ಶಾಸಕ ಮುನಿರತ್ನ ಕೂಡಲೇ ರಾಜೀನಾಮೆ ನೀಡಲಿ

| Published : Sep 20 2024, 01:36 AM IST

ಸಾರಾಂಶ

ಒಕ್ಕಲಿಗ ಹಾಗೂ ಪರಿಶಿಷ್ಟ ಜಾತಿಯ ಹೆಣ್ಣು ಮಕ್ಕಳ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕ ಆರ್. ನರೇಂದ್ರ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಒಕ್ಕಲಿಗ ಹಾಗೂ ಪರಿಶಿಷ್ಟ ಜಾತಿಯ ಹೆಣ್ಣು ಮಕ್ಕಳ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕ ಆರ್. ನರೇಂದ್ರ ಆಗ್ರಹಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಾಮಾನ್ಯ ಜ್ಞಾನ ಇಲ್ಲದೆ ಇರುವ ಅವಿದ್ಯಾವಂತನು ಕೂಡ ಹೆಣ್ಣು ಮಕ್ಕಳ ವಿರುದ್ಧ ಅಸಭ್ಯವಾಗಿ ನಡೆದುಕೊಳ್ಳುವುದಿಲ್ಲ. ಆದರೆ ಶಾಸಕರಾಗಿರುವ ಮುನಿರತ್ನ ಹೆಣ್ಣು ಮಕ್ಕಳ ಬಗ್ಗೆ ಅಸಭ್ಯವಾಗಿ ಹಗುರವಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧ. ಭಾರತ ದೇಶದಲ್ಲಿ ಹೆಣ್ಣು ಮಕ್ಕಳಿಗೆ ತಾಯಿಯ ಸ್ಥಾನ ನೀಡಿದ್ದೇವೆ. ಅವರಿಗೆ ಗೌರವ ನೀಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಇಂತಹ ಹೆಣ್ಣುಮಕ್ಕಳ ಬಗ್ಗೆ ಗುತ್ತಿಗೆದಾರನ ಜೊತೆ ಅವಾಚ್ಯ ಶಬ್ದಗಳಿಂದ ಕೆಟ್ಟದಾಗಿ ನಿಂದಿಸಿ ಸಂಭಾಷಣೆ ಮಾಡಿರುವುದು ಪ್ರಯೋಗಾಲಯದಲ್ಲಿ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಒಂದೊಮ್ಮೆ ಆಡಿಯೋ ನಕಲಿಯಾಗಿದ್ದರೆ ಪೊಲೀಸರು ಇದನ್ನು ಹರಿಬಿಟ್ಟವರ ವಿರುದ್ಧವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಭಾರತಾಂಬೆಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ಬಿಜೆಪಿ ಶಾಸಕರೇ ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇವರ ವಿರುದ್ಧ ಪಕ್ಷ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದೊಮ್ಮೆ ಕ್ರಮ ಕೈಗೊಳ್ಳದಿದ್ದರೆ ಕಾಂಗ್ರೆಸ್ ಪಕ್ಷದಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ. ಇಂತಹ ನಾಚಿಕೆಗೆಟ್ಟ ನಾಯಕರಿಂದ ಬಿಜೆಪಿಗೆ ಶೋಭೆ ತರುವುದಿಲ್ಲ. ಈ ನಿಟ್ಟಿನಲ್ಲಿ ಮುನಿರತ್ನ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್, ಮಾಜಿ ಉಪಾಧ್ಯಕ್ಷ ಮಾದೇಶ್, ಮುಖಂಡರಾದ ರಾಜು, ಗೋವಿಂದೇಗೌಡ ಹಾಜರಿದ್ದರು.