ಸಾರಾಂಶ
ಚಿಂತಾಕಿ ಗ್ರಾಮದಲ್ಲಿಯೂ ಬಾಲಕಿಯರಿಗಾಗಿ ವಸತಿ ನಿಲಯ ನಿರ್ಮಿಸಬೇಕೆಂಬುದು ಹಲವು ದಿನಗಳ ಆಕಾಂಕ್ಷೆಯಾಗಿತ್ತು. ಜನರ ಬೇಡಿಕೆಯೂ ಇತ್ತು.
ಔರಾದ್: ಔರಾದ್ (ಬಿ) ತಾಲೂಕಿನ ಚಿಂತಾಕಿಯಲ್ಲಿ ನಿರ್ಮಿಸಲಾಗುತ್ತಿರುವ 15ಕೋಟಿ ರು. ವೆಚ್ಚದ ಸುಸಜ್ಜಿತ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ನಿಲಯ ಕಟ್ಟಡ ಕಾಮಗಾರಿಗೆ ಮಾಜಿ ಸಚಿವರು ಹಾಗೂ ಶಾಸಕ ಪ್ರಭು ಚವ್ಹಾಣ್ ಚಾಲನೆ ನೀಡಿದರು.
ಕ್ಷೇತ್ರವು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ಉದ್ದೇಶದಿಂದ ಹಲವಾರು ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುತ್ತಿದೆ. ಹೆಣ್ಣು ಮಕ್ಕಳು ಕೂಡ ಉನ್ನತ ಶಿಕ್ಷಣ ಪಡೆಯಬೇಕು. ಉತ್ತಮ ಹುದ್ದೆ ಗಿಟ್ಟಿಸಿಕೊಳ್ಳಬೇಕು. ಸ್ವಾವಲಂಬಿ ಜೀವನ ಸಾಗಿಸಬೇಕು. ಈ ದಿಶೆಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಕೆಲಸ ಕೈಗೊಳ್ಳಲಾಗುತ್ತಿದ್ದು, ಬಾಲಕಿಯರ ವಸತಿ ಶಾಲೆ ತೆರೆಯಲಾಗಿದೆ ಎಂದರು.ಚಿಂತಾಕಿ ಗ್ರಾಮದಲ್ಲಿಯೂ ಬಾಲಕಿಯರಿಗಾಗಿ ವಸತಿ ನಿಲಯ ನಿರ್ಮಿಸಬೇಕೆಂಬುದು ಹಲವು ದಿನಗಳ ಆಕಾಂಕ್ಷೆಯಾಗಿತ್ತು. ಜನರ ಬೇಡಿಕೆಯೂ ಇತ್ತು. ಅದರಂತೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಡಿ ಕಾಮಗಾರಿ ಕೈಗೆತ್ತಿಗೊಳ್ಳಲಾಗುತ್ತಿದೆ ಎಂದರು.
ಈ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಸದಾಶಯದೊಂದಿಗೆ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಶಿಕ್ಷಣದ ಅಭಿವೃದ್ಧಿಗೆ ಬೇಕಾದ ಎಲ್ಲ ಕೆಲಸ ಮಾಡಲಾಗುವುದೆಂದು ಪ್ರಭು ಚವ್ಹಾಣ್ ತಿಳಿಸಿದರು.ಕಟ್ಟಡ ಕಾಮಗಾರಿ ಗುಣಮಟ್ಟದಿಂದ ಮಾಡಬೇಕು. ಕೆಲಸದಲ್ಲಿ ಯಾವುದೇ ರೀತಿ ಲೋಪಗಳಾಗದಂತೆ ಜಾಗ್ರತೆ ವಹಿಸಬೇಕು. ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸಬೇಕು. ದೂರುಗಳು ಬಂದಲ್ಲಿ ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು.
ನಂತರ ಮೆಡಪಳ್ಳಿಯಲ್ಲಿ 20 ಲಕ್ಷದ ಸ್ಟೀಲ್ ಬ್ರಿಜ್, ಟಿಪಿಎಸ್ ತಾಂಡಾದಲ್ಲಿ ₹40 ಲಕ್ಷದ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಕೇರಬಾ ಪವಾರ, ಖಂಡೋಬಾ ಕಂಗಟೆ, ಗೋವಿಂದ ರೆಡ್ಡಿ, ಶರಣಪ್ಪ ಪಾಟೀಲ್, ಅನೀಲ ಬಿರಾದಾರ, ರಾವಸಾಹೇಬ ಪಾಟೀಲ್, ಶಿವಕುಮಾರ ಮಜಗೆ ಹಾಗೂ ಈರಾರೆಡ್ಡಿ ಸೇರಿದಂತೆ ಇತರರಿದ್ದರು.