ಕೆರೆ ಭರ್ತಿ ಮಾಡಿ ರೈತರ ಸಂಕಷ್ಟ ದೂರ ಮಾಡಿದ ಶಾಸಕ ಪಾಟೀಲ

| Published : Nov 24 2024, 01:46 AM IST

ಸಾರಾಂಶ

ಡ್ರ್ಯಾಗನ್, ಅಡಕೆ, ದಾಳಿಂಬೆ, ವಿವಿಧ ತರಕಾರಿ ಸೇರಿದಂತೆ ಹೊಸ ಬಗೆಯ ಬೆಳೆ ಹೊಂದುವುದರ ಮೂಲಕ ಆರ್ಥಿಕ ಸಬಲತೆ ಹೊಂದಲು ಕಾರಣ

ರಿಯಾಜಅಹ್ಮದ ಎಂ ದೊಡ್ಡಮನಿ ಡಂಬಳ

ರೈತ ಕುಟುಂಬದಲ್ಲಿ ಜನ್ಮ ತಾಳಿ ರಾಜಕಾರಣಿಯಾಗಿ ರೈತರ ಕಲ್ಯಾಣಕ್ಕಾಗಿ ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿದ ರೋಣ ಶಾಸಕ ಜಿ.ಎಸ್‌. ಪಾಟೀಲರ ಕಾರ್ಯ ಸಾಧನೆಗೆ ರೈತಾಪಿ ಸಮೂಹ ಮೆಚ್ಚುಗೆ ವ್ಯಕ್ತಪಡಿಸಿದೆ.

2013ರ ಪೂರ್ವದಲ್ಲಿ ಮುಂಡರಗಿ ತಾಲೂಕು ಮಳೆ ಕೊರತೆಯಿಂದ ಬರದ ಛಾಯೆ ಮನೆ ಮಾಡಿ ಈ ಭಾಗದ ಕೆರೆಗಳು ಬತ್ತಿ ಬರಿದಾಗಿದ್ದವು. ಜಮೀನುಗಳಲ್ಲಿ ಬೆಳೆ ಇಲ್ಲದೆ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಗೋವಾ, ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಗುಳೆ ಹೋಗುವುದು ಅನಿವಾರ್ಯವಾಗಿತ್ತು. 2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದ ಚುಕ್ಕಾಣಿ ಹಿಡಿಯುತ್ತಿದ್ದಂತೆ ರೈತರಿಗೆ ಮಾತು ಕೊಟ್ಟಂತೆ ಸಾವಿರಾರು ಕೋಟಿ ಸಿಂಗಟಾಲೂರ ಏತ ನೀರಾವರಿಗೆ ಮೀಸಲಿಟ್ಟು ಯೋಜನೆ ಜಾರಿಗೊಳಿಸಿದ ಕೀರ್ತಿ ಶಾಸಕ ಜಿ.ಎಸ್‌. ಪಾಟೀಲರಿಗೆ ಸಲ್ಲುತ್ತದೆ.

ರೈತರ ಹರ್ಷ: ರೈತರ ಕನಸಿನ ಯೋಜನೆ ಜಾರಿಗೊಳಿಸಿದ್ದರಿಂದ ಡಂಬಳ, ಹಿರೇವಡ್ಡಟ್ಟಿ, ಜಂತ್ಲಿ ಶಿರೂರ, ತಾಮ್ರುಗುಂಡಿ, ಕದಾಂಪೂರ, ಬರದೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಾದು ಹೋದ ಕಾಲುವೆಗಳಿಂದ ಹಳ್ಳಕೊಳ್ಳಗಳಲ್ಲಿ ನೀರು ಹರಿದು ನೂರಾರು ಬಾಂದಾರಗಳ ನಿರ್ಮಾಣದಿಂದ ರೈತರ ಮೊಗದಲ್ಲಿ ಹರ್ಷ ಮೂಡಿ ಈರುಳ್ಳಿ, ಗೋವಿನ ಜೋಳ, ಸೂರ್ಯಕಾಂತಿ, ಕಬ್ಬು, ಪೇರಲೆ, ಬಾಳೆ, ಡ್ರ್ಯಾಗನ್, ಅಡಕೆ, ದಾಳಿಂಬೆ, ವಿವಿಧ ತರಕಾರಿ ಸೇರಿದಂತೆ ಹೊಸ ಬಗೆಯ ಬೆಳೆ ಹೊಂದುವುದರ ಮೂಲಕ ಆರ್ಥಿಕ ಸಬಲತೆ ಹೊಂದಲು ಕಾರಣವಾಯಿತು.

ಸರ್ಕಾರ ಹಾಗೂ ಜನಪ್ರತಿನಿಧಿಗಳ ದೂರದೃಷ್ಟಿಯ ಫಲವಾಗಿ ಸಿಂಗಟಾಲೂರು ಏತ ನೀರಾವರಿ ಯೋಜನೆ ರೈತರ ಪಾಲಿಗೆ ಕಾಮಧೇನುವಾಗಿದೆ. ಈ ಯೋಜನೆ ಅನುಷ್ಠಾನ ಮಾಡಿದ ಫಲವಾಗಿ ಈ ಭಾಗದ ರೈತರಿಗೆ ನೀರಾವರಿ ಜತೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ, ಬಾಂದಾರಗಳಲ್ಲಿ ನೀರು ಉಕ್ಕುತ್ತಿವೆ, ಬೋರವೆಲ್ಲಗಳಲ್ಲಿ ನೀರು ಚಿಮ್ಮುತ್ತಿವೆ, ಈ ಭಾಗದ ರೈತರ ಆರ್ಥಿಕ ಸಾಮಾಜಿಕ ಚಟುವಟಿಕೆ ಬದಲಾವಣೆ ತರುವಲ್ಲಿ ಮಹತ್ತರ ಪಾತ್ರವಹಿಸಿದೆ.

ಬಹು ದಿನದ ಕನಸು ನನಸು: 1992ರಲ್ಲಿ ಆರಂಭವಾಗಿದ್ದ ಸಿಂಗಟಾಲೂರು ಏತ ನೀರಾವರಿ ಯೋಜನೆ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯಿಂದ ನನೆಗುದಿಗೆ ಬಿದ್ದಿತ್ತು. 2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಯೋಜನೆಗೆ ಸಾವಿರಾರು ಕೋಟಿ ಅನುದಾನ ತಂದ ಶಾಸಕ ಜಿ.ಎಸ್‌. ಪಾಟೀಲ ಯೋಜನೆ ಪೂರ್ಣಗೊಳಿಸಿ ರೈತರ ಜಮೀನು, ಕೆರೆ, ಹಳ್ಳಕೊಳ್ಳಗಳಿಗೆ ನೀರು ಹರಿಸಿ ರೈತರ ಬಹು ದಿನಗಳ ಕನಸು ನನಸು ಮಾಡಿದ್ದಾರೆ.

ಮುಂಡರಗಿ ಭಾಗದಲ್ಲಿ ನೈಸರ್ಗಿಕ ಕೆರೆಕಟ್ಟೆಗಳು ಹೆಚ್ಚಿದ್ದು, ರೈತರ ಹಿತ ಕಾಪಾಡುವ ಕೆಲಸಕ್ಕೆ ಆದ್ಯತೆ ನೀಡಲಾಗುವುದು. ಈ ಭಾಗದ ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡುವುದರ ಮೂಲಕ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ನಿರಂತರವಾಗಿ ಶ್ರಮಿಸಲಾಗುವುದು ಎಂದು ರೋಣ ಶಾಸಕ ಜಿ.ಎಸ್.ಪಾಟೀಲ್ ತಿಳಿಸಿದ್ದಾರೆ.

ಬರದ ನಾಡಾಗಿದ್ದ ಮುಂಡರಗಿ ತಾಲೂಕಿಗೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಮೂಲಕ ರೈತರ ಜಮೀನುಗಳಿಗೆ ನೀರು ಹರಿಸಿ ರೈತರನ್ನು ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಶ್ರಮಿಸಿದ ಶಾಸಕ ಜಿ.ಎಸ್‌. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲರಿಗೆ ರೈತರ ಪರವಾಗಿ ಧನ್ಯವಾದಗಳು ಎಂದು ಪರಿಸರವಾದಿ ಗೋಣಿಬಸಪ್ಪ ಕೊರ್ಲಹಳ್ಳಿ ತಿಳಿಸಿದ್ದಾರೆ.