ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆ ಉದ್ಘಾಟನೆ ಬಾಕಿ ಇರುವ ಹಿನ್ನೆಲೆಯಲ್ಲಿ ಅ.25ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸದಿರಲು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ನಿರ್ಧರಿಸಿದ್ದಾರೆ.

ವಾಲ್ಮೀಕಿ ಪ್ರತಿಮೆ ಉದ್ಘಾಟನೆ ಬಾಕಿ ಹಿನ್ನೆಲೆ

ಅನ್ನದಾನ ಸೇರಿದಂತೆ ಎಲ್ಲ ಕಾರ್ಯಕ್ರಮ ಮುಂದೂಡಲು ಕಾರ್ಯಕರ್ತರಿಗೆ ಮನವಿ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆ ಉದ್ಘಾಟನೆ ಬಾಕಿ ಇರುವ ಹಿನ್ನೆಲೆಯಲ್ಲಿ ಅ.25ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸದಿರಲು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ನಿರ್ಧರಿಸಿದ್ದಾರೆ.

ಪ್ರತಿ ವರ್ಷ ತಮ್ಮ ಹುಟ್ಟುಹಬ್ಬದ ಅಂಗವಾಗಿ ಸುಮಾರು 50ರಿಂದ 60 ಸಾವಿರ ಜನರಿಗೆ ಅನ್ನದಾನ ಮಾಡುವ ಮೂಲಕ ಸಂಭ್ರಮ ಹಂಚಿಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆ ಉದ್ಘಾಟನೆಯಾಗದಿರುವುದರಿಂದ ಹುಟ್ಟುಹಬ್ಬದ ಅಂಗವಾಗಿ ಯಾವುದೇ ಕಾರ್ಯಕ್ರಮ ಆಯೋಜಿಸದಂತೆ ಅಭಿಮಾನಿಗಳು, ಸ್ನೇಹಿತರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಶಾಸಕ ಭರತ್ ರೆಡ್ಡಿ ಮನವಿ ಮಾಡಿದ್ದಾರೆ.

ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆ ಉದ್ಘಾಟನೆಯಾಗದೇ ಇರುವಾಗ ವೈಯಕ್ತಿಕವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸೂಕ್ತವಲ್ಲ ಎಂಬುದು ನನ್ನ ಭಾವನೆ. ಹೀಗಾಗಿ ಈ ಬಾರಿ ಹುಟ್ಟುಹಬ್ಬದ ಸಂಭ್ರಮದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ. ಹುಟ್ಟುಹಬ್ಬದ ಅಂಗವಾಗಿ ಪ್ರತಿವರ್ಷ ಹಮ್ಮಿಕೊಳ್ಳುತ್ತಿದ್ದ ಬೃಹತ್ ಅನ್ನದಾನ ಕಾರ್ಯಕ್ರಮ ಸೇರಿದಂತೆ ಶುಭಾಶಯ ಕೋರುವ ಸಮಾರಂಭಗಳು ಹಾಗೂ ಇತರೆ ಯಾವುದೇ ಆಚರಣೆಗಳನ್ನು ಆಯೋಜಿಸಬಾರದು. ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆ ಉದ್ಘಾಟನೆಗೆ ಆದ್ಯತೆ ನೀಡಬೇಕಿದೆ. ಸಾರ್ವಜನಿಕ ಕಾರ್ಯಗಳಿಗೆ ಹೆಚ್ಚಿನ ಮಹತ್ವ ನೀಡುವುದು ತಮ್ಮ ಆಶಯವಾಗಿದೆ. ವಾಲ್ಮೀಕಿ ಪ್ರತಿಮೆ ಉದ್ಘಾಟನೆಯಾದ ಬಳಿಕ ಸೂಕ್ತ ಸಮಯದಲ್ಲಿ ಅನ್ನದಾನ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ನಿರ್ಧರಿಸಬಹುದು. ಅಲ್ಲಿಯವರೆಗೆ ಹುಟ್ಟುಹಬ್ಬದ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಂತೆ ಮನವಿ ಮಾಡಿದ್ದಾರೆ.

ತಮ್ಮ ನಿರ್ಧಾರವನ್ನು ಅಭಿಮಾನಿಗಳು, ಹಿತೈಷಿಗಳು ಹಾಗೂ ಪಕ್ಷದ ಕಾರ್ಯಕರ್ತರು ಅರ್ಥಮಾಡಿಕೊಂಡು ಗೌರವಿಸಬೇಕು. ಹುಟ್ಟುಹಬ್ಬದ ಆಚರಣೆಗಾಗಿ ಯಾವುದೇ ಸಿದ್ಧತೆ ಮಾಡಿಕೊಳ್ಳಬಾರದು ಎಂದು ಶಾಸಕ ನಾರಾ ಭರತ್ ರೆಡ್ಡಿ ಕೋರಿದ್ದಾರೆ.