ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ನೂತನ ಸದಸ್ಯರೊಂದಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಸಭೆ ನಡೆಸಿದರು.ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಇಸ್ಕಾನ್ ಸಂಸ್ಥೆ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಅಲ್ಲದೇ, ಶ್ರೀನಿಮಿಷಾಂಬಾ ದೇವಾಲಯದ ಅನ್ನದಾಸೋಹ ಸಮಿತಿಯಿಂದಲೂ ಊಟದ ವ್ಯವಸ್ಥೆ ಕಲ್ಪಿಸಲು ಚರ್ಚೆ ನಡೆಸಿ ಸೂಚನೆಗಳ ನೀಡಿದ್ದೇನೆ. ಸದ್ಯದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಡಲಾಗುತ್ತದೆ ಎಂದರು.
ಕಾಲೇಜಿನಲ್ಲಿ ಕೆಲ ಸಮಸ್ಯೆಗಳಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಪಟ್ಟಣದ ಪ್ರಥಮ ದರ್ಜೆ ಕಾಲೇಜನ್ನು ಉನ್ನತಿಕರಣ ಮಾಡಲು ಸರ್ಕಾರದೊಂದಿಗೆ ಚರ್ಚೆ ನಡೆಸುತ್ತೇನೆ. ಈಗಾಗಲೇ ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಅನುದಾನಕ್ಕೆ ಪತ್ರ ಬರೆಯಲಾಗಿದೆ ಎಂದರು.ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ತಕ್ಷಣ ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದೇನೆ. ಸೊಲಾರ್ ಪ್ಯಾನಲ್ ಬದಲಾಯಿಸಲಾಗುತ್ತದೆ. ಕಾಲೇಜು ಆವರಣದ ಸುತ್ತಲೂ ಸ್ವಚ್ಛತೆ ಕೈಗೊಂಡು ಗಿಡಗಳನ್ನು ನೆಟ್ಟು ಉತ್ತಮ ಪರಿಸರ ವಾತಾವರಣ ಕಲ್ಪಿಸಿಕೊಡಲಾಗುವುದು ಎಂದರು.
ಇದೇ ವೇಳೆ ನೂತನ ಸದಸ್ಯರು ಕಾಲೇಜಿನ ಅಭಿವೃದ್ದಿಗೆ ಅಗತ್ಯತೆಯ ಸಲಹೆ ಸೂಚನೆ ನೀಡಿದರು. ಸಭೆಯಲ್ಲಿ ಭಾಗವಹಿಸಿದ ನೂತನ ಸದಸ್ಯರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಶಾಸಕರು ಅಭಿನಂದಿಸಿದರು.ಈ ವೇಳೆ ಗ್ಯಾರಂಟಿ ಯೋಜನೆ ಅನುಷ್ಠಾನದ ತಾಲೂಕು ಅಧ್ಯಕ್ಷ ಎಂ.ಎಲ್. ದಿನೇಶ್, ಸದಸ್ಯರಾದ ನೆಲಮನೆ ಮಂಜುನಾಥ್, ರಜಿನಿಕಾಂತ್, ರಾಜೀವ್, ವಿಶ್ವನಾಥ್, ಸನ್ನಾಉಲ್ಲಾ, ರಾಧ ಶ್ರೀಕಂಠು, ರವಿಕುಮಾರ್, ಲೋಕೊಪಯೋಗಿ ಇಲಾಖೆ ಎಇಇ ಜಸ್ವಂತ್ ಸೇರಿದಂತೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಇದ್ದರು.