ಹನೂರಿನ ಹುಬ್ಬೆ ಹುಣಸೆ ಜಲಾಶಯಕ್ಕೆ ಶಾಸಕ ಮಂಜುನಾಥ್‌ ಬಾಗಿನ

| Published : Aug 30 2024, 01:00 AM IST

ಸಾರಾಂಶ

ವರುಣನ ಕೃಪೆಯಿಂದ ಹುಬ್ಬೆ ಹುಣಸೆ ಜಲಾಶಯ ಭರ್ತಿಯಾಗಿದ್ದಕ್ಕೆ ಬಾಗಿನ ಅರ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ನೀರಾವರಿ ಯೋಜನೆಯನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು. ಹನೂರಿನ ಹುಬ್ಬೆ ಹುಣಸೆ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹನೂರು

ವರುಣನ ಕೃಪೆಯಿಂದ ಹುಬ್ಬೆ ಹುಣಸೆ ಜಲಾಶಯ ಭರ್ತಿಯಾಗಿದ್ದಕ್ಕೆ ಬಾಗಿನ ಅರ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ನೀರಾವರಿ ಯೋಜನೆಯನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.

ಹನೂರು ತಾಲೂಕಿನ ಹುಬ್ಬೆ ಹುಣಸೆ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೌಗೋಳಿಕವಾಗಿ ದೊಡ್ಡದಾಗಿರುವ ಹನೂರು ವಿಧಾನಸಭಾ ಕ್ಷೇತ್ರದ ಕೆರೆ ಕಟ್ಟೆ ಜಲಾಶಯಗಳಲ್ಲಿ ನೀರನ್ನು ಶೇಖರಣೆ ಮಾಡಲು ಮತ್ತು ಒಂದು ಹನಿ ನೀರು ಸಹ ಪೋಲಾಗದಂತೆ ಕ್ರಮ ಕೈಗೊಳ್ಳಲು ನೀಲ ನಕ್ಷೆ ತಯಾರಿಸಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ನೀರಾವರಿ ಯೋಜನೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ.

ನೀರಾವರಿ ಅಧಿಕಾರಿಗಳಿಗೆ ಮನವಿ:

ಕ್ಷೇತ್ರದಲ್ಲಿರುವ ಜಲಾಶಯಗಳ ಸ್ಥಿತಿಗತಿ ಮತ್ತು ಅಲ್ಲಿನ ಎಡ ಮತ್ತು ಬಲ ದಂಡೆ ನಾಲೆಗಳ ಮತ್ತು ಸಣ್ಣ ಕಾಲುವೆಗಳ ಸ್ಥಿತಿಗತಿಯ ಬಗ್ಗೆ ನೀರು ಹಾಯಿಸಲು ರೈತರ ಜಮೀನುಗಳಿಗೆ ನೀರಾವರಿ ಕಲ್ಪಿಸುವ ಸದುದ್ದೇಶದಿಂದ ನೀರಾವರಿ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ 15ಕ್ಕೂ ಹೆಚ್ಚು ಬಾರಿ ಮನವಿ ಸಲ್ಲಿಸಲಾಗಿದೆ ನಿರಂತರವಾಗಿ ಇದರ ಬಗ್ಗೆ ಸಂಬಂಧಪಟ್ಟವರನ್ನು ನೀರಾವರಿ ಯೋಜನೆ ಅಭಿವೃದ್ಧಿಗೆ ಒತ್ತು ನೀಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದರು.ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಸಕರು ಹನೂರು ಕ್ಷೇತ್ರದಲ್ಲಿ 8 ಜಲಾಶಯಗಳು ಇವೆ. ಅದರಲ್ಲಿ ಒಂದು ಮಾತ್ರ ಹುಬ್ಬೆ ಹುಣಸೆ, ಜಲಾಶಯ ಭರ್ತಿಯಾಗಿದೆ. ಮಳೆಗೆ ಉಳಿದಂತೆ ಜಲಾಶಯಗಳ ರಾಮನ ಗುಡ್ಡ ಗುಂಡಲ್ ಜಲಾಶಯಕ್ಕೆ ಕೆರೆ ನೀರು ತುಂಬಿಸುವ ಯೋಜನೆಯ ಉಳಿಕೆ ಕಾಮಗಾರಿಯ ಬಗ್ಗೆ ಸಂಬಂಧಪಟ್ಟ ಇಲಾಖೆ ಸಚಿವರ ಹಾಗೂ ಅಧಿಕಾರಿಗಳ ಜೊತೆ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ರೈತರ ಜಮೀನಿಗೆ ನೀರು ಹರಿಸಿ:

ಹುಬ್ಬೆ ಹುಣಸೆ ಜಲಾಶಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿ ಭರ್ತಿಯಾಗಿದೆ. ಹೀಗಾಗಿ ಎಡ ಮತ್ತು ಬಲದಂಡೆ ನಾಲೆಗಳಿಗೆ ದುರಸ್ತಿ ಪಡಿಸಿ ರೈತರ ಜಮೀನುಗಳಿಗೆ ನೀರು ಹರಿಸುವ ಮೂಲಕ ಬರಿದಾಗಿರುವ ರೈತರ ಬಾವಿಗಳು ಮತ್ತು ಕೊಳವೆಬಾವಿಗಳಲ್ಲಿ ನೀರಿನ ಅಂತರ್ಜಲ ಹೆಚ್ಚಾಗುತ್ತದೆ. ಜೊತೆಗೆ ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ ಎಂದು ರೈತರು ಶಾಸಕರನ್ನು ಮನವಿ ಮಾಡಿದರು.

ಸರ್ಕಾರದ ಅನುದಾನ ಕೊರತೆ:

ಸರ್ಕಾರದಲ್ಲಿ ಅನುದಾನ ಕೊರತೆ ಇರುವುದರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ವಿವಿಧ ಯೋಜನೆಗಳಿಗೆ ಪೂರಕ ಕೆಲಸ ಮಾಡಲು ನನಗೆ ಜನರ ಆಶೀರ್ವಾದವಿದೆ. ಋಣ ತೀರಿಸಲು ಇದೊಂದು ಅವಕಾಶ. ಹೀಗಾಗಿ ಹಂತ ಹಂತವಾಗಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಶಿವಮೂರ್ತಿ ಹಾಗೂ ಚಾಮುಲ್ ನಿರ್ದೇಶಕರಾದ ಮಹದೇವ್ ಪ್ರಸಾದ್ (ಉದ್ನೂರ್ ಪ್ರಸಾದ್), ವಿಜಯಕುಮಾರ್, ರಾಜೇಗೌಡ, ಮಂಜೇಶ್, ಗುರುಮಲ್ಲಪ್ಪ, ರೈತ ಸಂಘದ ಅಧ್ಯಕ್ಷ ಅಮ್ಜದ್ ಖಾನ್‌, ಪ್ರಗತಿಪರ ಹೋರಾಟಗಾರ ಅಣಗಳ್ಳಿ ಬಸವರಾಜ್, ಜಗನ್ನಾಥ್ ನಾಯ್ಡು, ರೈತ ಮುಖಂಡರು ನೀರಾವರಿ ಅಧಿಕಾರಿಗಳು ಉಪಸ್ಥಿತರಿದ್ದರು.