18 ಶಾಸಕರ ಅಮಾನತು ಆದೇಶ ಪ್ರಶ್ನಿಸಿ ಸ್ಪೀಕರ್‌ ಖಾದ‌ರ್ಗೆ ಶಾಸಕ ವೇದವ್ಯಾಸ ಕಾಮತ್‌ ಪತ್ರ

| N/A | Published : Mar 25 2025, 12:51 AM IST / Updated: Mar 25 2025, 12:03 PM IST

UT Khader
18 ಶಾಸಕರ ಅಮಾನತು ಆದೇಶ ಪ್ರಶ್ನಿಸಿ ಸ್ಪೀಕರ್‌ ಖಾದ‌ರ್ಗೆ ಶಾಸಕ ವೇದವ್ಯಾಸ ಕಾಮತ್‌ ಪತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಪೀಕರ್ ಪೀಠಕ್ಕೆ ಅಗೌರವ ತೋರಿದರೆಂಬ ಕಾರಣಕ್ಕೆ ಬಿಜೆಪಿಯ 18 ಸದಸ್ಯರನ್ನು 6 ತಿಂಗಳ ಕಾಲ ಅಮಾನತುಗೊಳಿಸಿದ ಸ್ಪೀಕ‌ರ್ ಯು.ಟಿ. ಖಾದ‌ರ್ ಕ್ರಮವನ್ನು ಪ್ರಶ್ನಿಸಿ ಶಾಸಕ ವೇದವ್ಯಾಸ ಕಾಮತ್ ಅವರು ವಿಧಾನಸಭಾ ಸ್ಪೀಕರ್‌ ಅವರಿಗೆ ಪತ್ರ ಬರೆದಿದ್ದಾರೆ.

  ಮಂಗಳೂರು :  ರಾಜ್ಯ ಬಜೆಟ್ ಅಧಿವೇಶನದ ಕೊನೆಯ ದಿನ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದರೆಂಬ ಕಾರಣಕ್ಕೆ ಬಿಜೆಪಿಯ 18 ಸದಸ್ಯರನ್ನು 6 ತಿಂಗಳ ಕಾಲ ಅಮಾನತುಗೊಳಿಸಿದ ಸ್ಪೀಕ‌ರ್ ಯು.ಟಿ. ಖಾದ‌ರ್ ಕ್ರಮವನ್ನು ಪ್ರಶ್ನಿಸಿ ಶಾಸಕ ವೇದವ್ಯಾಸ ಕಾಮತ್ ಅವರು ವಿಧಾನಸಭಾ ಸ್ಪೀಕರ್‌ ಅವರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕವು ಅತ್ಯಂತ ವೈಶಿಷ್ಟ್ಯಪೂರ್ಣ ರಾಜಕಾರಣದ ಹಿನ್ನೆಲೆಯನ್ನು ಹೊಂದಿದೆ. ಪ್ರಜಾಪ್ರಭುತ್ವದ ದೇಗುಲವೆಂದೇ ಗೌರವಿಸಲ್ಪಡುವ ನಮ್ಮ ವಿಧಾನಸೌಧವಂತೂ ಇಡೀ ದೇಶಕ್ಕೆ ಮೇಲ್ಪಂಕ್ತಿಯಾಗಬಲ್ಲ ಘನತೆಯುಳ್ಳದ್ದು. ಅಂತಹ ಭವ್ಯ ಪರಂಪರೆಯ ಇತಿಹಾಸಕ್ಕೀಗ ನಮ್ಮ ತುಳುನಾಡಿನ ಭಾಗದ ಸಭಾಧ್ಯಕ್ಷರೇ ಕೊಡಲಿ ಏಟು ಹಾಕಿ ಶಾಶ್ವತ ಕಪ್ಪು ಚುಕ್ಕೆ ಇಟ್ಟದ್ದು ಮಾತ್ರ ಅತ್ಯಂತ ವಿಷಾದನೀಯ ಸಂಗತಿ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಡಿನ ಒಳಿತಿಗೆ ಧಕ್ಕೆಯಾಗುವ ಸಂಗತಿಗಳನ್ನು ಸದನದಲ್ಲಿ ಪ್ರಶ್ನಿಸುವುದು, ನ್ಯಾಯ ಬದ್ಧವಾಗಿ ವಿರೋಧಿಸುವುದು, ಪ್ರಾಮಾಣಿಕ ತನಿಖೆಗೆ ಆಗ್ರಹಿಸುವುದು ಪ್ರತಿಪಕ್ಷಗಳ ಜವಾಬ್ದಾರಿ ಮತ್ತು ಕರ್ತವ್ಯವಾಗಿದ್ದು, ಅದನ್ನೇ ಬಿಜೆಪಿ ಸದಸ್ಯರು ಮಾಡಿದ್ದಾರೆ. ಸರ್ಕಾರ ಇದಕ್ಕೆ ಕಿವಿಗೊಡದೆ ಹಠಮಾರಿ ಧೋರಣೆ ತಾಳಿದರೆ ಸದನದಲ್ಲಿ ಹೋರಾಟ ಸಹಜ. ಆದರೆ ಈ ಪ್ರತಿಭಟನಾ ಸ್ವಾತಂತ್ರ್ಯವನ್ನೇ ಹತ್ತಿಕ್ಕುವ ದಮನಕಾರಿ ಆದೇಶ ಎಂಬಂತೆ ಸಭಾಧ್ಯಕ್ಷರು, ಆಡಳಿತ ಪಕ್ಷದವರ ಆಣತಿಗೆ ತಕ್ಕಂತೆ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿಯ ಹದಿನೆಂಟು ಶಾಸಕರನ್ನು ಆರು ತಿಂಗಳು ಕಾಲ ಅಮಾನತುಗೊಳಿಸುವುದು ಪ್ರಬುದ್ಧ ರಾಜಕೀಯ ಅಧ್ಯಾಯಕ್ಕೆ ಅಂತ್ಯ ಹಾಡಿರುವುದರ ಸಂಕೇತ. ಶಾಸಕರುಗಳು ರಾಜ್ಯದ ಆಯಾ ವಿಧಾನಸಭಾ ಕ್ಷೇತ್ರದ ಜನತೆಯ ಧ್ವನಿಯಾಗಿರುವವರು. ಅಂತಹ ಧ್ವನಿಯನ್ನೇ ಅಡಗಿಸುತ್ತಾ ಹೋದರೆ ಪ್ರಜಾಪ್ರಭುತ್ವಕ್ಕೆ ಬೆಲೆ ಎಲ್ಲಿದೆ?

ಮಾನ್ಯ ಸಭಾಧ್ಯಕ್ಷರು ಈ ಕೂಡಲೆ ಆಡಳಿತ ಪಕ್ಷದವರ ಒತ್ತಡಕ್ಕೆ ಮಣಿದು ನಿಯಮಬಾಹಿರವಾಗಿ ನೀಡಿರುವ ಅಮಾನತು ಆದೇಶವನ್ನು ಹಿಂತೆಗೆದುಕೊಂಡು ಸಭಾಧ್ಯಕ್ಷ ಪೀಠದ ಗೌರವವನ್ನು ಉಳಿಸಬೇಕು ಎಂದು ವೇದವ್ಯಾಸ ಕಾಮತ್‌ ಅವರು ಪತ್ರದಲ್ಲಿ ತಿಳಿಸಿದ್ದಾರೆ.