ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಪೊನ್ನಂಪೇಟೆ ತಾಲೂಕು ಶ್ರೀಮಂಗಲ, ಟಿ-ಶೆಟ್ಟಿಗೇರಿ ಹಾಗೂ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹುಲಿ ಹಾವಳಿಯಿಂದ ಸಾಕುಪ್ರಾಣಿಗಳ ಮೇಲೆ ನಿರಂತರವಾಗಿ ದಾಳಿ ಆಗುತ್ತಿರುವ ಬೆನ್ನಲ್ಲೇ ಕಳೆದ ಶನಿವಾರದಿಂದ ಎರಡು ಸಾಕಾನೆಗಳ ಸಹಾಯದಿಂದ ಹುಲಿ ಸೆರೆಗೆ ನಡೆದಿರುವ ಕಾರ್ಯಾಚರಣೆ ಪ್ರದೇಶಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಮಂಗಳವಾರ ಭೇಟಿ ನೀಡಿ ಕಾರ್ಯಾಚರಣೆಯ ಪ್ರಗತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.ಈ ಸಂದರ್ಭ ಮಾತನಾಡಿದ ಅವರು ಈಗಾಗಲೇ ಈ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಹಾಗೂ ಸಾಕುಪ್ರಾಣಿಗಳ ಮೇಲೆ ನಿರಂತರವಾಗಿ ದಾಳಿ ನಡೆಸಿ ಬಲಿ ಪಡೆಯುತ್ತಿರುವ ಹುಲಿಯನ್ನು ಸೆರೆ ಹಿಡಿಯಲು ಅಗತ್ಯವಾದ ಅನುಮತಿಯನ್ನು ಸರ್ಕಾರದಿಂದ ಒದಗಿಸಲಾಗಿದೆ.
ಕಾರ್ಯಾಚರಣೆ ಸ್ಥಳದಿಂದ 500 ಮೀಟರ್ ದೂರದಲ್ಲಿ ಬ್ರಹ್ಮಗಿರಿ ಅಭಯಾರಣ್ಯವಿದ್ದು ಹುಲಿ ಅರಣ್ಯಕ್ಕೆ ಒಂದು ವೇಳೆ ತೆರಳಿದಲ್ಲಿ ಪತ್ತೆ ಹಚ್ಚಲು ಸಾಧ್ಯವಿಲ್ಲ. ಆದರೆ ಗ್ರಾಮದ ಒಳಗೆ ಹುಲಿ ಕಂಡು ಬಂದರೆ ಸೆರೆಗೆ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಹೇಳಿದರು.ಸುತ್ತಮುತ್ತ ಹಲವು ಕ್ಯಾಮೆರ ಅಳವಡಿಕೆ: ಈ ಸಂದರ್ಭದಲ್ಲಿ ಸ್ಥಳದಲ್ಲಿ ಮಡಿಕೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಅವರು ಮಾಹಿತಿ ನೀಡಿ 60 ಸಿಬ್ಬಂದಿಗಳೊಂದಿಗೆ ಎರಡು ಸಾಕಾನೆ ಸಹಿತ ಕಾರ್ಯಾಚರಣೆ ಆರಂಭಿಸಲಾಗಿದೆ.ಈಗಾಗಲೇ ಸುತ್ತಮುತ್ತ ಹಲವು ಕ್ಯಾಮೆರಗಳನ್ನು ಅಳವಡಿಸಲಾಗಿದೆ. ಸಮೀಪದ 250 ರಿಂದ 300 ಎಕರೆ ಖಾಸಗಿ ಕಾಡು ಜಾಗದಲ್ಲಿ ಕೂಂಬಿಂಗ್ ನಡೆಸಲಾಗಿದೆ. ಆದರೆ ಹುಲಿಯ ಚಲನವಲನ ಪತ್ತೆಯಾಗಿಲ್ಲ. ಹುಲಿಯ ಹೆಜ್ಜೆ ಗುರುತು ಮಾತ್ರ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು. 60 ಸಿಬ್ಬಂದಿ ತೆರಾಲು ಗ್ರಾಮದಲ್ಲಿರುವ ಅರಣ್ಯ ಇಲಾಖೆಯ ಶಿಬಿರದಲ್ಲಿ ವಾಸ್ತವ್ಯ ಹೂಡಿದ್ದು, ರಾತ್ರಿಯೂ ಸಹ ಹುಲಿಯ ಚಲನವಲನವನ್ನು ಗಮನಿಸಲಾಗುತ್ತಿದೆ. ಅತ್ಯಾಧುನಿಕ ಬೈನಾಕ್ಯುಲರ್ ವ್ಯವಸ್ಥೆಯಿಂದ ರಾತ್ರಿಯೂ ಸಹ ಹುಲಿಯ ಚಲನವಲನದ ಬಗ್ಗೆ ನಿಗಾ ಇಡಲಾಗಿದೆ. ಆಧುನಿಕ ಬೋನ್ ವ್ಯವಸ್ಥೆಯನ್ನು ಸಹ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ವಿರಾಜಪೇಟೆ ಸಾಮಾಜಿಕ ಅರಣ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಅವರು ಮಾಹಿತಿ ನೀಡಿ, ಸಾಮಾಜಿಕ ಅರಣ್ಯ ಹಾಗೂ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ವಿವರಿಸಿದರು.ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಸಕ ಪೊನ್ನಣ್ಣ ಅವರು ಖಾಸಗಿಯವರ ಒಡೆತನದಲ್ಲಿರುವ ಜಾಗವನ್ನು ಯಾವುದೇ ಕಾರಣಕ್ಕೆ ವಶಪಡಿಸಿಕೊಂಡು ಸರ್ಕಾರದ ಯೋಜನೆ ರೂಪಿಸಲು ಬಳಸುವುದಿಲ್ಲ, ಖಾಸಗಿ ಜಾಗ ಅವರ ಆಸ್ತಿ ಅವರ ಸ್ವಂತ ಸೊತ್ತಾಗಿದ್ದು, ಅದು ಅವರ ಹಕ್ಕಾಗಿದೆ ಅಂತಹ ಆಸ್ತಿಯನ್ನು ಸರ್ಕಾರದ ಯೋಜನೆಗೆ ಬಳಸಿಕೊಳ್ಳುವ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು
ಅತ್ಯಧಿಕ ಮಾನವ ವನ್ಯಪ್ರಾಣಿ ಸಂಘರ್ಷ: ಈ ಸಂದರ್ಭ ಮಾತನಾಡಿದ ರಾಜ್ಯ ವನ್ಯಜೀವಿ ಸಂಘದ ಸದಸ್ಯ ಸಂಕೇತ್ ಪೂವಯ್ಯ ಅವರು ಕೊಡಗು ಜಿಲ್ಲೆಯ ವಿರಾಜಪೇಟೆ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ಮಾನವ ವನ್ಯಪ್ರಾಣಿ ಸಂಘರ್ಷ ಉಂಟಾಗಿದೆ. ಇವುಗಳಿಗೆ ಶಾಶ್ವತವಾದ ಪರಿಹಾರವನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಪೊನ್ನಣ್ಣ ಅವರು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ವಿವರಿಸಿದರು.ಈ ಸಂದರ್ಭ ಮಾಜಿ ತಾ. ಪಂ. ಸದಸ್ಯರಾದ ಬೊಳ್ಳೇರ ಪೊನ್ನಪ್ಪ, ಪಲ್ವಿನ್ ಪೂಣಚ್ಚ, ಗ್ರಾಮ ಪಂಚಾಯಿತಿ ಅಧ್ಯಕ್ಷ ಆಮ್ಮತ್ತಿರ ರಾಜೇಶ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಟಿ. ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ತೀತಿರ ಪ್ರಭು, ಬಿರುನಾಣಿ ವಲಯ ಅಧ್ಯಕ್ಷ ಕುಪ್ಪಣಮಾಡ ಪ್ರೀತಮ್, ಸ್ಥಳೀಯ ಪ್ರಮುಖರಾದ ಅಪ್ಪಚಂಗಡ, ಕಟ್ಟೇರ ವಿಶ್ವನಾಥ್, ಬೊಟ್ಟಂಗಡ ಜಗದೀಶ್, ಚೊಟ್ಟೆಯಾಂಡಮಾಡ ಉದಯ, ಕರ್ತಮಾಡ ನಂದಾ, ಬೊಟ್ಟಂಗಡ ಪ್ರತಾಪ್, ಚೊಟ್ಟೆಯಾಂಡಮಾಡ ವಿಶ್ವನಾಥ್, ಕುಂಞಂಗಡ ಲೋಕೇಶ್, ಶ್ರೀಮಂಗಲ ವಲಯ ಅರಣ್ಯಧಿಕಾರಿ ಸಂತೋಷ್ ಹೂಗಾರ್, ಪೊನ್ನಂಪೇಟೆ ವಲಯ ಅರಣ್ಯಧಿಕಾರಿ ಶಂಕರ್, ಉಪ ಅರಣ್ಯಾಧಿಕಾರಿ ಶ್ರೀ ಶೈಲಾ, ಗ್ರಾಮಸ್ಥರು ಪಾಲ್ಗೊಂಡಿದ್ದರು.