ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿಸುವಲ್ಲಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಪುತ್ತೂರು ಶಾಸಕ ಅಶೋಕ್ ರೈ ಅವರು ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಿಗೆ ಮನವಿ ಮಾಡಿದ್ದಾರೆ.ಬುಧವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕರ ನೇತೃತ್ವದ ತಂಡ ಮನವಿ ಸಲ್ಲಿಕೆ ಮಾಡಿದೆ.ದ್ರಾವಿಡ ಭಾಷೆಗಳಲ್ಲಿ ಮೂಲ ದ್ರಾವಿಡ ಭಾಷೆಯಿಂದ ಪ್ರಪ್ರಥಮವಾಗಿ ಸ್ವತಂತ್ರವಾದ ಭಾಷೆ ತುಳು. ತುಳು ಭಾಷೆಗೆ ಸುಮಾರು ೩೦೦೦ ವರ್ಷಗಳ ಇತಿಹಾಸವಿದೆ. ಪ್ರಸ್ತುತ ತುಳು ಭಾಷೆಯನ್ನು ೨ ಕೋಟಿಗಿಂತ ಹೆಚ್ಚಿನ ಸಾರ್ವಜನಿಕರು ಮಾತನಾಡುತ್ತಿರುತ್ತಾರೆ. ಪಂಚ ಡ್ರಾವಿಡ ಭಾಷೆಗಳಲ್ಲಿ ತುಳು ಭಾಷೆ ಕೂಡ ಒಂದಾಗಿರುತ್ತದೆ. ತುಳು ಭಾಷೆಯು ಸ್ವತಂತ್ರ ಲಿಪಿಯನ್ನು ಹೊಂದಿರುತ್ತದೆ. ಸದ್ರಿ ತುಳು ಭಾಷೆಯನ್ನು ಪ್ರಪಂಚದಾದ್ಯಂತ ವ್ಯವಹಾರಿಕಾ ಭಾಷೆಯಾಗಿ ಮಾತಾಡುತ್ತಿದ್ದು, ವಿಶ್ವದ ಮಾನ್ಯತೆ ಪಡೆದ ೧೩೦ ಭಾಷೆಗಳಲ್ಲಿ ತುಳು ಭಾಷೆಯು ೧೦೩ನೇ ಕೋಡ್ ಸಂಖ್ಯೆಯನ್ನು ಪಡೆದಿರುತ್ತದೆ. ಸಾಮಾಜಿಕ ಜಾಲತಾಣವಾದ ಗೂಗಲ್‌ನಲ್ಲಿ ತುಳು ಭಾಷೆಗೆ ವಿಶೇಷವಾಗಿ ಸ್ಥಾನಮಾನ ನೀಡಿ ಬೇರೆ ಭಾಷೆಯಿಂದ ತುಳುಭಾಷೆಗೆ ಭಾಷಾಂತರ ಮಾಡಲು ಅವಕಾಶ ನೀಡಲಾಗಿದೆ.ತುಳು ಭಾಷೆಯನ್ನು ರಾಜ್ಯದ ೨ನೇ ಅಧಿಕೃತ ಭಾಷೆಯನ್ನಾಗಿ ಮಾಡುವಂತೆ ಮುಖ್ಯಮಂತ್ರಿಗಳು ಹಲವಾರು ಬಾರಿ ಅಧಿವೇಶನದಲ್ಲಿ ಹಾಗೂ ಮಂಗಳೂರಿನಲ್ಲಿ ನಡೆದ ಸಮಾವೇಷದಲ್ಲಿ ಭರವಸೆ ನೀಡಿರುತ್ತಾರೆ. ಈಗಾಗಲೇ ದೇಶದ ವಿವಿಧ ಮೂರು ರಾಜ್ಯಗಳಿಂದ ವರದಿಗಳನ್ನು ಪಡೆಯಲಾಗಿದೆ ಹಾಗೂ ಸದರಿ ವರದಿಯ ಮೇಲೆ ಅಧ್ಯಯನ ಮಾಡಲು ಆಂಧ್ರ ಪ್ರದೇಶಕ್ಕೆ ೫ ಜನರ ತಂಡವನ್ನು ಈಗಾಗಲೇ ಕಳುಹಿಸಿ ವರದಿ ಪಡೆಯಲು ಸೂಚಿಸಲಾಗಿದೆ. ಆದ್ದರಿಂದ ತುಳು ಭಾಷೆಯನ್ನು ರಾಜ್ಯದ ೨ನೇ ಅಧೀಕೃತ ಭಾಷೆಯನ್ನಾಗಿ ಘೋಷಿಸುವ ಬಗ್ಗೆ ಕೂಡಲೇ ಸೂಕ್ತ ಕ್ರಮ ವಹಿಸುವಂತೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು. ಈ ಸಂದರ್ಭ ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ಗ್ಯಾರಂಟಿ ಸಮಿತಿಯ ಸಂತೋಷ್ ಕುಮಾರ್ ಭಂಡಾರಿ ಚಿಲ್ಮೆತ್ತಾರು ಮತ್ತಿತರರು ಇದ್ದರು.
;Resize=(128,128))
;Resize=(128,128))