ಬಿ-ಖಾತೆ ನೀಡಿ ಅನಧಿಕೃತ ಬಡಾವಣೆಗಳಿಗೆ ಬ್ರೇಕ್‌

| Published : Feb 21 2025, 12:47 AM IST

ಸಾರಾಂಶ

ಮುಂದಿನ ೩ ತಿಂಗಳಲ್ಲಿ ರಾಜ್ಯದೆಲ್ಲೆಡೆ ಇರುವ ಖಾತಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರಕಾರ ಮುಂದಾಗಿದೆ. ಈಗಾಗಲೇ ಪುರಸಭೆ, ಪಟ್ಟಣ ಪಂಚಾಯಿತಿ, ಮುಖ್ಯಾಧಿಕಾರಿಗಳು, ಯೋಜನಾ ಪ್ರಾಧಿಕಾರದ ಅಧ್ಯಕ್ಷರು, ನಿರ್ದೇಶಕರೊಂದಿಗೆ ಸಭೆ ನಡೆಸಲಾಗಿದ್ದು ,ಪುರಸಭೆ, ಗ್ರಾ.ಪಂ.ವ್ಯಾಪ್ತಿಯ ಹಳ್ಳಿಗಳಲ್ಲಿರುವ ಅನಧಿಕೃತ ಬಡಾವಣೆಗಳಿಗೆ ಅಂತ್ಯ ಹಾಡುವಂತೆ ಸೂಚನೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮಾಲೂರು

ರಾಜ್ಯದಲ್ಲಿ ಬಹುಕಾಲದ ಸಮಸ್ಯೆ ಎನಿಸಿರುವ ಅನಧಿಕೃತ ಬಡಾವಣೆಗಳಿಗೆ ಬ್ರೇಕ್ ಹಾಕಿ, ಒನ್‌ ಟೈಂ ಪರಿಹಾರ ಕೈಗೊಳ್ಳಲು ತೀರ್ಮಾನಿಸಿರುವ ರಾಜ್ಯ ಸರ್ಕಾರ ಮುಂದಿನ ಮೂರು ತಿಂಗಳು ವಿಶೇಷ ಅಭಿಯಾನದ ಮೂಲಕ ಬಿ-ಖಾತಾ ಹಂಚಿಕೆ ಮಾಡಲು ತೀರ್ಮಾನಿಸಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿ-ಖಾತಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯದಲ್ಲಿ ತಲೆ ಎತ್ತಿರುವ ಅನಧಿಕೃತ ಬಡಾವಣೆಗಳ ಸಮಸ್ಯೆಯನ್ನು ಬಗೆಹರಿಸಿ ಬಿ-ಖಾತಾ ಮಾಡಿಸಿಕೊಳ್ಳಲು ಕಂದಾಯ ಇಲಾಖೆಯು ಬುಧವಾರದಿಂದ ವಿಶೇಷ ಅಭಿಯಾನ ಆರಂಭಿಸಿದ್ದು, ರಾಜ್ಯಾದ್ಯಂತ ವಿಸ್ತರಣೆಯಾಗಿದೆ ಎಂದರು.

ಮೂರು ತಿಂಗಳು ಅಭಿಯಾನ

ಮುಂದಿನ ೩ ತಿಂಗಳಲ್ಲಿ ರಾಜ್ಯದೆಲ್ಲೆಡೆ ಇರುವ ಖಾತಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರಕಾರ ಮುಂದಾಗಿದೆ. ಈಗಾಗಲೇ ಪುರಸಭೆ, ಪಟ್ಟಣ ಪಂಚಾಯಿತಿ, ಮುಖ್ಯಾಧಿಕಾರಿಗಳು, ಯೋಜನಾ ಪ್ರಾಧಿಕಾರದ ಅಧ್ಯಕ್ಷರು, ನಿರ್ದೇಶಕರೊಂದಿಗೆ ಸಭೆ ನಡೆಸಲಾಗಿದ್ದು ,ಪುರಸಭೆ, ಗ್ರಾ.ಪಂ.ವ್ಯಾಪ್ತಿಯ ಹಳ್ಳಿಗಳಲ್ಲಿರುವ ಅನಧಿಕೃತ ಬಡಾವಣೆಗಳಿಗೆ ಅಂತ್ಯ ಹಾಡುವಂತೆ ಸೂಚನೆ ನೀಡಲಾಗಿದೆ. ಇನ್ನೂ ಮುಂದೆ ಅನಧಿಕೃತ ಬಡಾವಣೆಗಳಿಗೆ ಅವಕಾಶವಿಲ್ಲದಂತೆ ಬಿ-ಖಾತಾ ನೀಡಬೇಕು. ಮುಂದಿನ ೩ ತಿಂಗಳ ಒಳಗಾಗಿ ಅಭಿಯಾನದ ಮೂಲಕ ಖಾತಾ ವಿತರಣೆ ಕಾರ್ಯ ಪೂರ್ಣ ಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಅನಧಿಕೃತ, ರೆವಿನ್ಯೂ ಬಡಾವಣೆಗಳಲ್ಲಿ ಸೈಟು, ಮನೆ ಕಟ್ಟಿರುವವರಿಗೆ ತೊಂದರೆ ಆಗಬಾರದು. ಒಟ್ಟಾರೆಯಾಗಿ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲು ಏಕಕಾಲಿಕ ಪರಿಹಾರ ನೀಡಲಾಗುತ್ತಿದೆ ಎಂದ ಶಾಸಕರು ಗೊಂದಲಗಳಿಗೆ ಅವಕಾಶ ಮಾಡಿಕೊಡದಂತೆ ಇಂದಿನಿಂದಲೇ ಬಿ ಖಾತಾ ಅಭಿಯಾನವನ್ನು ಆರಂಭ ಮಾಡಿ ೩ ತಿಂಗಳೊಳಗಾಗಿ ಪೂರ್ಣಗೊಳಿಸಿ. ಅನಧಿಕೃತ ಬಡಾವಣೆ ತಲೆ ಎತ್ತದಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅನಧಿಕೃತ ಬಡಾವಣೆಗಳ ಸಕ್ರಮ

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕಾಯಿದೆಯ ಮೂಲಕ ಅನಧಿಕೃತ ಬಡಾವಣೆಗಳು ಅಂತ್ಯಗೊಳ್ಳಲಿವೆ. ಇದನ್ನು ಅಧಿಕಾರಿಗಳು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು. ಅನಧಿಕೃತ ಬಡಾವಣೆಗಳಿಂದ ಕಂದಾಯ ಬರುತ್ತಿಲ್ಲ. ಪರಿಣಾಮ ಜನರಿಗೆ ನಾಗರಿಕ ಸವಲತ್ತುಗಳೂ ಸಿಗುತ್ತಿಲ್ಲ, ಸ್ಥಳೀಯ ಸಂಸ್ಥೆಗಳಿಗೆ ಆದಾಯವೂ ಬಂದ್ ಆಗಿದೆ. ಇವೆಲ್ಲಾ ಅನಾನುಕೂಲಗಳಿಗೂ ಈ ಅಭಿಯಾನ ಮೂಲಕ ಅಂತ್ಯ ಹಾಡಬೇಕು ಎಂದರು.ಈ ಬಾರಿ ಒಂದು ಬಾರಿ ಬಿ ಖಾತಾ ಕೊಟ್ಟು ಅನಧಿಕೃತ ಬಡಾವಣೆಗಳಿಗೆ ಅಂತ್ಯ ಹಾಡಬೇಕು. ಇದು ಕೊನೆಯ ಅವಕಾಶವಾಗಿರಬೇಕು ಎಂದು ಸ್ಪಷ್ಟಪಡಿಸಿದ ಶಾಸಕರು ಎಲ್ಲ ಅಧಿಕಾರಿಗಳಿಗೂ ೩ ತಿಂಗಳು ಮಾತ್ರ ಸಮಯ ನೀಡಲಾಗುವುದು. ಅಷ್ಟರೊಳಗೆ ಅಭಿಯಾನ ನಡೆಸಿ ಖಾತಾ ವಿತರಣೆಯನ್ನು ಪೂರ್ಣಗೊಳಿಸಬೇಕು ಎಂದರು. ಇದರಲ್ಲಿ ಯಾವುದೇ ರಾಜಿ ಇಲ್ಲ. ಒಂದು ವೇಳೆ ಅಧಿಕಾರಿಗಳು ರಾಜಿ ಮಾಡಿಕೊಂಡರೂ ಸಹಿಸುವುದಿಲ್ಲ ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ.ವಿ.ರೂಪ, ಮುಖ್ಯಾಧಿಕಾರಿ ಪ್ರದೀಪ್, ಪುರಸಭಾ ಅಧ್ಯಕ್ಷೆ ಕೋಮಲ, ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮುಹಮ್ಮದ್ ನಯೀಂ, ಪುರಸಭಾ ಸದಸ್ಯರಾದ ಎನ್.ವಿ.ಮುರಳೀಧರ್, ವಿಜಯಲಕ್ಷ್ಮಿ, ಪದ್ಮಾವತಿ, ಭಾರತಮ್ಮ, ಇಂತಿಯಾಜ್, ವೆಂಕಟೇಶ್, ಸೇರಿದಂತೆ ಅಧಿಕಾರಿಗಳು ಇದ್ದರು.