ಸಾರಾಂಶ
ಪ್ರಭು ಚವ್ಹಾಣ್ ಅವರು ಮೂಲತಃ ಮಹಾರಾಷ್ಟ್ರ ರಾಜ್ಯದವರಾಗಿದ್ದು, ತನ್ನ ಪ್ರಭಾವ ಬಳಸಿ ಇಲ್ಲಿಯ ತಹಸೀಲ್ದಾರರ ಮೂಲಕ ತನ್ನ ಹಾಗೂ ತನ್ನ ಕುಟುಂಬಸ್ಥರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಕನ್ನಡಿಗರಿಗೆ ಮೋಸ ಮಾಡಿದ್ದಾರೆ ಎಂದು ಸೋಮನಾಥ ಮುಧೋಳಕರ್ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ಔರಾದ್ (ಬಿ) ಮೀಸಲು ಕ್ಷೇತ್ರದ ಶಾಸಕರಾಗಿ ನಕಲಿ ಜಾತಿ ಪ್ರಮಾಣ ಪತ್ರ ತಯಾರಿಸಿ 2008ರಿಂದ ಇಲ್ಲಿಯ ವರೆಗೆ ಕನ್ನಡಿಗರ ಎಲ್ಲ ಹಕ್ಕುಗಳನ್ನು ಕಬಳಿಸಿದ ಪ್ರಭು ಚವ್ಹಾಣ್ ಅವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಇದುವರೆಗೆ ಅವರು ಪಡೆದ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಅವರಿಂದ ವಸೂಲಿ ಮಾಡು ವಂತೆ ಕನ್ನಡಪರ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಸೋಮನಾಥ ಮುಧೋಳಕರ್ ಆಗ್ರಹಿಸಿದ್ದಾರೆ.ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಭು ಚವ್ಹಾಣ್ ಅವರು ಮೂಲತಃ ಮಹಾರಾಷ್ಟ್ರ ರಾಜ್ಯದವರಾಗಿದ್ದು, ತನ್ನ ಪ್ರಭಾವ ಬಳಸಿ ಇಲ್ಲಿಯ ತಹಸೀಲ್ದಾರರ ಮೂಲಕ ತನ್ನ ಹಾಗೂ ತನ್ನ ಕುಟುಂಬಸ್ಥರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಕನ್ನಡಿಗರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.2023ರಲ್ಲಿ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಔರಾದ್ ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಮಲನಗರ ತಾಲೂಕಿನ ಹಾಲಹಳ್ಳಿ ಗ್ರಾಮದ ನಿವಾಸಿ ನರಸಿಂಗ ತಂದೆ ತುಕಾರಾಮ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ, ನಾಮಪತ್ರ ಪರಿಶೀಲನೆ ದಿನದಂದು ಸೂಕ್ತ ದಾಖಲೆಗಳೊಂದಿಗೆ ನ್ಯಾಯವಾದಿಗಳ ಜೊತೆಯಲ್ಲಿ ಪ್ರಭು ಚವ್ಹಾಣ್ ಅವರ ನಾಮಪತ್ರಕ್ಕೆ ಆಕ್ಷೇಪಣೆ ಸಲ್ಲಿಸಿರುತ್ತಾರೆ. ಚುನಾವಣಾಧಿಕಾರಿಗಳು ಆಕ್ಷೇಪಣೆ ಬಗ್ಗೆ ಯಾವುದೇ ಸೂಕ್ತ ಕ್ರಮ ಕೈಗೊಂಡಿರುವುದಿಲ್ಲ. ಇದರಿಂದ ನರಸಿಂಗ ತುಕಾರಾಮ ಅವರು ಮೇಲ್ಮನವಿ ಪ್ರಾಧಿಕಾರಕ್ಕೆ 4ಡಿ ಅಡಿಯಲ್ಲಿ ಮೇಲ್ಮನವಿ ಸಲ್ಲಿಸಿರುತ್ತಾರೆ. ಆಯುಕ್ತರು ಹಾಗೂ ಮೇಲ್ಮನವಿ ಪ್ರಾಧಿಕಾರವು 22 ನವೆಂಬರ್ 2023ರಂದು ಪ್ರಭು ಚವ್ಹಾಣ್ ಅವರಿಗೆ ವಿಚಾರಣೆ ಸಭೆಯ ಸೂಚನಾ ಪತ್ರ ನೀಡಿ 16 ಡಿಸೆಂಬರ್ 2023ರಂದು ಅಗತ್ಯ ದಾಖಲೆ ಮತ್ತು ದಸ್ತಾವೇಜುಗಳೊಂದಿಗೆ ಸದರಿ ದಿನಾಂಕದಂದು ಖುದಾಗಿ ಅಥವಾ ನ್ಯಾಯವಾದಿಗಳ ಮುಖಾಂತರ ಹಾಜರಾಗುವಂತೆ ಸೂಚಿಸಿತ್ತು ಎಂದು ಮುಧೋಳ್ ತಿಳಿಸಿದರು.ಆದರೆ ಪ್ರಭು ಚವ್ಹಾಣ್ ಅವರು ಇದನ್ನು ಪ್ರಶ್ನಿಸಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿರುತ್ತಾರೆ. ಸುಮಾರು ಎರಡು ವರ್ಷಗಳ ಕಾಲ ವಾದ ಪ್ರತಿವಾದವನ್ನು ಆಲಿಸಿ 17 ಮಾರ್ಚ್ 2025ರಂದು ಕಲಬುರಗಿ ಹೈಕೋರ್ಟ್ ಪೀಠದ ನ್ಯಾಯಾಧೀಶರಾದ ಸೂರಜ್ ಗೋವಿಂದರಾಜ್ ಅವರು 220 ಪುಟಗಳ ಮಹತ್ವದ ತೀರ್ಪು ನೀಡಿದ್ದಾರೆ ಎಂದು ತಿಳಿಸಿದರು.ಸುಮಾರು 2008ರಿಂದ ಇಲ್ಲಿಯವರೆಗೆ ಎಷ್ಟು ಜನರು ನ್ಯಾಯಾಲಯಕ್ಕೆ ಹಾಗೂ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೋ ಅವರೆಲ್ಲರ ಅರ್ಜಿಗಳನ್ನು ಪ್ರಭು ಚವ್ಹಾಣಣ್ ಅವರು ತಮ್ಮ ಪ್ರಭಾವ ಬಳಸಿ ಹಿಂಪಡೆಯುವಂತೆ ಮಾಡಿದ್ದಾರೆ. ಈ ಮೂಲಕ ಕಾಲಹರಣ ಮಾಡುತ್ತ ಕನ್ನಡಿಗರಿಗೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಹೀಗಾಗಿ 4ಡಿ ಅಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು 30 ದಿನಗಳ ಒಳಗಾಗಿ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿ ಪ್ರಭು ಚವ್ಹಾಣ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಕನ್ನಡಿಗರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಕೋರುವುದಾಗಿ ತಿಳಿಸಿದ ಅವರು ಒಂದು ವೇಳೆ ಪ್ರಭು ಚವ್ಹಾಣ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬೀದರ ಜಿಲ್ಲೆ ಬಂದ್‌ಗೆ ಕರೆ ನೀಡಲಾಗುವುದು ಎಂದು ಈ ವೇಳೆ ಎಚ್ಚರಿಸಿದರು.ಕನ್ನಡ ಪರ ಸಂಘಟನೆಗಳ ಇತರೆ ಪ್ರಮುಖರಾದ ರವಿಸ್ವಾಮಿ ನಿರ್ಣಾ, ಸುಭಾಷ ಕೆನಾಡೆ, ನಿತೀಶ ಉಪ್ಪೆ, ಸೋಮನಾಥ ವರವಟ್ಟಿ (ಕೆ), ರಮೇಶ ಧೂಳಾ, ಚರಣಜೀತ ಆಣದೂರೆ, ವಿವೇಕ ಸ್ವಾಮಿ, ಶಾಮ್ ಮದನ, ಧನರಾಜ ಸಾಂಗವಿಕರ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿದ್ದರು.----