ಸಾರಾಂಶ
ಕನ್ನಡಪ್ರಭ ವಾರ್ತೆ ಮಾಗಡಿ
ರಾಜ್ಯ ಸರ್ಕಾರ ನಗರಗಳಲ್ಲಿ ಎಲ್ಇಡಿ ದೀಪ ಅಳವಡಿಸುವ ಹಿನ್ನೆಲೆಯಲ್ಲಿ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ಆಧಾರದ ಅಡಿ ಎಲ್ಇಡಿ ದೀಪ ಅಳವಡಿಕೆಯ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.ಪಟ್ಟಣದ ಕಲ್ಯಾಗೇಟ್ ವೃತ್ತದ ಬಳಿ ನೂತನ ಎಲ್ಇಡಿ ದೀಪ ಅಳವಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ರಾಜ್ಯ ಸರ್ಕಾರ ಎಲ್ಲಾ ನಗರ ವ್ಯಾಪ್ತಿಯಲ್ಲಿ ಎಲ್ಇಡಿ ದೀಪಗಳನ್ನು ಅಳವಡಿಸಲು ಹೊರಗುತ್ತಿಗೆ ನೀಡಿದ್ದು, ಮಾಗಡಿ ಪಟ್ಟಣಕ್ಕೂ ಕೂಡ ಈಗ 2 ಸಾವಿರ ಎಲ್ಇಡಿ ದೀಪ ಅಳವಡಿಕೆ ಮಾಡಲು ಗುತ್ತಿಗೆ ನೀಡಲಾಗಿದೆ. ಆದ್ದರಿಂದ ಹೆಚ್ಚುವರಿ ಎರಡು ಸಾವಿರ ಎಲ್ಇಡಿ ದೀಪಗಳು ಬೇಕಿದೆ ಎಂದು ತಿಳಿಸಲಾಗಿದ್ದು, ಮುಖ್ಯರಸ್ತೆ, ಸರ್ಕಲ್ ಹಾಗೂ ಒಳ ರಸ್ತೆಗಳಲ್ಲಿ ವಿವಿಧ ಪ್ರಕಾರದ ಎಲ್ಇಡಿ ದೀಪಗಳನ್ನು ಅಳವಡಿಸಿ ರಾತ್ರಿ ವೇಳೆ ಸಾರ್ವಜನಿಕರಿಗೆ ಅನುಕೂಲ ಮಾಡಲಾಗುತ್ತಿದೆ, ಎಲ್ಇಡಿ ದೀಪ ಬಳಕೆಯಿಂದ ಶೇ. 50ರಷ್ಟು ವಿದ್ಯುತ್ ಉಳಿತಾಯ ಮಾಡಬಹುದಾಗಿದೆ. ಈ ದೀಪಗಳ ನಿರ್ವಹಣೆ ಕೂಡ ಗುತ್ತಿಗೆದಾರರೇ ಮಾಡಲಿದ್ದಾರೆ ಎಂದು ತಿಳಿಸಿದರು.
ಕುಟುಂಬ ಸಮೇತರಾಗಿ ಕುಂಭಮೇಳದಲ್ಲಿ ಪುಣ್ಯಸ್ನಾನ:144 ವರ್ಷಗಳಿಗೆ ಒಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿ, ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದು, ತಾಲೂಕಿನ ಜನತೆಗೆ ಒಳಿತಾಗುವ ನಿಟ್ಟಿನಲ್ಲಿ ಕುಂಭಮೇಳದಲ್ಲಿ ಭಾಗವಹಿಸಿದ್ದೇನೆ ಎಂದು ಬಾಲಕೃಷ್ಣ ತಿಳಿಸಿದರು.
ಮಹಾರಾಷ್ಟ್ರದ ಪುಂಡರು ಸರ್ಕಾರಿ ಬಸ್ ನಿರ್ವಾಹಕರಿಗೆ ಹಲ್ಲೆ ನಡೆಸಿದ ವಿಚಾರವಾಗಿ, ನಮ್ಮ ಸರ್ಕಾರ ಇಂತಹ ಗಲಾಟೆಗಳನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಹೊಂದಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಶಾಸಕರು ಉತ್ತರಿಸಿದರು.ಬೇಸಿಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿರುವ ಬಗ್ಗೆ ಈಗಾಗಲೇ ಅಧಿಕಾರಿಗಳು ಮತ್ತು ಪುರಸಭಾ ಸದಸ್ಯರ ಜೊತೆ ಚರ್ಚೆ ಮಾಡಿದ್ದು, ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ಕ್ರಮಗಳನ್ನು ವಹಿಸಲಾಗುತ್ತದೆ ಎಂದು ಬಾಲಕೃಷ್ಣ ಹೇಳಿದರು.
ಮೂರು ತಿಂಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಚುನಾವಣೆಗೆ ನಮ್ಮ ಪಕ್ಷ ಸಿದ್ಧವಾಗಿದೆ ಎಂದು ಬಾಲಕೃಷ್ಣ ಹೇಳಿದರು.ಪುರಸಭಾ ಅಧ್ಯಕ್ಷೆ ರಮ್ಯಾ ನರಸಿಂಹಮೂರ್ತಿ, ಉಪಾಧ್ಯಕ್ಷ ರಿಯಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ರಂಗಹನುಮಯ್ಯ, ಕಾಂತರಾಜು, ಹೇಮಲತಾ, ಬಿಡಿಸಿಸಿ ಬ್ಯಾಂಕ್ ನಾಮ ನಿರ್ದೇಶಿತ ಎಂ.ಕೆ.ಧನಂಜಯ್ಯ, ಶೈಲಜಾ, ರಘು, ಮಂಡಿ ಗುರು, ವನಜ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.