ಶಿಷ್ಟಾಚಾರ ಪಾಲಿಸದ ಅಧಿಕಾರಿಗಳ ವಿರುದ್ಧ ಶಾಸಕ ಆಕ್ರೋಶ

| Published : Jan 15 2025, 12:48 AM IST

ಸಾರಾಂಶ

ಕೆ.ಹೊಸಕೋಟೆ ಹೋಬಳಿ ಕಿತ್ತಗೆರೆ ಗ್ರಾಮದಲ್ಲಿ 22 ಲಕ್ಷ ರು. ವೆಚ್ಚದ ಅಂಗನವಾಡಿ ಕಟ್ಟಡ ಉದ್ಘಾಟನೆ ಗ್ರಾಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಶಾಸಕರ ಬಳಿ ಕಾರ್ಯಕ್ರಮಕ್ಕೆ ಸ್ಥಳೀಯ ಜನಪ್ರತಿನಿಧಿಗಳನ್ನು ಕರೆಯದೆ ಆಹ್ವಾನಿಸದೆ ಇರುವ ಬಗ್ಗೆ ತಿಳಿಸಿದರು. ಎಂಎಲ್‌ಎ ಬರ್ತಾರೆ ಅಂದ್ರೆ ನಿಮಗೆ ಜವಾಬ್ದಾರಿ ಬೇಡವೇ, ಬೇಕಾಬಿಟ್ಟಿ ಮಾಡ್ತೀರಿ ಅಂದ್ರೆ ಸುಮ್ಮೆ ಇರ್ತೀನಾ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಸಹಾಯಕ ನಿರ್ದೇಶಕ ಎ. ಟಿ. ಮಲ್ಲೇಶ್ ಹಾಗೂ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸಲ್ಮಾ ಮತ್ತು ರಜಾಕ್ ಅವರಿಗೆ ತೀವ್ರವಾಗಿ ತರಾಟೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕಿನ ಕೆ.ಹೊಸಕೋಟೆ ಹೋಬಳಿ ಕಿತ್ತಗೆರೆ ಗ್ರಾಮದಲ್ಲಿ 22 ಲಕ್ಷ ರು. ವೆಚ್ಚದ ಅಂಗನವಾಡಿ ಕಟ್ಟಡ ಉದ್ಘಾಟನೆ ಗ್ರಾಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಶಾಸಕರ ಬಳಿ ಕಾರ್ಯಕ್ರಮಕ್ಕೆ ಸ್ಥಳೀಯ ಜನಪ್ರತಿನಿಧಿಗಳನ್ನು ಕರೆಯದೆ ಆಹ್ವಾನಿಸದೆ ಇರುವ ಬಗ್ಗೆ ತಿಳಿಸಿದರು.

ಈ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಸಿಮೆಂಟ್ ಮಂಜು, ಸ್ಥಳೀಯ ಜನಪ್ರತಿನಿಧಿಗಳಿಗೆ ಗೌರವ ಕೊಡುವುದನ್ನು ಮೊದಲು ಕಲಿಯಿರಿ. ಹಲವು ವರ್ಷಗಳಿಂದ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದೀರಿ. ಜನಪ್ರತಿನಿಧಿಗಳನ್ನು ಹೇಗೆ ನಡೆಸಿಕೊಳ್ಳಬೇಕು ಎನ್ನುವ ಪರಿಜ್ಞಾನ ಬೇಡವೆ, ಬೇಕಾಬಿಟ್ಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಜನಪ್ರತಿನಿಧಿಗಳಿಗೆ ಗೌರವ ಸೂಚಿಸದೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದೀರಾ, ಇದು ಜನಪ್ರತಿನಿಧಿನಗಳಿಗೆ ಅವಮಾನ ಮಾಡಿದಂತಲ್ಲವೇ. ಕೇವಲ ಶಾಸಕರು ಮಾತ್ರ ಬಂದು ಟೇಪ್‌ ಕಟ್ ಮಾಡಿ ಹೋಗ್ತಾರಾ, ಸ್ಥಳೀಯರು ಇರಬಾರದ, ಇವರಿಗೆ ಅಧಿಕಾರಿಗಳಿಗೆ ಅರಿವಿಲ್ಲವೇ ಈ ರೀತಿ ಮಾಡಲು ಹೇಳಿಕೊಟ್ಟಿದ್ದು ನಿಮಗೆ ಇದೆಲ್ಲ ಒಳ್ಳೆಯದಲ್ಲ ಹೇಳಿದ್ದೀನಿ, ನಾನು ಯಾರ ಹತ್ತಿರ ಏನು ಮಾತನಾಡಲ್ಲ, ನನ್ನ ದೌರ್ಬಲ್ಯ ಎಂದು ತಿಳಿದುಕೊಂಡು ದುರುಪಯೋಗ ಪಡಿಸಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯನಿಗೆ ಹಾರ ಹಾಕುವ ಯೋಗ್ಯತೆ ಇಲ್ವಾ? ನಿಮಗೆ ಸರಿಯಾಗಿ ಕಾರ್ಯಕ್ರಮ ಮಾಡಿ ಕಟ್ಟಡ ಹಸ್ತಾಂತರ ಮಾಡಬೇಕಾದರೆ ಗುತ್ತಿಗೆದಾರರನ್ನು ಕರೆಸಿ ಒಳ್ಳೆಯ ಕಾರ್ಯಕ್ರಮ ಮಾಡಬೇಕಲ್ವೇನ್ರಿ. ಎಂಎಲ್‌ಎ ಬರ್ತಾರೆ ಅಂದ್ರೆ ನಿಮಗೆ ಜವಾಬ್ದಾರಿ ಬೇಡವೇ, ಬೇಕಾಬಿಟ್ಟಿ ಮಾಡ್ತೀರಿ ಅಂದ್ರೆ ಸುಮ್ಮೆ ಇರ್ತೀನಾ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಸಹಾಯಕ ನಿರ್ದೇಶಕ ಎ. ಟಿ. ಮಲ್ಲೇಶ್ ಹಾಗೂ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸಲ್ಮಾ ಮತ್ತು ರಜಾಕ್ ಅವರಿಗೆ ತೀವ್ರವಾಗಿ ತರಾಟೆ ತೆಗೆದುಕೊಂಡರು.

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ನಾನು ಎರಡು ವರ್ಷಗಳಿಂದ ಯಾವುದೇ ಇಲಾಖೆ ಅಧಿಕಾರಿ ಬಗ್ಗೆ ಇದುವರೆಗೂ ಮಾತನಾಡಿಲ್ಲ. ತಪ್ಪಾಗಿದ್ದನ್ನು ಸರಿಪಡಿಸಿಕೊಂಡು ಜನರಿಗೆ ಕೆಲಸ ಮಾಡಿಕೊಡಿ ಎಂದು ಸಮಾಧಾನದಿಂದ ಹೇಳುತ್ತೇನೆ, ಆದರೆ ಕೆಲವು ಅಧಿಕಾರಿಗಳು ಇದೇ ಶಾಸಕರ ದೌರ್ಬಲ್ಯ ಎಂದು ತಿಳಿದು ಕೊಂಡರೆ ಅದು ತಪ್ಪು. ಸಮಾಧಾನಕ್ಕೂ ಒಂದು ಮಿತಿ ಇದೆ. ಯಾವುದೇ ಜನಪ್ರತಿನಿಧಿಗಳ ಬಗ್ಗೆ ತಾತ್ಸಾರ ಮಾಡುವ ಹಕ್ಕು ಯಾರಿಗೂ ಇಲ್ಲ. ಕೆಲವು ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದು, ಕೆಲವು ಪುಡಿ ರಾಜಕಾರಣಿಗಳನ್ನು ಜೊತೆ ಸೇರಿ ಅಡ್ಡ ದಾರಿ ಹಿಡಿದಿದ್ದಾರೆ. ಇದರಿಂದ ಕ್ಷೇತ್ರದ ಗೌರವಕ್ಕೆ ಧಕ್ಕೆಯಾಗುತ್ತಿದೆ ಇದೇ ರೀತಿ ಮುಂದುವರಿಸಿದರೆ ಶಾಸಕ ಏನು ಅನ್ನುವುದನ್ನ ತೋರಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎ. ಟಿ ಮಲ್ಲೇಶ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸಲ್ಮಾ, ರಜಾಕ್, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.