ಪಟ್ಟಣದ ಕಾಳಮ್ಮನಗರದಲ್ಲಿ ಕೊಲೆಯಾದ ರಂಜಿತಾ ನಿವಾಸಕ್ಕೆ ಭೇಟಿ ನೀಡಿದ ಶಾಸಕ ಶಿವರಾಮ ಹೆಬ್ಬಾರ್ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಲಾದ ₹8.25 ಲಕ್ಷ ಪರಿಹಾರಧನದ ಆದೇಶ ಪತ್ರವನ್ನು ಕುಟುಂಬಸ್ಥರಿಗೆ ವಿತರಿಸಿದರು.
ಯಲ್ಲಾಪುರ:
ಪಟ್ಟಣದ ಕಾಳಮ್ಮನಗರದಲ್ಲಿ ಕೊಲೆಯಾದ ರಂಜಿತಾ ನಿವಾಸಕ್ಕೆ ಭೇಟಿ ನೀಡಿದ ಶಾಸಕ ಶಿವರಾಮ ಹೆಬ್ಬಾರ್ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಲಾದ ₹8.25 ಲಕ್ಷ ಪರಿಹಾರಧನದ ಆದೇಶ ಪತ್ರವನ್ನು ಕುಟುಂಬಸ್ಥರಿಗೆ ವಿತರಿಸಿದರು.ಬಳಿಕ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಈ ಸಂದರ್ಭ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧಿಕಾರ ದೀಪನ್ ಎಂ.ಎನ್., ಶಿರಸಿ ಉಪವಿಭಾಗಾಧಿಕಾರಿ ಕಾವ್ಯರಾಣಿ, ತಹಸೀಲ್ದಾರ್ ಚಂದ್ರಶೇಖರ ಹೊಸ್ಮನಿ, ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿ.ಎಸ್. ಭಟ್ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.ಕೊಲೆ ಆರೋಪಿ ರಫೀಕ್ ಆತ್ಮಹತ್ಯೆಪಟ್ಟಣದ ಕಾಳಮ್ಮನಗರದ ಬಳಿ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ರಫೀಕ್ ಯಳ್ಳೂರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಪಟ್ಟಣದ ನಿಸರ್ಗಮನೆ ಬಳಿ ಕಾಜಲವಾಡಾ ಸಮೀಪದ ಕಾಡಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಆತನ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದ್ದರು. ಬೆಳಗಿನ ಜಾವ 5 ಗಂಟೆಗೆ ಕಾಜಲವಾಡಾ ಬಳಿಯ ಕಾಡಿನಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮಹಿಳೆ ಹತ್ಯೆಗೆ ಶಿವಾನಿ ಖಂಡನೆ:
ಯಲ್ಲಾಪುರದಲ್ಲಿ ನಡೆದ ಹಿಂದೂ ಮಹಿಳೆ ಕೊಲೆಯನ್ನು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತರಾಮ ಭಟ್ಕಳ ತೀವ್ರವಾಗಿ ಖಂಡಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿದ ಅವರು, ಶಾಂತಿಯುತ ಮತ್ತು ಸಂಸ್ಕಾರ-ವೈಚಾರಿಕತೆಗೆ ಹೆಸರಾದ ಯಲ್ಲಾಪುರದಲ್ಲಿ ಪದೇ ಪದೇ ಹಿಂದೂ ದಲಿತ ಯುವತಿಯರು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ನಮ್ಮನ್ನು ಆಘಾತಗೊಳಿಸಿವೆ. ಇತ್ತೀಚೆಗೆ ಮದನೂರು ಭಾಗದಲ್ಲಿ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಈಗ ಯಲ್ಲಾಪುರ ನಗರದಲ್ಲಿ ಹಿಂದೂ ಮಹಿಳೆಯೊಬ್ಬರ ಕುತ್ತಿಗೆ ಕತ್ತರಿಸಿ ನಡೆದ ಬರ್ಬರ ಹತ್ಯೆ ನಿಜಕ್ಕೂ ನಾಗರಿಕ ಸಮಾಜದಲ್ಲಿ ಭಯ ಹುಟ್ಟಿಸುವಂತಿದೆ. ಬಿಜೆಪಿ ಮಹಿಳಾ ಮೋರ್ಚಾ ಈ ದುರ್ಘಟನೆಗಳನ್ನು ತೀವ್ರವಾಗಿ ಖಂಡಿಸುತ್ತದೆ ಮತ್ತು ಅಪರಾಧಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸುತ್ತದೆ. ಉತ್ತರ ಕನ್ನಡ ಜಿಲ್ಲೆ ಮತ್ತು ರಾಜ್ಯದ ಯಾವುದೇ ಭಾಗದಲ್ಲಿ ಇಂತಹ ದುಷ್ಕೃತ್ಯ ನಡೆಯದಂತೆ ತಡೆಯಲು ಪೊಲೀಸ್ ಇಲಾಖೆ ಮುಂದಾಗಬೇಕು. ಯುವತಿಯ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.