ನಗರದ ಶ್ರಮಿಕ ವರ್ಗಕ್ಕೆ ಗುಣಮಟ್ಟದ ವೈದ್ಯಕೀಯ ಸೇವೆ ಹಾಗೂ ಸಕಾಲಕ್ಕೆ ಅಗತ್ಯ ಔಷಧಿಗಳು ಸಿಗುವಂತೆ ನೋಡಿಕೊಳ್ಳುವುದು ಆರೋಗ್ಯ ಇಲಾಖೆ ಕರ್ತವ್ಯವಾಗಿದ್ದು, ಇದರಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಖಡಕ್‌ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಗರದ ಶ್ರಮಿಕ ವರ್ಗಕ್ಕೆ ಗುಣಮಟ್ಟದ ವೈದ್ಯಕೀಯ ಸೇವೆ ಹಾಗೂ ಸಕಾಲಕ್ಕೆ ಅಗತ್ಯ ಔಷಧಿಗಳು ಸಿಗುವಂತೆ ನೋಡಿಕೊಳ್ಳುವುದು ಆರೋಗ್ಯ ಇಲಾಖೆ ಕರ್ತವ್ಯವಾಗಿದ್ದು, ಇದರಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಖಡಕ್‌ ಎಚ್ಚರಿಕೆ ನೀಡಿದರು.

ಶಿವಮೊಗ್ಗ ನಗರ ವ್ಯಾಪ್ತಿಯ ಕಾರ್ಮಿಕರಿಂದ ಇಎಸ್‌ಐ ಡಿಸ್ಪೆನ್ಸರಿ ನಿರ್ವಹಣೆ ಹಾಗೂ ಚಿಕಿತ್ಸಾ ಲೋಪಗಳ ಕುರಿತು ಅಹವಾಲುಗಳು ಸ್ವೀಕರಿಸಿದ ಹಿನ್ನೆಲೆಯಲ್ಲಿ, ಗುರುವಾರ ಬೆಳಗ್ಗೆ ನಗರದ ಮೂರು ಇಎಸ್‌ಐ ಡಿಸ್ಪೆನ್ಸರಿಗೆ ಶಾಸಕರು ದಿಢೀರ್ ಭೇಟಿ ನೀಡಿ ಪ್ರಗತಿ ಹಾಗೂ ವ್ಯವಸ್ಥೆಯ ಪರಿಶೀಲನೆ ನಡೆಸಿದರು.

ಆಸ್ಪತ್ರೆಯ ಔಷಧಿ ವಿತರಣಾ ಕೇಂದ್ರ ಹಾಗೂ ಪ್ರಯೋಗಾಲಯಗಳನ್ನು ಖುದ್ದಾಗಿ ವೀಕ್ಷಿಸಿದ ಶಾಸಕರು, ಚಿಕಿತ್ಸೆಗೆ ಬಂದಿದ್ದ ಕಾರ್ಮಿಕರು ಮತ್ತು ಅವರ ಕುಟುಂಬಸ್ಥರೊಂದಿಗೆ ಸಮಾಲೋಚಿಸಿ ಸಮಸ್ಯೆಗಳನ್ನು ಆಲಿಸಿದರು.

ಕಾರ್ಮಿಕರಿಗೆ ಅಗತ್ಯವಿರುವ ಪ್ರಮುಖ ಔಷಧಿಗಳ ಕೊರತೆಯಾಗದಂತೆ ಮುಂಚಿತವಾಗಿಯೇ ದಾಸ್ತಾನು ಇಟ್ಟುಕೊಳ್ಳಬೇಕು. ಯಾವುದೇ ರೋಗಿಗಳನ್ನು ಹೊರಗಿನ ಮೆಡಿಕಲ್‌ಗಳಿಗೆ ಕಳುಹಿಸದೆ ಆಸ್ಪತ್ರೆಯಲ್ಲೇ ಉಚಿತವಾಗಿ ಔಷಧ ಒದಗಿಸಬೇಕು. ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸಮಯಪಾಲನೆ ಮಾಡಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಸೂಕ್ತ ಸಮಯದಲ್ಲಿ ಪ್ರಾಥಮಿಕ ಹಾಗೂ ತುರ್ತು ಚಿಕಿತ್ಸೆ ನೀಡಬೇಕು. ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ, ಕುಡಿಯುವ ನೀರು ಮತ್ತು ಸೌಕರ್ಯಗಳ ಕೊರತೆ ಇರದಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಶಾಸಕರು ತಾಕೀತು ಮಾಡಿದರು.