ನಾಲೆಗಳ ಪರಿಶೀಲನೆ ನಡೆಸಿದ ಶಾಸಕ ಮಂಜುನಾಥ್‌

| Published : Jul 14 2024, 01:35 AM IST

ಸಾರಾಂಶ

ಹನೂರು ತಾಲೂಕಿನ ವಿವಿಧಡೆ ಶಾಸಕ ಮಂಜುನಾಥ್ ಭೇಟಿ ನೀಡಿ ನಾಲೆಗಳನ್ನು ಪರಿಶೀಲಿಸಿ ನೀರಾವರಿ ಅಧಿಕಾರಿಗಳಿಗೆ ರಾಡಿ ಮತ್ತು ಗಿಡಗಂಟಿಗಳನ್ನು ತೆರವುಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಿ ಎಂದು ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಹನೂರು

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮನಗುಡ್ಡೆ ಬಳಿ ಬರುವ ನಾಲೆಗಳು ಸೇರಿದಂತೆ ಅಜ್ಜಿಪುರ ಬಳಿ ಬರುವ ಉಡುತೊರೆ ಜಲಾಶಯದ ಎಡ ಮತ್ತು ಬಲ ದಂಡೆ ನಾಲೆಗಳನ್ನು ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ತೆರಳಿ ಶಾಸಕ ಎಂ.ಆರ್‌. ಮಂಜುನಾಥ್ ಅವರು ಪರಿಶೀಲನೆ ನಡೆಸಿದರು. ಬಹುತೇಕ ತಾಲೂಕಿನಲ್ಲಿರುವ ಜಲಾಶಯದ ಕಾಲುವೆಗಳು ರಾಡಿ ಹಾಗೂ ಗಿಡ ಗಂಟೆಗಳಿಂದ ಬೆಳೆದು ನಿಂತಿದ್ದು, ನೀರಾವರಿ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳುವ ನಾಲೆಗಳನ್ನು ಸ್ವಚ್ಛಗೊಳಿಸಲು ಕ್ರಿಯಾಯೋಜನೆ ತಯಾರಿಸಿ ತಕ್ಷಣ ದುರಸ್ತಿಯಾಗಿರುವ ನಾಲೆಗಳನ್ನು ಸರಿಪಡಿಸಿ ರೈತರ ಜಮೀನುಗಳಿಗೆ ನೀರನ್ನು ಬಿಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ನಾಲೆಗಳಲ್ಲಿ ಬರುವ ರೈತರ ಜಮೀನಿಗೆ ತೆರಳುವ ಕಿರು ಸೇತುವೆಗಳು ಸಹ ದುರಸ್ತಿಗೆ ಒಳಗಾಗಿ ರಾಡಿ ಮತ್ತು ಮಣ್ಣು ಮುಚ್ಚಿದ್ದು ಕೂಡಲೇ ಅದನ್ನು ಸರಿಪಡಿಸಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಬಿಡಲು ಅಧಿಕಾರಿಗಳು ಕ್ರಮ ಕೈಗೊಳ್ಳಿ ಎಂದು ನೀರಾವರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿವಿಧೆಡೆ ಪರಿಶೀಲನೆ: ರಾಮನ ಗುಡ್ಡೆ ಹಾಗೂ ಉಡುತೊರೆ ಜಲಾಶಯದ ರೈತರ ಜಮೀನಿಗೆ ತೆರಳುವ ನಾಲೆಗಳನ್ನು ಪರಿಶೀಲಿಸಲು ಬಸಪ್ಪನ ದೊಡ್ಡಿ, ಅಜ್ಜಿಪುರ, ಗಂಗನದೊಡ್ಡಿ, ಕೆ.ಗುಂಡಾಪುರ ಹಾಗೂ ಮಂಚಾಪುರ ಸೇರಿದಂತೆ ರಾಮಪುರ ಇನ್ನಿತರ ಗ್ರಾಮಗಳಲ್ಲಿ ಶಾಸಕ ಮಂಜುನಾಥ್ ಅಧಿಕಾರಿಗಳ ಜೊತೆ ತೆರಳಿ ಪರಿಶೀಲಿಸಿ ಕೂಡಲೇ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತುರ್ತಾಗಿ ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ತಿಳಿಸಿದರು.

ಜಲಾಶಯದ ನೀರು ಬಿಡಲು ರೈತರಿಂದ ಒತ್ತಾಯ: ಕರ್ನಾಟಕ ರಾಜ್ಯ ರೈತ ಸಂಘ ಹನೂರು ಘಟಕದ ಅಧ್ಯಕ್ಷ ಅಮ್ಜದ್ ಖಾನ್, ಶಾಸಕ ಎಂಆರ್ ಮಂಜುನಾಥ್ ಅವರನ್ನು ಭೇಟಿ ಮಾಡಿ ಜಲಾಶಯದಲ್ಲಿರುವ ನೀರನ್ನು ನಾಲೆಗಳಿಗೆ ಬಿಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿದರು. ಶಾಸಕರು ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ, ಇರುವ ಜಲಾಶಯದ ನೀರನ್ನು ನಾಲೆಗಳಿಗೆ ಬಿಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ಎಇಇ ನಿರಂಜನ್, ಎಇ ಅಭಿಲಾಶ್ ಹಾಗೂ ಲ್ಯಾಂಡರ್ಮಿ ಎಇಇ ಚಿಕ್ಕವೀರಯ್ಯ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಚಿನ್ನಣ್ಣ ಹಾಗೂ ಮುಖಂಡರಾದ ಚಿಂಚಳ್ಳಿ ಗುರುಮಲ್ಲಪ್ಪ, ಮಣಗಳ್ಳಿ ಶಿವಪ್ಪ, ಶಾಗ್ಯ ನಾಗೇಂದ್ರ ಬಾಬು ಹಾಗೂ ಉದ್ದನೂರು ಗಿರೀಶ್ ಮತ್ತು ಚಿನ್ನವೆಂಕಟ್ ಇನ್ನಿತರರು ಇದ್ದರು.