ಧರ್ಮಸ್ಥಳ ತೇಜೋವಧೆ ಆರೋಪಿಗಳ ವಿರುದ್ಧ ಕಠಿಣ ಕ್ರಮ: ಶಾಸಕ ಕೊಡ್ಗಿ ಆಗ್ರಹ

| Published : Aug 22 2025, 02:00 AM IST

ಸಾರಾಂಶ

ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನವನ್ನು ಖಂಡಿಸಿ ಗುರುವಾರ ಕುಂದಾಪುರ ಶಾಸ್ತ್ರೀ ವೃತ್ತದ ಬಳಿ ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆ ಕುಂದಾಪುರ ನೇತೃತ್ವದಲ್ಲಿ ಜನಾಗ್ರಹ ಸಭೆ ನೆರವೇರಿತು.

ಕುಂದಾಪುರ: ಸೌಜನ್ಯ ಪ್ರಕರಣ ಮುಂದಿಟ್ಟುಕೊಂಡು ಧಾರ್ಮಿಕ ಪುಣ್ಯ ಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ವಿರುದ್ಧ ಮಾಡುತ್ತಿರುವ ಅಪಪ್ರಚಾರ ಖಂಡನೀಯ. ಇಂತಹ ಆಧಾರ ರಹಿತವಾದ ಅಪಪ್ರಚಾರದಲ್ಲಿ ತೊಡಗಿಕೊಂಡ ವ್ಯಕ್ತಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಕುಂದಾಪುರ ಶಾಸಕ ಎ ಕಿರಣ್ ಕುಮಾರ್ ಕೊಡ್ಗಿ ಆಗ್ರಹಿಸಿದ್ದಾರೆ.

ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನವನ್ನು ಖಂಡಿಸಿ ಗುರುವಾರ ಇಲ್ಲಿನ ಶಾಸ್ತ್ರೀ ವೃತ್ತದ ಬಳಿ ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆ ಕುಂದಾಪುರ ನೇತೃತ್ವದಲ್ಲಿ ನಡೆದ ಜನಾಗ್ರಹ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಕಟ್ಕೆರೆ ಪ್ರೇಮಾನಂದ ಶೆಟ್ಟಿ ಮಾತನಾಡಿ, ಸೌಜನ್ಯ ಕೊಲೆ, ಅತ್ಯಾಚಾರ ನೆಪವಾಗಿಸಿಕೊಂಡು ಇಡೀ ದೇಶದಾದ್ಯಂತ ಹೆಸರು ಗಳಿಸಿದ, ಸಾಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಹಿಂದೂ ಧರ್ಮದ ಶ್ರದ್ದಾಕೇಂದ್ರವನ್ನು ಗುರಿಯಾಗಿಸಿ ಅಪಚಾರಗೊಳಿಸಲಾಗುತ್ತಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ಇಂತಹ ಕ್ಷೇತ್ರದ ಬಗ್ಗೆ ಅಪಪ್ರಚಾರಗಳು ನಡೆಯುತ್ತಿರುವ ಸಂದರ್ಭದಲ್ಲಿ ನಾವೆಲ್ಲರೂ ಸ್ವಹಿತಾಸಕ್ತಿಯಿಂದ ಹೋರಾಟ ಮಾಡಲು ಮುಂದೆ ಬರಬೇಕು ಎಂದು ಕರೆ ನೀಡಿದರು.ಜಿಲ್ಲಾ ಕಸಪಾ ಸ್ಥಾಪಕಾಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್, ಜನಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೆಬ್ರಿ, ಧಾರ್ಮಿಕ ಮುಂದಾಳು ಮಲ್ಯಾಡಿ ಶಿವರಾಮ್ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ, ಪ್ರಸಂಗಕರ್ತ ಬಸವರಾಜ್ ಶೆಟ್ಟಿಗಾರ್, ಸಾಮಾಜಿಕ ಹೋರಾಟಗಾರ ಶಂಕರ್ ಅಂಕದಕಟ್ಟೆ ಮತ್ತಿತರರು ಮಾತನಾಡಿದರು.ಪುರಸಭೆಯ ಅಧ್ಯಕ್ಷ ಮೋಹನ್‌ದಾಸ್ ಶೆಣೈ, ಪ್ರಮುಖರಾದ ಸುಬ್ರಹ್ಮಣ್ಯ ಶೆಟ್ಟಿ, ಯುಎಸ್ ಶೆಣೈ, ರಥಶಿಲ್ಪಿ ರಾಜಗೋಪಾಲಾಚಾರ್ಯ, ಅತುಲ್ ಕುಮಾರ್, ಅಶೋಕ್ ಕುಮಾರ್ ಕೊಡ್ಗಿ, ಅಶೋಕ್ ಕೆರೆಕಟ್ಟೆ, ಮಂಜು ಬಿಲ್ಲವ, ಪ್ರದೀಪ್ ಶೆಟ್ಟಿ, ಬಶೀರ್ ಸಾಹೇಬ್ ಪ್ಲೆಸೆಂಟ್, ಸುರೇಶ್ ಶೆಟ್ಟಿ ಗೋಪಾಡಿ, ವಕೀಲರಾದ ಉಮೇಶ್ ಶೆಟ್ಟಿ ಶಾನ್ಕಟ್ಟು, ರಾಜೇಶ್ ಕಾವೇರಿ ವೇದಿಕೆಯಲ್ಲಿದ್ದರು.ಬೃಹತ್ ಕಾಲ್ನಡಿಗೆ ಜಾಥಾ:ಜನಾಗ್ರಹ ಸಭೆಯ ಬಳಿಕ ಪುಣ್ಯ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪರ ಘೋಷಣೆಗಳನ್ನು ಕೂಗುತ್ತಾ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ನಗರದ ಪ್ರಮುಖ ರಸ್ತೆಯ ಮೂಲಕ ಶಾಸ್ತ್ರೀ ವೃತ್ತದಿಂದ ಆಡಳಿತ ಸೌಧದವರೆಗೆ ಬೃಹತ್ ಕಾಲ್ನಡಿಗೆ ಜಾಥಾದಲ್ಲಿ ಸಾಗಿದರು. ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮೀ ಎಸ್.ಆರ್. ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕುಂದಾಪುರ ಗ್ರಾಮಾಂತರ ಠಾಣೆಯ ವೃತ್ತನಿರೀಕ್ಷಕ ಜಯರಾಮ್ ಗೌಡ, ಕುಂದಾಪುರ ನಗರ ಠಾಣೆಯ ಪಿಎಸ್‌ಐ ನಂಜಾ ನಾಯ್ಕ್, ಸಂಚಾರ ಠಾಣೆಯ ಪಿಎಸ್‌ಐ ಸುದರ್ಶನ್ ಹಾಗೂ ಸಿಬ್ಬಂದಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದರು.