ರಸ್ತೆ ಕಾಮಗಾರಿ ಪರಿಶೀಲಿಸಿದ ಶಾಸಕ ಎನ್.ಶ್ರೀನಿವಾಸ

| Published : Dec 15 2023, 01:30 AM IST

ಸಾರಾಂಶ

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಗಳಕುಪ್ಪೆ ರಸ್ತೆಗೆ ಮುಕ್ತಿ ದೊರೆಯುತ್ತಿದ್ದು, ಗುಣಮಟ್ಟದ ಕಾಮಗಾರಿ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.ಪಟ್ಟಣದ ಅಗಳಕುಪ್ಪೆ ರಸ್ತೆಯಲ್ಲಿ ರಾಜ್ಯ ಹೆದ್ದಾರಿ ಪ್ರಾಧಿಕಾರದಿಂದ 6.5 ಕೋಟಿ ವೆಚ್ಚದಲ್ಲಿ 5 ಕಿ.ಮೀ. ಡಾಂಬರ್ ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ನಗರದ ಹೃದಯ ಭಾಗದಲ್ಲಿರುವ ಈ ರಸ್ತೆ ತುಂಬಾ ಹದಗೆಟ್ಟಿತ್ತು, ಮಳೆಗಾಲದಲ್ಲಿ ಭಾರಿ ಗುಂಡಿಗಳ ಸಮಸ್ಯೆಯನ್ನು ಚುನಾವಣೆ ಪೂರ್ವದಲ್ಲಿ ಗಮನಿಸಿದ್ದೆ. ಆದ್ದರಿಂದ ಈ ರಸ್ತೆಗೆ ಮೊದಲ ಆದ್ಯತೆ ನೀಡಿದ್ದೇನೆ. ಗಡಿ ಪ್ರದೇಶಕ್ಕೆ ಈ ರಸ್ತೆ ಸಂಪರ್ಕ ಕಲ್ಪಿಸುವುದರಿಂದ ಗುಣಮಟ್ಟ ಕಾಯ್ದುಕೊಂಡು ಕಾಮಗಾರಿ ನಡೆಸುವಂತೆ ಸೂಚಿಸಿದ್ದು, ಹೆಚ್ಚುವರಿ ಅನುದಾನ ನೀಡುವ ಮೂಲಕ ರಸ್ತೆಯ ವಿಭಜಕದಲ್ಲಿ ವಿದ್ಯುತ್ ದೀಪ ಅಳವಡಿಕೆಗೂ ಸೂಚನೆ ನೀಡಿದ್ದೇನೆ ಎಂದರು.

ದಾಬಸ್ ಪೇಟೆಯ ಅಗಳಕುಪ್ಪೆ ರಸ್ತೆ ಕಾಮಗಾರಿ । 6.5 ಕೋಟಿ ವೆಚ್ಚದ 5 ಕಿ.ಮೀ. ಡಾಂಬರ್ ರಸ್ತೆ ಕಾಮಗಾರಿ ವೀಕ್ಷಣೆ

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಗಳಕುಪ್ಪೆ ರಸ್ತೆಗೆ ಮುಕ್ತಿ ದೊರೆಯುತ್ತಿದ್ದು, ಗುಣಮಟ್ಟದ ಕಾಮಗಾರಿ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.

ಪಟ್ಟಣದ ಅಗಳಕುಪ್ಪೆ ರಸ್ತೆಯಲ್ಲಿ ರಾಜ್ಯ ಹೆದ್ದಾರಿ ಪ್ರಾಧಿಕಾರದಿಂದ 6.5 ಕೋಟಿ ವೆಚ್ಚದಲ್ಲಿ 5 ಕಿ.ಮೀ. ಡಾಂಬರ್ ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ನಗರದ ಹೃದಯ ಭಾಗದಲ್ಲಿರುವ ಈ ರಸ್ತೆ ತುಂಬಾ ಹದಗೆಟ್ಟಿತ್ತು, ಮಳೆಗಾಲದಲ್ಲಿ ಭಾರಿ ಗುಂಡಿಗಳ ಸಮಸ್ಯೆಯನ್ನು ಚುನಾವಣೆ ಪೂರ್ವದಲ್ಲಿ ಗಮನಿಸಿದ್ದೆ. ಆದ್ದರಿಂದ ಈ ರಸ್ತೆಗೆ ಮೊದಲ ಆದ್ಯತೆ ನೀಡಿದ್ದೇನೆ. ಗಡಿ ಪ್ರದೇಶಕ್ಕೆ ಈ ರಸ್ತೆ ಸಂಪರ್ಕ ಕಲ್ಪಿಸುವುದರಿಂದ ಗುಣಮಟ್ಟ ಕಾಯ್ದುಕೊಂಡು ಕಾಮಗಾರಿ ನಡೆಸುವಂತೆ ಸೂಚಿಸಿದ್ದು, ಹೆಚ್ಚುವರಿ ಅನುದಾನ ನೀಡುವ ಮೂಲಕ ರಸ್ತೆಯ ವಿಭಜಕದಲ್ಲಿ ವಿದ್ಯುತ್ ದೀಪ ಅಳವಡಿಕೆಗೂ ಸೂಚನೆ ನೀಡಿದ್ದೇನೆ ಎಂದರು.

ಕಾಲ್ನಡಿಗೆಯಲ್ಲಿ ಕಾಮಗಾರಿ ವೀಕ್ಷಣೆ:

ಇನ್ನು ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ಮುಚ್ಚಿದ್ದು, ಶಾಸಕರು ಸುಮಾರು ಅರ್ಧ ಕಿ.ಮೀ ನಡೆದು ಕಾಮಗಾರಿ ಪರಿಶೀಲನೆ ನಡೆಸಿದರು. ಸಾರ್ವಜನಿಕರು ಖುದ್ದು ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸಲು ತಿಳಿಸಿದ್ದಲ್ಲದೆ, ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಆದಷ್ಟು ತ್ವರಿತವಾಗಿ ಕಾಮಗಾರಿ ನಡೆಸುವಂತೆಯೂ ಸೂಚನೆ ನೀಡಿದರು.

ಕಾಂಗ್ರೆಸ್ ಮುಖಂಡ ಅಗಳಕುಪ್ಪೆ ಗೋವಿಂದರಾಜು ಮಾತನಾಡಿ, ಈ ಹಿಂದೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಮೇಲೆ ಯಾವೊಬ್ಬ ಶಾಸಕರು ಕಾಮಗಾರಿ ನಡೆಯುವಾಗ ಗುಣಮಟ್ಟ ಪರಿಶೀಲಿಸಿದ ಉದಾಹರಣೆ ನಮ್ಮ ತಾಲೂಕಿನಲ್ಲಿಲ್ಲ. ಆದರೆ, ನಮ್ಮ ಶಾಸಕರು ಕಾಮಗಾರಿಯ ಗುಣಮಟ್ಟದ ಪರಿಶೀಲನೆಯ ಜೊತೆಗೆ ಜನರ ಅನುಕೂಲಕ್ಕಾಗಿ ಬೇಕಿರುವ ಬೀದಿ ದೀಪಗಳ ವ್ಯವಸ್ಥೆಗೆ ಅನುದಾನ ದೊರಕಿಸಿ ಕಾಮಗಾರಿಗೆ ಇನ್ನಷ್ಟು ವಿಶೇಷತೆ ಕಲ್ಪಿಸಿದ್ದಾರೆ ಎಂದರು.

ಈ ವೇಳೆ ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ಪಾರ್ಥ, ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಸುರೇಶ್, ಗುಣಶೇಖರ್, ಬೆಂಕಿ ಮಹದೇವ್, ಚಿಕ್ಕಣ್ಣ, ಗುತ್ತಿಗೆದಾರ ಚಂದ್ರಣ್ಣ ಸೇರಿದಂತೆ ಸ್ಥಳೀಯರಿದ್ದರು.

---

ಬಾಕ್ಸ್....

50-70 ಕೋಟಿಗೆ ಪ್ರಸ್ತಾವನೆ

ರಾಜ್ಯ ಸರ್ಕಾರಕ್ಕೆ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗೆ 50 ರಿಂದ 70 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದೇನೆ, ಅನುಮೋದನೆಗೆ ಕೊನೆಯ ಹಂತದಲ್ಲಿದೆ, ಅಧಿಕಾರಿಗಳ ಬೆನ್ನಿಗೆ ಬಿದ್ದು ಕೆಲಸ ಮಾಡಿಸುವ ಕಲೆ ಗೊತ್ತಿದೆ, ಗುಣಮಟ್ಟದ ಕಾಮಗಾರಿ ನನ್ನ ಗುರಿ ಎಂದರು.