₹35 ಲಕ್ಷ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಚಾಲನೆ
---ಕನ್ನಡಪ್ರಭ ವಾರ್ತೆ ಹನೂರುತಾಲೂಕಿನ ದಶಕಗಳ ಬೇಡಿಕೆಯಾಗಿರುವ ಸ್ವಾಮಿಹಳ್ಳಕ್ಕೆ ಸೇತುವೆ ನಿರ್ಮಾಣ ಸಂಬಂಧ ಶಾಸಕ ಎಂ.ಆರ್. ಮಂಜುನಾಥ್ ಅವರು ಚಾಲನೆ ನೀಡಿದರು.
ಹನೂರು ಪಟ್ಟಣದ 11ನೇ ವಾರ್ಡಿನ ಬಳಿ ಬರುವ ಸ್ವಾಮಿಹಳ್ಳ ಕುರುಬರ ಸ್ಮಶಾನಕ್ಕೆ ತೆರಳುವ ಪ್ರಮುಖ ರಸ್ತೆ ಹಾಗೂ ರೈತರ ಜಮೀನುಗಳಿಗೆ ತೆರಳುವ ರಸ್ತೆ ಮಾರ್ಗವಿದು. ಪ್ರಕೃತಿವಿಕೋಪ ನಿಧಿಯಡಿ 25 ಲಕ್ಷ ರು. ಹಾಗೂ ವಿಶೇಷ ಅನುದಾನದಲ್ಲಿ 10 ಲಕ್ಷ ರು. ಸೇರಿದಂತೆ 35 ಲಕ್ಷ ರು. ವೆಚ್ಚದಲ್ಲಿ ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಮಂಜುನಾಥ್ ತಿಳಿಸಿದರು.ಮಳೆಗಾಲದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುವುದರಿಂದ ಇಲ್ಲಿರುವ ಸ್ಮಶಾನಕ್ಕೆ ಹೋಗುವುದು ಕಷ್ಟಕರವಾಗಿತ್ತು. ಈ ಬಗ್ಗೆ ಸೇತುವೆ ನಿರ್ಮಿಸುವಂತೆ ಬೇಡಿಕೆಗಳು ಬಂದಿತ್ತು. ಹೀಗಾಗಿ ರೈತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸುಸಜ್ಜಿತ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.
30 ಅಡಿ ಜಾಗ ಕೊಟ್ಟರೆ ಉತ್ತಮ ರಸ್ತೆ:
ಈ ಭಾಗದಲ್ಲಿ ನೂರಾರು ಎಕರೆ ಜಮೀನು ಇರುವುದರಿಂದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸರಿಯಾದ ಸಂಪರ್ಕವಿಲ್ಲ. ಹೀಗಾಗಿ ತಮ್ಮ ಜಮೀನಿನಿಂದ 30 ಅಡಿ ಜಾಗ ಕೊಟ್ಟರೆ ಉತ್ತಮ ಸುಸಜ್ಜಿತ ರಸ್ತೆ ನಿರ್ಮಿಸಲಾಗುವುದು. ಈಗ ಸೇತುವೆ ಕೆಲಸ ಶುರುವಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ರಸ್ತೆಯೂ ಆಗುತ್ತದೆ ಎಂದು ಶಾಸಕರು ಭರವಸೆ ಕೊಟ್ಟರು.
ಇದೇ ಸಂದರ್ಭದಲ್ಲಿ ಅಭಿಯಂತರ ಕಾರ್ತಿಕ್ ಹಾಗೂ ಮುಖಂಡ ರಾಜುಗೌಡ, ಮಂಜೇಶ, ಶಿವರಾಮ, ರಾಜುನಾಯ್ಡು, ರಾಮು ನಾಯ್ಡು, ಮೂರ್ತಿ ನಾಯ್ಡು, ರಾಜೇಂದ್ರ, ಮಲ್ಲಣ್ಣ ,ಅಮೀನ್ ಅನಂತು, ರಾಜೇಂದರ್, ವೆಂಕಟೇಶ್, ಡಾಬಾ ನಿಂಗಶೆಟ್ಟಿ, ನಟರಾಜು ಗೌಡ, ಗುತ್ತಿಗೆದಾರ ರಾಜೇಂದ್ರ ಪ್ರಸಾದ್ ಸೇರಿ ಹಲವರು ಉಪಸ್ಥಿತರಿದ್ದರು.---6ಸಿಎಚ್ಎನ್15
ಹನೂರಿನ ಸ್ವಾಮಿಹಳ್ಳ ಸೇತುವೆ ನಿರ್ಮಾಣಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಅವರು ಗುದ್ದಲಿ ಪೂಜೆ ನೆರವೇರಿಸಿದರು.