅಧ್ಯಕ್ಷ ಪುಟ್ಟರಾಜು ಇದ್ದರು.