ಸಾರಾಂಶ
ದೇವದುರ್ಗ ತಾಪಂ ಸಭಾಂಗಣದಲ್ಲಿ ತಾಪಂ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ದೇವದುರ್ಗ
ತಾಲೂಕಿನಲ್ಲಿ ಕೆಲ ಇಲಾಖೆ ಅಧಿಕಾರಿಗಳು ಜನಸಾಮಾನ್ಯರಿಗೆ ದೊರಕುತ್ತಿಲ್ಲ ಎಂಬ ದೂರು ಕೇಳಿಬರುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಯಲ್ಲ. ಅನೇಕ ಬಾರಿ ತಿಳಿ ಹೇಳಿದರೂ ಸೇವಾ ನಡೆಯಲ್ಲಿ ಬದಲಾವಣೆಯಾಗದಿರುವುದು ನೋವಿನ ಸಂಗತಿ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಅಸಮಾಧಾನ ವ್ಯಕ್ತಪಡಿಸಿದರು.ಸ್ಥಳೀಯ ತಾಪಂ ಸಭಾಂಗಣದಲ್ಲಿ ಜರುಗಿದ ತ್ರೈಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲಿಸಿದರು. ಕೃಷಿ ಇಲಾಖೆ ಅಧಿಕಾರಿ ಗಳು ಇನ್ನೂ ಕ್ರೀಯಾಶೀಲರಾಗಬೇಕಾಗಿದೆ. ಬೆಳೆವಿಮಾ ಪ್ರಕರಣದಲ್ಲಿ ತನಿಖೆ ವರದಿ ಬರಲಿಲ್ಲ. ಭತ್ತ ಕಟಾವಿಗೆ ದಲ್ಲಾಳಿಗಳು ಹೆಚ್ಚಿನ ದರ ಮತ್ತು ಬೆಳೆಗೆ ಕಡಿಮೆ ದರ ನೀಡುವ ಕುರಿತು ದೂರುಗಳು ಕೇಳಿಬಂದಿವೆ. ಕೃಷಿ ಪರಿಕರಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಿ. ಪ.ಪಂಗಡ ಮತ್ತು ಪ.ಜಾತಿಗೆ ಮೀಸಲಾದ ಸೌಲಭ್ಯಗಳು ಅನ್ಯರ ಪಾಲಾಗದಂತೆ ಎಚ್ಚರಿಕೆ ವಹಿಸಿ, ಸಕಾಲಕ್ಕೆ ರೈತರಿಗೆ ಸೂಕ್ತ ಸೌಲಭ್ಯ ಒದಗಿಸಲು ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ ನಾಯಕರಿಗೆ ಸಭೆಯಲ್ಲಿ ಸೂಚಿಸಲಾಯಿತು.ಶಾಸಕರ ಕಚೇರಿ ಪ್ರಾರಂಭಿಸಲು ಅನೇಕ ಬಾರಿ ಕಟ್ಟಡ ಒದಗಿಸಲು ಸೂಚಿಸಲಾಗಿದ್ದರೂ 2 ವರ್ಷ ಕಳೆಯುತ್ತಿದ್ದರೂ ಒದಗಿಸಿರುವುದು ಸೋಜಿಗದ ಸಂಗತಿಯಾಗಿದೆ. ಯಾಕೆ ನಿಮಗೆ ಮನಸ್ಸಿಲ್ಲವೇ ಅಥವಾ ಜನರಿಂದ ನನಗೆ ಅನಿಸಲು ತಮ್ಮ ಅನಿಸಿಕೆಯಾಗಿದೆಯೇ? ಎಂದು ಶಾಸಕಿ ಪ್ರಶ್ನಿಸಿದಾಗ ಸಭೆ ಮೌನಕ್ಕೆ ಶರಣಾಗಿತ್ತು.ಕ್ಷೇತ್ರದಲ್ಲಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕೆಲ ಅಧಿಕಾರಿಗಳಿಂದ ಶಿಷ್ಟಾಚಾರ ಉಲ್ಲಂಘನೆಯಾಗುತ್ತಿದೆ. ಸಭೆ-ಸಮಾರಂಭಗಳಿಗೆ ಅನೇಕ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಗೈರು ಇರುವುದು ಸಾಮಾನ್ಯವಾಗಿ ಬಿಟ್ಟಿದೆ. ಗೈರಾದವರ ಮೇಲೆ ಕ್ರಮ ಜರುಗಿಸಲು ಮೇಲಧಿ ಕಾರಿಗಳಿಗೆ ಪತ್ರ ಬರೆಯುವಂತೆ ಶಾಸಕರು ಸೂಚಿಸಿದರು.ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ನಾನಾ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.