ಸಾರಾಂಶ
ಸರ್ಕಾರ ಕೊಟ್ಟ ಮಾತನ್ನು ತಪ್ಪಲ್ಲ. ಪಂಚ ಗ್ಯಾರಂಟಿ ಯೋಜನೆ ನೀಡುತ್ತಿದ್ದೇವೆ. ಈ ಹಿಂದೆ ಅಕ್ಕಿಗೆ ಬದಲಾಗಿ ಹಣವನ್ನು ಅವರ ಖಾತೆಗೆ ವಿತರಣೆ ಮಾಡಲಾಗುತ್ತಿತ್ತು. ಈಗ ಅಕ್ಕಿಯನ್ನೇ ವಿತರಿಸಲಾಗುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಾವು ನಡೆದುಕೊಂಡಿದ್ದೇವೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆಗೆ ಶಾಸಕ ಪಿ.ರವಿಕುಮಾರ್ ನಗರದ ಗುತ್ತಲು ಬಡಾವಣೆಯ ನ್ಯಾಯಬೆಲೆ ಅಂಗಡಿಯಲ್ಲಿ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಸರ್ಕಾರ ಕೊಟ್ಟ ಮಾತನ್ನು ತಪ್ಪಲ್ಲ. ಪಂಚ ಗ್ಯಾರಂಟಿ ಯೋಜನೆ ನೀಡುತ್ತಿದ್ದೇವೆ. ಈ ಹಿಂದೆ ಅಕ್ಕಿಗೆ ಬದಲಾಗಿ ಹಣವನ್ನು ಅವರ ಖಾತೆಗೆ ವಿತರಣೆ ಮಾಡಲಾಗುತ್ತಿತ್ತು. ಈಗ ಅಕ್ಕಿಯನ್ನೇ ವಿತರಿಸಲಾಗುತ್ತಿದೆ ಎಂದರು.
ಮಹಾರಾಷ್ಟ್ರ ಸರ್ಕಾರ 2 ಸಾವಿರ ಕೊಡುತ್ತೇವೆ ಎಂದು ಚುನಾವಣೆಯಲ್ಲಿ ಘೋಷಿಸಿ ಗೆದ್ದರು. ಆದರೆ, ಈಗ ಒಂದು ಸಾವಿರ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಾವು ನಡೆದುಕೊಂಡಿದ್ದೇವೆ ಎಂದರು.ಫೆಬ್ರುವರಿ ತಿಂಗಳ 5 ಕೆ.ಜಿ.ಸೇರಿ ಈ ತಿಂಗಳು ಪ್ರತಿಯೊಬ್ಬರಿಗೂ 15 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ. ಕರ್ನಾಟಕದ 7 ಕೋಟಿ ಕನ್ನಡಿಗರು ಹಸಿದು ಮಲಗಬಾರದು ಎಂಬ ಉದ್ದೇಶದಿಂದ ಸಿದ್ದರಾಮಯ್ಯ ಅವರು ಈ ಯೋಜನೆ ಜಾರಿಗೆ ತಂದಿದ್ದಾರೆ ಎಂದರು.
ನಗರದ ಪ್ರತಿ ವಾರ್ಡ್‌ಗಳಲ್ಲೂ ರುದ್ರಪ್ಪ ಮತ್ತು ತಂಡ ವಿತರಿಸುತ್ತಾರೆ. ಗ್ರಾಮೀಣ ಭಾಗದಲ್ಲೂ ನಾನೇ ಚಾಲನೆ ಕೊಡುತ್ತೇನೆ. ನಂತರ ಗ್ರಾಪಂಗೆ ವಿತರಿಸಲು ತಿಳಿಸಲಾಗುವುದು ಎಂದರು.ಮುಂದಿನ ವಾರದಲ್ಲಿ 15 ಕೋಟಿ ರು. ವೆಚ್ಚದ ಮಂಡ್ಯ ನಗರದ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಯೋಜನೆ ಆದಲ್ಲಿ ಶೇ.70ರಷ್ಟು ರಸ್ತೆ ಅಭಿವೃದ್ಧಿ ಮಾಡಿದಂತಾಗುತ್ತದೆ. ಮಂಡ್ಯಕ್ಕೆ ಹೊಸ ರೂಪ ಬರುತ್ತದೆ ಎಂದರು.
ಈ ವೇಳೆ ತಹಸೀಲ್ದಾರ್ ಶಿವಕುಮಾರ್ ಬಿರಾದಾರ್, ತಾಪಂ ಇಒ ವೀಣಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಚ್.ಕೆ.ರುದ್ರಪ್ಪ, ನಗರಸಭಾ ಸದಸ್ಯರಾದ ಎಚ್.ಎಸ್. ಮಂಜು, ನಯೀಂ, ಶ್ರೀಧರ್, ಸೌಭಾಗ್ಯ, ಗೀತಾ, ಭಾರತೀಶ್, ಪಾಪಣ್ಣ ಇತರರು ಇದ್ದರು.