ಸಾರಾಂಶ
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಜನಪ್ರತಿನಿಧಿ ಜನತೆಯ ಸೇವಕ, ಎಲ್ಲಾರ ಮನಕಾಮನೆಯನ್ನು ಪೂರ್ತಿ ಮಾಡಬಲ್ಲ ಶಕ್ತಿ ಹೊಂದುವಂತನಾಗಬೇಕು. ಅದರಂತೆ ಇಂದು ಹುಟ್ಟುಹಬ್ಬವನ್ನು ವಿವಿಧ ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಿಸಿರುವುದು ಅರ್ಥಗರ್ಭಿತ ಎಂದು ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಮಠಾಧೀಶ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದ್ದಾರೆ.ವಿರಾಜಪೇಟೆ ನಗರದ ಹೊರವಲಯ ಬಿಟ್ಟಂಗಾಲ ಗ್ರಾಮದ ಕೂರ್ಗ್ ಯತ್ನಿಕ್ ಕಲ್ಯಾಣ ಮಂಟಪದಲ್ಲಿ ಅಯೋಜಿಸಲಾಗಿದ್ದ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಜನ್ಮದಿನದ ಸುವರ್ಣ ಮಹೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.ಬೆಳಗ್ಗೆ ವಿರಾಜಪೇಟೆ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಪುರಸಭಾ ಸದಸ್ಯರನ್ನು ಒಳಗೊಂಡಂತೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ನಂತರ ವಿರಾಜಪೇಟೆಯ ಪುರಸಭೆಯಲ್ಲಿ ಸದಸ್ಯರು ಹಾಗೂ ಪೌರ ಕಾರ್ಮಿಕರೊಂದಿಗೆ ಕೇಕ್ ಕತ್ತರಿಸುದರ ಮೂಲಕ ಹುಟ್ಟುಹಬ್ಬ ಆಚರಿಸಲಾಯಿತು. ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಔಷಧ ಉಪಕರಣ ಹಾಗೂ ತುರ್ತು ಚಿಕಿತ್ಸಾ ವೆಚ್ಚಕ್ಕಾಗಿ ವೈಯಕ್ತಿಕ ಐದು ಲಕ್ಷ ರು. ದೇಣಿಗೆಯನ್ನು ಶಾಸಕರು ನೀಡಿದರು. ಕಾರ್ಯಕರ್ತರು ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ವಿತರಿಸಿದರು.
ಆರೋಗ್ಯ ಶಿಬಿರ:ವಿರಾಜಪೇಟೆ ಸಮೀಪದ ಬಿಟ್ಟಂಗಾಲದ ಕೂರ್ಗ್ ಎತ್ನಿಕ್ ಹಾಲ್ ನಲ್ಲಿ ಪೊನ್ನಣ್ಣ ಜನ್ಮದಿನ ಸುವರ್ಣ ಸಂಭ್ರಮದ ಪ್ರಯುಕ್ತ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ನುರಿತ ವೈದ್ಯರು ಕಣ್ಣು, ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಸೇರಿದಂತೆ ವಿವಿಧ ರೋಗಗಳ ತಪಾಸಣೆ ನಡೆಸಿ ಔಷಧ ವಿತರಣೆ ಮಾಡಲಾಯಿತು. ಕಾರ್ಯಕ್ರಮವನ್ನು ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಿದರು.
ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಗುರು ಫಾ. ಜೇಮ್ಸ್ ಡೊಮಿನಿಕ್ ಪೊನ್ನಣ್ಣ ಅವರನ್ನು ಗೌರವಿಸಿ ಮಾತನಾಡಿ, ದೇವರು ಒಳ್ಳೆಯ ಕಾರ್ಯಗಳನ್ನು ಮಾಡಲು ಬೇಕಾದ ಚೇತನ, ಶಕ್ತಿ ದಯಪಾಲಿಸಲಿ ಎಂದು ಆಶಿಸಿದರು.ಕೊಡಗು ಜಿಲ್ಲಾ ಖಾಝಿ ಎಂ. ಎಂ. ಅಬ್ದುಲ್ಲ ಫೈಝಿ ರವರು ಮಾತನಾಡಿ, ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಅಂತೆಯೇ ವಿರಾಜಪೇಟೆ ಶಾಸಕ ಪೊನ್ನಣ್ಣ ಎಲ್ಲರನ್ನೂ ಏಕತೆಯಿಂದ ಅಭಿವೃದ್ಧಿ ಕಡೆಗೆ ಕೊಂಡೊಯ್ಯುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.
ಎಸ್‌ವೈಎಸ್ ರಾಜ್ಯಾಧ್ಯಕ್ಷ ಹಫಿಲ್ ಸಹದಿ ಮಾತನಾಡಿ, ಶಾಸಕರು ಒಗ್ಗಟ್ಟಿನಿಂದ ಎಲ್ಲರನ್ನೂ ಮುನ್ನಡೆಸುವ ಮನೋಭಾವ ಹೊಂದಿರುವುದು ಶ್ಲ್ಯಾಘನೀಯ ಎಂದರು.ಶಾಸಕ ಎ. ಎಸ್. ಪೊನ್ನಣ್ಣ ಮಾತನಾಡಿ, ನಮ್ಮ ಪರಿಸರ ಸ್ವಚ್ಛ ವಾಗಿಟ್ಟುಕೊಂಡು ಕೊಡಗಿಗೆ ಬರುವ ಪ್ರವಾಸಿಗರಿಗೆ ಮಾದರಿ ಯಾಗುವಂತೆ ನಮ್ಮ ಪರಿಸರವನ್ನು ಉಳಿಸುವ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿರಾಜಪೇಟೆಯ ಹಿರಿಯ ವಕೀಲ ಮೇರಿಯಂಡ ಕೆ. ಪೂವಯ್ಯ ಮಾತನಾಡಿದರು. ಮಾಜಿ ಎಂ. ಎಲ್. ಸಿ. ವೀಣಾ ಅಚ್ಚಯ್ಯ, ಕೆಪಿಸಿಸಿ ವಕ್ತಾರ ಲಕ್ಷ್ಮಣ ಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಪಿ. ಚಂದ್ರಕಲಾ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, , ಕೆ. ಎಂ. ಇಬ್ರಾಹಿಂ, ಮುಖಂಡರಾದ ಟಿ. ಪಿ. ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಮೀದೇರೀರ ನವೀನ್, ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ, ರಾಜೇಶ್ ಪದ್ಮನಾಭ್ ಮತ್ತಿತರರಿದ್ದರು.