ಸಾರಾಂಶ
ಕನ್ನಡಪ್ರಭ ವಾರ್ತೆ ಗುಡಿಬಂಡೆ
ಬಯಲು ಸೀಮೆಯ ಈ ಪ್ರದೇಶವಾದ ಈ ಭಾಗದಲ್ಲಿ ಹೈನುಗಾರಿಕೆ ಪ್ರಮುಖ ಕಸುಬಾಗಿದೆ. ರೈತರು ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಬೇಕು. ಹೈನುಗಾರರಿಗೆ ಪ್ರೋತ್ಸಾಹ ನೀಡಬೇಕು. ಆದರೆ ಹಾಲಿನ ದರ ಕಡಿತ ಮಾಡಿರುವುದು ಸರಿಯಲ್ಲ, ಈ ಕುರಿತು ಸರ್ಕಾರದ ಗಮನಕ್ಕೂ ತಂದಿದ್ದೇನೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.ತಾಲೂಕಿನ ಕಡೇಹಳ್ಳಿ ಗ್ರಾಮದಲ್ಲಿ ಕಡೇಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಕಟ್ಟಡ ನಿರ್ಮಾಣದ ಭೂಮಿಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಹಾಲಿಗೆ ₹2 ಕಡಿತ ಸರಿಯಲ್ಲಈ ಭಾಗದ ರೈತರು ಹೆಚ್ಚಾಗಿ ಹೈನುಗಾರಿಕೆಯನ್ನೇ ಅವಲಂಬಿಸಿದ್ದಾರೆ. ರೈತರೂ ಸಹ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಇತ್ತೀಚಿಗೆ ರೈತರು ಉತ್ಪಾದಿಸುವ ಹಾಲಿಗೆ 2 ರು.ಗಳ ಕಡಿತ ಮಾಡಿರುವುದು ಸರಿಯಲ್ಲ. ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ಈ ಸಂಬಂಧ ಸರ್ಕಾರದ ಜೊತೆಗೂ ಮಾತನಾಡಿದ್ದೇನೆ. ದರ ಕಡಿತ ಮಾಡಿರುವುದು ರೈತನ ಮಗನಾಗಿ ನನಗೂ ಸಹ ಬೇಸರವಿದೆ ಎಂದರು.
ಸಹಕಾರ ಸಂಘದಲ್ಲಿ ರಾಜಕೀಯ ಬೇಡಕಡೇಹಳ್ಳಿ ಗ್ರಾಮದಲ್ಲಿ ಎಲ್ಲರೂ ಒಂದಾಗಿ ಪಕ್ಷಬೇದವಿಲ್ಲದೇ ಒಗ್ಗಟ್ಟಾಗಿ ಹಾಲು ಉತ್ಪಾದಕರ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಸಂತಸದ ವಿಚಾರ. ಸ್ಥಳೀಯ ಸಹಕಾರ ಸಂಘಗಳಲ್ಲಿ ಯಾರೂ ಸಹ ರಾಜಕೀಯ ಮಾಡಬಾರದು. ಊರಿನವರೆಲ್ಲರೂ ಒಂದಾಗಿದ್ದರೇ ಅಭಿವೃದ್ದಿ ಮಾಡಲು ಸಾಧ್ಯ. ಈ ಕಟ್ಟಡ ಕಾಮಗಾರಿಗೆ ನಾನು 5 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಕಡೇಹಳ್ಳಿ ಗ್ರಾಮದಿಂದ ಎಲ್ಲೋಡು ಆದಿನಾರಾಯಣಸ್ವಾಮಿ ಬೆಟ್ಟದ ವರೆಗೂ 11 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯಲಿದೆ. ಶೀಘ್ರದಲ್ಲೇ ಈ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗುತ್ತದೆ. ಜೊತೆಗೆ ಕಡೇಹಳ್ಳಿ ರಸ್ತೆ ಅಗಲೀಕರಣದ ವೇಳೆ ಮನೆ ಕಳೆದುಕೊಂಡವರಿಗೆ 1 ತಿಂಗಳೊಳಗಾಗಿ ನಿವೇಶನ ಮಂಜೂರಾತಿ ಪತ್ರಗಳನ್ನು ವಿತರಣೆ ಮಾಡುತ್ತೇನೆ ಎಂದರು.ಬಳಿಕ ಕಡೇಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣಾರೆಡ್ಡಿ, ಈ ವೇಳೆ ಕೋಚಿಮುಲ್ ನಿರ್ದೇಶಕ ಆದಿನಾರಾಯಣರೆಡ್ಡಿ, ಮುಖಂಡರಾದ ಆದಿರೆಡ್ಡಿ, ಆನಂದರೆಡ್ಡಿ, ಪ್ರಕಾಶ್, ವೆಂಕಟಶಿವಾರೆಡ್ಡಿ, ಕೋಚಿಮುಲ್ ಶಿಬಿರ ಕಚೇರಿಯ ಅಧಿಕಾರಿಗಳು ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.