ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಲಕ್ಷ್ಮೀನಾರಾಯಣ್ ಅವರಿಂದ ತಲೆ ಮೇಲೆ ಕೊಡ ಹೊತ್ತು ಪ್ರತಿಭಟನೆ

| Published : Mar 27 2024, 01:07 AM IST

ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಲಕ್ಷ್ಮೀನಾರಾಯಣ್ ಅವರಿಂದ ತಲೆ ಮೇಲೆ ಕೊಡ ಹೊತ್ತು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಜೀವನದಿಯಾಗಿರುವ ಹೇಮಾವತಿ ನದಿಯಿಂದ ನಾಗಮಂಗಲ ಶಾಖಾ ನಾಲೆ ಮೂಲಕ ನೀರು ಹರಿಸದೇ ಸರ್ಕಾರ ರೈತರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಖಾಲಿ ಕೊಡ ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಭಾಗಿಯಾಗಿದ್ದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಜೀವನದಿಯಾಗಿರುವ ಹೇಮಾವತಿ ನದಿಯಿಂದ ನಾಗಮಂಗಲ ಶಾಖಾ ನಾಲೆ ಮೂಲಕ ನೀರು ಹರಿಸದೇ ಸರ್ಕಾರ ರೈತರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಖಾಲಿ ಕೊಡ ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಭಾಗಿಯಾಗಿದ್ದರು. ಜೆಡಿಎಸ್ ಮತ್ತು ಬಿಜೆಪಿಯ ಸಮನ್ವಯ ಸಭೆ ಆದ ನಂತರ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ನೂರಾರು ಕಾರ್ಯಕರ್ತರು ತಲೆಯ ಮೇಲೆ ಖಾಲಿ ಕೊಡಗಳನ್ನು ಹೊತ್ತು ಪಾದಯಾತ್ರೆ ಮೂಲಕ ಹೇಮಾವತಿ ಕಚೇರಿಗೆ ತೆರಳಿದರು. ಪ್ರತಿಭಟನೆ ನಡೆಸಿದರು.

ಕುಡಿಯುವ ನೀರಿಗೆ ತತ್ವಾರವಿರುವ ದಬ್ಬೇಘಟ್ಟ ಹೋಬಳಿ ಮತ್ತು ಮಾಯಸಂದ್ರ ಹೋಬಳಿಯ ಮೂಲಕ ಹಾದು ಹೋಗುವ ನಾಗಮಂಗಲ ನಾಲೆಗೆ ನೀರನ್ನು ಹರಿಸಿ ಕೆರೆ ಕಟ್ಟೆಗಳನ್ನೂ ಸಹ ತುಂಬಿಸಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಆಗ್ರಹಿಸಿದರು. ರೈತಾಪಿಗಳು ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ. ಎಲ್ಲಾ ಕೆರೆ ಕಟ್ಟೆಗಳು ಬತ್ತಿ ಹೋಗಿವೆ. ಜನ-ಜಾನುವಾರುಗಳಿಗೆ ಕುಡಿವ ನೀರಿಗೂ ತತ್ವಾರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನುಷ್ಯರಲ್ಲವೇ?

ತುಮಕೂರಿನ ಜನರು ಮಾತ್ರ ಮನುಷ್ಯರಾ? ನಾವು ಮನುಷ್ಯರಲ್ಲವಾ? ತುಮಕೂರು ಶಾಖಾ ನಾಲೆಗೆ ಮಾತ್ರ ನೀರು ಬಿಡ ಲಾಗಿದೆ. ನಾಗಮಂಗಲ ಶಾಖಾ ನಾಲೆಗೆ ಏಕೆ ನೀರು ಬಿಡಲಾಗುತ್ತಿಲ್ಲ. ಇಲ್ಲಿಯ ಜನರು ಬದುಕುವುದು ಬೇಡವಾ? ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಮಾವತಿ ಇಲಾಖಾ ಅಧೀಕ್ಷಕಿ ಸುವರ್ಣ ಅವರನ್ನು ತರಾಟೆಗೆ ತೆಗೆದುಕೊಂಡರು. ಇನ್ನು ಮೂರ್‍ನಾ ಲ್ಕು ದಿನಗಳಲ್ಲಿ ಹೇಮಾವತಿ ನೀರನ್ನು ನಾಗಮಂಗಲ ಶಾಖಾ ನಾಲೆಗೆ ಬಿಡದಿದ್ದಲ್ಲಿ ಸಹಸ್ರಾರು ರೈತರೊಂದಿಗೆ ಪ್ರತಿಭಟನೆ ಮಾಡುವುದಾಗಿ ಶಾಸಕರು ಎಚ್ಚರಿಕೆ ನೀಡಿದರು.

ದಬ್ಬೇಘಟ್ಟ ರಸ್ತೆಯಲ್ಲಿರುವ ಹೇಮಾವತಿ ಇಲಾಖೆಗೆ ಶಾಸಕ ಎಂ.ಟಿ.ಕೃಷ್ಣಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾ ಗುವುದು ಎಂಬ ಮಾಹಿತಿಯನ್ನು ಆಧರಿಸಿ ಹೇಮಾವತಿ ಕಚೇರಿ ಮುಂಭಾಗ ಸಿಪಿಐ ಲೋಹಿತ್ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಇಲಾಖಾ ಗೇಟಿನ ಮುಂಭಾಗವೇ ಪ್ರತಿಭಟನಾಕಾರರನ್ನು ಪೋಲಿಸರು ತಡೆದರು. ಪ್ರತಿಭಟನಾಕಾರರ ಬಳಿಗೇ ಹೇಮಾವತಿ ಇಲಾಖೆಯ ಸೂಪರಿಂಟೆಂಡೆಂಟ್ ಆಫ್ ಇಂಜಿನಿಯರ್ (ಎಸ್ ಇ) ಸುವರ್ಣ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳಾದ ಬಿಂದಿ ಮತ್ತು ಶ್ರೀನಿವಾಸ್, ಸಹಾಯಕ ಇಂಜಿಯರ್ ಶಿವಪ್ರಸಾದ್ ಸೇರಿ ಹಲವು ಇಂಜಿನಿಯರ್ ಗಳು ಆಗಮಿಸಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಅಹವಾಲು ಆಲಿಸಿದರು. ಸಂಬಂಧಿಸಿದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಜೆಡಿಎಸ್ ತಾಲೂಕು ಅಧ್ಯಕ್ಷ ದೊಡ್ಡೇಗೌಡ, ಮುಖಂಡರಾದ ಮಂಗೀಕುಪ್ಪೆ ಬಸವರಾಜು, ಅರೆಮಲ್ಲೇನಹಳ್ಳಿ ಹೇಮಚಂದ್ರು, ವಿಠಲದೇವರಹಳ್ಳಿ ಹರೀಶ್, ಸೋಮಣ್ಣ, ಲೀಲಾವತಿ ಗಿಡ್ಡಯ್ಯ, ವೆಂಕಟೇಶ್ ಕೃಷ್ಣಪ್ಪ, ಬಿ.ಎಸ್.ದೇವರಾಜ್, ಥರಮನಕೋಟೆ ರಾಜು, ಜಡೆಯ ಕೃಷ್ಣಮೂರ್ತಿ ಸೇರಿದಂತೆ ಹಲವು ಮುಖಂಡರು ಇದ್ದರು.ಖಾಲಿ ಕೊಡ ಪಡೆದ ಮನೆಗೆ ನಡೆದ ಮಂದಿ

ಖಾಲಿ ಕೊಡ ಪ್ರದರ್ಶನಕ್ಕಾಗಿ ಜೆಡಿಎಸ್ ಕಚೇರಿ ಬಳಿ ವ್ಯವಸ್ಥಾಪಕರು ಸಾಕಷ್ಟು ಪ್ಲಾಸ್ಟಿಕ್ ನ ಕೊಡಗಳನ್ನು ತರಿಸಿದ್ದರು. ಪಾದಯಾತ್ರೆಯಲ್ಲಿ ಪಾಲ್ಗೊಂಡ ಮುಖಂಡರು ತಮ್ಮ ತಲೆಯ ಮೇಲೆ ಕೊಡಗಳನ್ನು ಇಟ್ಟುಕೊಂಡು ತೆರಳುತ್ತಿ ದ್ದರೆ, ಹಲವು ಮಹಿಳೆಯರು ಮತ್ತು ಪುರುಷರು ಖಾಲಿ ಪ್ಲಾಸ್ಟಿಕ್ ಕೊಡಗಳನ್ನು ಹೊತ್ತೊಯ್ಯಲು ಮುಗಿಬಿದ್ದರು. ಅತ್ತ ಪ್ರತಿಭಟ ನಾಕಾರರು ನೀರು ಬೇಕು ಎಂದು ಘೋಷಣೆ ಕೂಗುತ್ತಾ ಸಾಗುತ್ತಿದ್ದರೆ, ಇತ್ತ ಖಾಲಿ ಕೊಡ ಹೊತ್ತು ಹಲವಾರು ಮಂದಿ ಕಾಲು ಕಿತ್ತ ದೃಶ್ಯ ಕಂಡು ಬಂತು.