ರಾಣಿಬೆನ್ನೂರಿನಲ್ಲಿ ಇ- ಖಾತಾ ಅಭಿಯಾನಕ್ಕೆ ಶಾಸಕ ಕೋಳಿವಾಡ ಚಾಲನೆ

| Published : Feb 24 2025, 12:30 AM IST

ರಾಣಿಬೆನ್ನೂರಿನಲ್ಲಿ ಇ- ಖಾತಾ ಅಭಿಯಾನಕ್ಕೆ ಶಾಸಕ ಕೋಳಿವಾಡ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಂದಾಯ ಭೂಮಿ ಹಾಗೂ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಆಗದ ಬಡಾವಣೆಗಳಲ್ಲಿ ನಿವೇಶನ ಹೊಂದಿರುವರು, ಮನೆ ಕಟ್ಟಿಕೊಂಡವರಿಗೆ ಅನುಕೂಲವಾಗಲೆಂದು ರಾಜ್ಯ ಸರ್ಕಾರ ಬಿ- ಖಾತಾ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ರಾಣಿಬೆನ್ನೂರು: ದಶಕಗಳಿಂದ ಆಗದ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿರುವುದು ಸಂತಸದ ವಿಚಾರವಾಗಿದೆ. ಇದರಿಂದ ಸಾವಿರಾರು ಬಡಕುಟುಂಬಗಳ ಕನಸು ಈಡೇರಿದಂತಾಗುತ್ತದೆ. ಬಿ-ಖಾತಾ ಅಭಿಯಾನವನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಬೇಕಾದ ಅವಶ್ಯಕತೆಯಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಇಲ್ಲಿಯ ನಗರಸಭೆ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಇ- ಖಾತಾ ವಿತರಣೆ ಹಾಗೂ ಜಾಗೃತಿ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ಕಂದಾಯ ಭೂಮಿ ಹಾಗೂ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಆಗದ ಬಡಾವಣೆಗಳಲ್ಲಿ ನಿವೇಶನ ಹೊಂದಿರುವರು, ಮನೆ ಕಟ್ಟಿಕೊಂಡವರಿಗೆ ಅನುಕೂಲವಾಗಲೆಂದು ರಾಜ್ಯ ಸರ್ಕಾರ ಬಿ-ಖಾತಾ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಹಲವು ವರ್ಷಗಳಿಂದ ನಮೂನೆ-3 ಸಿಗದೇ ಅತಂತ್ರ ಸ್ಥಿತಿಯಲ್ಲಿದ್ದ ಬಡ, ಮಧ್ಯಮ ವರ್ಗದವರಿಗೆ ಇದರಿಂದ ದೊಡ್ಡ ಉಪಕಾರ ಆಗಲಿದೆ. ನಗರಸಭೆ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಜನರಿಗೆ ಅಭಿಯಾನದ ಕುರಿತು ಸೂಕ್ತ ತಿಳಿವಳಿಕೆ ನೀಡಿ ಯೋಜನೆಯ ಸದುಪಯೋಗ ಪಡೆಯಲು ತಿಳಿಸಬೇಕು ಎಂದರು.

ಮೇ 10ರ ವರೆಗೆ ಇ-ಖಾತಾ ಅಭಿಯಾನ ನಡೆಯಲಿದ್ದು, ಅದರ ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲು ಆಗುವುದಿಲ್ಲ. ನಿಗದಿತ ದಿನದ ನಂತರ ತಂತ್ರಾಂಶ ಕೊನೆಗೊಳ್ಳಲಿದ್ದು, ತಮ್ಮ ಆಸ್ತಿಗಳಿಗೆ ಖಾತೆ ಹೊಂದಬೇಕು. ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೆ ಇ-ಖಾತಾ ನೀಡುವ ಪ್ರಕ್ರಿಯೆ ಮುಗಿಯಲಿದೆ ಎಂದರು.

ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ ಮಾತನಾಡಿ, ಪ್ರತಿಯೊಂದು ಆಸ್ತಿಗೂ ಇ-ಖಾತಾ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲ ರೀತಿಯ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆ ನಿರ್ಧರಗೊಳಿಸಿ ಪಾವತಿಸಿಕೊಳ್ಳಲಾಗಿದೆ. ನಂತರ ಆಸ್ತಿ ಮಾಲೀಕರಿಂದ ಅವಶ್ಯಕ ದಾಖಲೆಗಳನ್ನು ಪಡೆದು ಇ-ಖಾತಾ ದಾಖಲೆ ನೀಡಲಾಗುವುದು.

ಸರ್ಕಾರಿ, ಅರೆಸರ್ಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ಒಡೆತನದಲ್ಲಿರುವ ಆಸ್ತಿಗಳನ್ನು ಹೊರತುಪಡಿಸಿ, ಇನ್ನುಳಿದ ಎಲ್ಲ ರೀತಿಯ ಆಸ್ತಿಗಳಿಗೂ ಇ-ಖಾತಾ ಕಡ್ಡಾಯ. ಕಟ್ಟಡ ಹಾಗೂ ನಿವೇಶನಗಳ ಮಾಲೀಕರು, ಆಸ್ತಿಗಳಿಗೆ ಸಂಬಂಧಪಟ್ಟಂತೆ ನೋಂದಾಯಿತ ಪತ್ರಗಳು, ಆಸ್ತಿಯ ಛಾಯಾಚಿತ್ರ, ಮಾಲೀಕರ ಭಾವಚಿತ್ರ, ಮಾಲೀಕರ ಗುರುತಿನ ಚೀಟಿ, ಪಾನ್ ಕಾರ್ಡ್, ರೇಷನ್‌ ಕಾರ್ಡ್, ನಮೂನೆ 15 (ಇಸಿ), ವಿದ್ಯುತ್ ಬಿಲ್, ಕಟ್ಟಡ ಪರವಾನಗಿ ಪತ್ರ, ಅನುಮೋದಿತ ನಕ್ಷೆ, ಬಿನ್‌ಶೇತ್ಕಿ ನಕಲು ಪ್ರತಿ, ಏಕ ನಿವೇಶನ, ಬಹುನಿವೇಶನಗಳ ತಾಂತ್ರಿಕ ಅನುಮೋದನೆ ನಕ್ಷೆ, ಸಿಟಿಎಸ್ ಉತಾರ, ಕಂದಾಯ ಪಾವತಿಸಿದ ರಶೀದಿ ಹಾಗೂ ಇತರ ಅವಶ್ಯಕ ದಾಖಲೆಗಳನ್ನು ಹಾಜರುಪಡಿಸಬೇಕು.

ಅನಧಿಕೃತ ಆಸ್ತಿಗಳಿಗೆ ಮೊದಲನೇ ಬಾರಿಗೆ ತೆರಿಗೆಯ ಎರಡು ಪಟ್ಟು ವಿಧಿಸಲಾಗುವುದು. ಆನಂತರದ ವರ್ಷದಲ್ಲಿ ನಿಯಮಿತ ತೆರಿಗೆಯನ್ನು ತುಂಬಬೇಕು ಎಂದರು.

ನಗರಸಭೆ ಅಧ್ಯಕ್ಷ ಚಂಪಕ ಬಿಸಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಾಗರಾಜ ಪವಾರ, ಕಂದಾಯ ಅಧಿಕಾರಿ ವಸಂತಕುಮಾರ ರೆಡ್ಡಿ, ಕೋಟೆಪ್ಪ ಗೋಣಿಬಸಮ್ಮನವರ, ವ್ಯವಸ್ಥಾಪಕ ಮಂಜುನಾಥ ಹಾಗೂ ನಗರಸಭೆ ಸದಸ್ಯರು ಇದ್ದರು.