ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ತಮ್ಮ ಗ್ರಾಮಕ್ಕೆ ಹೆದ್ದಾರಿಯಿಂದ ರಸ್ತೆ ಸಂಪರ್ಕ ಹೊಂದಲು ಹತ್ತಾರು ರೈತರು ಸ್ವಯಂ ಪ್ರೇರಣೆಯಿಂದ ತಮ್ಮ ಜಮೀನುಗಳನ್ನು ನೀಡಲು ಮುಂದಾಗಿದ್ದು, ರೈತರ ನಡೆಗೆ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ ಮೆಚ್ಚುಗೆ ವ್ಯಕ್ತಪಡಿಸಿ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ.ಮಡಿಕೇರಿ ತಾಲೂಕಿನ ಅರ್ವತ್ತೋಕ್ಲು ಗ್ರಾಮಕ್ಕೆ ಮಡಿಕೇರಿ- ಭಾಗಮಂಡಲ ರಸ್ತೆಯ ಅಪ್ಪಂಗಳದಿಂದ ಎರಡು ಕಿ.ಮೀ.ನಷ್ಟು ದೂರದ ಕಾಲು ದಾರಿಯಿದೆ. ಆದರೆ ವಾಹನದ ಮೂಲಕ ಗ್ರಾಮ ತಲುಪಬೇಕು ಅಂದರೆ ತಾಳತ್ ಮನೆ, ಮೇಕೇರಿ, ಬಿಳಿಗೇರಿ ಗ್ರಾಮದ ಮೂಲಕ ಸುಮಾರು 10 ಕಿ.ಮೀ. ದೂರ ಕ್ರಮಿಸಬೇಕು. ಹಾಗಾಗಿ ಗ್ರಾಮಸ್ಥರು ವಾಹನದಲ್ಲಿ ತ್ರಾಸದಾಯಕ ಓಡಾಟ ಮಾಡುತ್ತಿದ್ದಾರೆ. 2003ರಲ್ಲಿ ಒಮ್ಮೆ ಎರಡು ಕಿ.ಮೀ. ಕಾಲುದಾರಿಯನ್ನು ವಾಹನ ಸಂಚಾರದ ರಸ್ತೆಯಾಗಿ ಮಾರ್ಪಾಡು ಮಾಡಲು ಸಭೆ ನಡೆಸಿದ್ದರು. ಆದರೆ ರೈತರು ಜಮೀನು ಕಳೆದುಕೊಳ್ಳಲು ಒಪ್ಪದೇ ಇರುವುದರಿಂದ ಯೋಜನೆ ಕಾರ್ಯಗತವಾಗಿರಲಿಲ್ಲ.
ಈಗ ಆ ಹಾದಿಯಲ್ಲಿರುವ ಸುಮಾರು ಹದಿನಾರು ರೈತರು, ಗ್ರಾಮದ ಜನತೆಯ ಒಳಿತಿನ ದೃಷ್ಟಿಯಿಂದ ಸ್ವಯಂಪ್ರೇರಿತರಾಗಿ ಜಮೀನನ್ನು ರಸ್ತೆಗೆ ಬಿಟ್ಟುಕೊಡಲು ಒಪ್ಪಿದ ಹಿನ್ನೆಲೆಯಲ್ಲಿ ಸುಮಾರು 2.2 ಕಿ.ಮೀ.ನಷ್ಟು 14 ಅಡಿ ರಸ್ತೆಯ ನಕಾಶೆಯನ್ನು ಸ್ಥಳ ದಾನಿ ರೈತರ ಒಪ್ಪಿಗೆಯೊಂದಿಗೆ ಸಿದ್ಧಪಡಿಸಿ ಶುಕ್ರವಾರ ಸ್ಥಳೀಯ ಮುಖಂಡರಾದ ತೆನ್ನಿರ ಮೈನಾ ಅವರ ಸಹಕಾರದೊಂದಿಗೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ವಿವರಗಳೊಂದಿಗೆ ವಿವರಣೆ ನೀಡಿದರು.ತಮ್ಮ ಜಮೀನನ್ನು ಗ್ರಾಮದ ಜನರ ಒಳಿತಿಗಾಗಿ ಸ್ವಯಂ ಪ್ರೇರಿತವಾಗಿ ರೈತರು ಬಿಟ್ಟುಕೊಡುತ್ತಿರುವ ಪ್ರಕರಣವನ್ನು ತಮ್ಮ ಸೇವಾ ಅವಧಿಯಲ್ಲಿ ಪ್ರಥಮ ಬಾರಿಗೆ ಕಾಣುತ್ತಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದ ಎ.ಎಸ್.ಪೊನ್ನಣ್ಣ, ಇಂತಹ ಔದಾರ್ಯ ಪ್ರತಿಯೊಂದು ಗ್ರಾಮದ ಜನತೆಯಲ್ಲಿ ಇರಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ತಿಳಿಸಿ, ರಸ್ತೆ ನಿರ್ಮಾಣಕ್ಕೆ ಬೇಕಾದ ಎಲ್ಲ ಸಹಕಾರವನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭ ಗ್ರಾಮಸ್ಥರಾದ ಪೂಜಾರಿರ ಹರ್ಷ, ಮುಂಜಾಂದಿರ ಸದಾ ಸುಬ್ಬಯ್ಯ, ಗೋವಿಂದಮ್ಮನ ರಾಮಯ್ಯ (ಮಾಮ), ತಳೂರು ಕೇಶವ ಸೇರಿದಂತೆ ಇತರರು ಉಪಸ್ಥಿತರಿದ್ದರು.