ಕನ್ನಡಪ್ರಭ ವಾರ್ತೆ ಬೆಳಗಾವಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕೋರಿ, ಶಾಸಕ ಭರಮಗೌಡ (ರಾಜು) ಕಾಗೆ ಅವರು ಶುಕ್ರವಾರ ಗಾಲಿಕುರ್ಚಿ ಮೇಲೆ ಬಂದು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದರು. ಮಧುಮೇಹದ ಕಾರಣ ಶಾಸಕ ಕಾಗೆ ಅವರ ಎಡಗಾಲಿಗೆ ತೀವ್ರ ಗಾಯಗಳಾಗಿವೆ. ಕಳೆದ ಐದು ತಿಂಗಳಿನಿಂದ ಅವರು ವಿಶ್ರಾಂತಿ (ಬೆಡ್‌ರೆಸ್ಟ್‌)ಯಲ್ಲೇ ಇದ್ದಾರೆ. ಮಳೆ ಕೊರತೆಯ ಕಾರಣ ಕಾಗವಾಡ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಅಸಹಾಯಕತೆ ತೋರಿದ್ದರಿಂದ, ಖುದ್ದಾಗಿ ಅವರು ಜಿಲ್ಲಾಧಿಕಾರಿ ಕಚೇರಿಗೆ ಬಂದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕೋರಿ, ಶಾಸಕ ಭರಮಗೌಡ (ರಾಜು) ಕಾಗೆ ಅವರು ಶುಕ್ರವಾರ ಗಾಲಿಕುರ್ಚಿ ಮೇಲೆ ಬಂದು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದರು. ಮಧುಮೇಹದ ಕಾರಣ ಶಾಸಕ ಕಾಗೆ ಅವರ ಎಡಗಾಲಿಗೆ ತೀವ್ರ ಗಾಯಗಳಾಗಿವೆ. ಕಳೆದ ಐದು ತಿಂಗಳಿನಿಂದ ಅವರು ವಿಶ್ರಾಂತಿ (ಬೆಡ್‌ರೆಸ್ಟ್‌)ಯಲ್ಲೇ ಇದ್ದಾರೆ. ಮಳೆ ಕೊರತೆಯ ಕಾರಣ ಕಾಗವಾಡ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಅಸಹಾಯಕತೆ ತೋರಿದ್ದರಿಂದ, ಖುದ್ದಾಗಿ ಅವರು ಜಿಲ್ಲಾಧಿಕಾರಿ ಕಚೇರಿಗೆ ಬಂದರು.

ಕಚೇರಿಯ ಮುಂದೆ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಭರಮಗೌಡ ಅವರನ್ನು ಭೇಟಿ ಮಾಡಲು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಕೆಳಗಿಳಿದು ಬಂದರು. ಕಾಗವಾಡ ತಾಲ್ಲೂಕಿನ ಅನಂತಪುರ– ಖಿಳೇಗಾಂವ ಮಧ್ಯದಲ್ಲಿ ಇರುವ ಕೆರೆ ಸಂಪೂರ್ಣ ಒಣಗಿದೆ. ಖಿಳೇಗಾಂವ ಬಸವೇಶ್ವರ ಏತ ನೀರಾವರಿಯಿಂದ ಎರಡು ದಿನ ನೀರು ಹರಿಸಿದರೆ ಈ ಕೆರೆ ತುಂಬುತ್ತದೆ. ಒಂದು ವರ್ಷ ಜನರ ಬಳಕೆಗೆ, ದನ–ಕರುಗಳಿಗೆ ನೀರಿನ ಸಮಸ್ಯೆ ನೀಗಲಿದೆ ಎಂದು ಕಾಗೆ ಮನವಿ ಮಾಡಿದರು.

ಖಿಳೇಗಾಂವನಲ್ಲಿ ಈಗ 5 ಟಿಎಂಸಿ ಅಡಿ ಮಾತ್ರ ನೀರಿದೆ. ಮುಂದಿನ ಜನವರಿ ಹೊತ್ತಿಗೆ ಅದೂ ಖಾಲಿಯಾಗಲಿದೆ. ಕುಡಿಯುವ ಉದ್ದೇಶಕ್ಕಷ್ಟೇ ಬಳಸಲಾಗುತ್ತಿದೆ. ಹೆಚ್ಚುವರಿ ನೀರು ಹರಿಸಲು ಸರ್ಕಾರದ ಮಟ್ಟದಲ್ಲಿ ಮನವರಿಕೆ ಮಾಡಬೇಕು. ನಾನು ಪ್ರಯತ್ನ ಮಾಡುತ್ತೇನೆ. ನೀವೂ ಮನರಿಕೆ ಮಾಡಿರಿ ಎಂದರು.

ಕಾಗವಾಡ ಕ್ಷೇತ್ರದಲ್ಲಿ ಬರುವ ಲೋಕೂರ, ಮಂಗಸೂಳಿ ಹಾಗೂ ಕೆಂಪವಾಡ ಗ್ರಾಮಗಳ ಹೊಲಗಳು ಬೀಳು ಬಿದ್ದಿವೆ. ಬರದಿಂದ ರೈತರು ತತ್ತರಿಸಿದ್ದಾರೆ. ಮಹಾರಾಷ್ಟ್ರದಲ್ಲಿ ತುಸು ಮಳೆಯಾಗಿದ್ದರಿಂದ ಗಣೇಶವಾಡಿ ಹೊಳೆ ಧುಮ್ಮಿಕ್ಕುತ್ತಿದೆ. ಅಲ್ಲಿಂದ ನಮ್ಮ ಜನ ನೀರು ತೆಗೆದುಕೊಳ್ಳಲು ಸಾಧ್ಯವಿದೆ. ಇದಕ್ಕೆ ಹೆಸ್ಕಾಂ ಅಧಿಕಾರಿಗಳು ಫೀಡರ್‌ ಅಳವಡಿಸಬೇಕು’ ಎಂದು ಶಾಸಕ ಮನವಿ ಮಾಡಿದರು.

ಈ ಕೆಲಸ ಶೀಘ್ರವೇ ಮಾಡುತ್ತೇನೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು. ನಂತರ ಸಹಾಯಕರು ಶಾಸಕರನ್ನು ವೀಲ್‌ಚೇರ್‌ ಮೂಲಕ ತಳ್ಳಿಕೊಂಡು ಬಂದು ಕಾರಿನಲ್ಲಿ ಕರೆದೊಯ್ದರು.