ನಿರಾಶ್ರಿತರಿಗೆ ಧೈರ್ಯ ತುಂಬಿದ ಶಾಸಕ ರಮೇಶ ಜಾರಕಿಹೊಳಿ

| Published : Jul 29 2024, 12:48 AM IST

ನಿರಾಶ್ರಿತರಿಗೆ ಧೈರ್ಯ ತುಂಬಿದ ಶಾಸಕ ರಮೇಶ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ನಿರಂತರ ಸುರಿಯುತ್ತಿರುವ ಮಹಾ ಮಳೆಯಿಂದ ಗೋಕಾಕ ನಗರ ಭಾಗಶಃ ಜಲಾವೃತ್ತವಾಗಿದ್ದು, ಭಾನುವಾರ ಶಾಸಕ ರಮೇಶ ಜಾರಕಿಹೊಳಿ ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದ ನಿರಾಶ್ರಿತರಿಗೆ ಧೈರ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ನಿರಂತರ ಸುರಿಯುತ್ತಿರುವ ಮಹಾ ಮಳೆಯಿಂದ ಗೋಕಾಕ ನಗರ ಭಾಗಶಃ ಜಲಾವೃತ್ತವಾಗಿದ್ದು, ಭಾನುವಾರ ಶಾಸಕ ರಮೇಶ ಜಾರಕಿಹೊಳಿ ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದ ನಿರಾಶ್ರಿತರಿಗೆ ಧೈರ್ಯ ಹೇಳಿದರು.

ನಗರದ ಚಿಕ್ಕೋಳಿ, ಗೋಕಾಕ-ಶಿಂಗಳಾಪುರ ಹೊಸ ಸೇತುವೆ, ಮಟನ್ ಮಾರ್ಕೆಟ್, ಕುಂಬಾರ ಓಣಿ, ಲೋಳಸೂರ ಸೇತುವೆ ಹಾಗೂ ನಗರದಲ್ಲಿ ಸ್ಥಾಪಿಸಲಾದ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ವಿತರಿಸುತ್ತಿರುವ ಆಹಾರ, ದಿನಬಳಕೆಯ ವಸ್ತುಗಳು, ಮೂಲ ಸೌಕರ್ಯಗಳನ್ನು ಪರಿಶೀಲಿಸಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕು ಆಡಳಿತ ವತಿಯಿಂದ ಪ್ರವಾಹ ಪರಿಸ್ಥಿತಿಯನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಲಾಗಿದೆ. ಸಂತ್ರಸ್ತರಿಗಾಗಿ ನಗರದಲ್ಲಿ ೨ ಕಾಳಜಿ ಕೇಂದ್ರ ತೆರೆಯಲಾಗಿದ್ದು, ೨೦೦ ಕುಟುಂಬಗಳು ಆಶ್ರಯ ಪಡೆದುಕೊಂಡಿವೆ. ತಾಲೂಕು ಆಡಳಿತದಿಂದ ಅವರಿಗೆ ಗುಣಮಟ್ಟದ ಆಹಾರ, ಹೊದಿಕೆ, ದಿನಬಳಕೆ ವಸ್ತುಗಳನ್ನು ವಿತರಿಸಲಾಗಿದ್ದು, ಆರೋಗ್ಯ ತಪಾಸಣೆಗೆ ದಿನದ ೨೪ ಗಂಟೆಗಳ ಕಾಲ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕಾಳಜಿ ಕೇಂದ್ರದಲ್ಲಿ ಯಾವುದೇ ತೊಂದರೆಯಾಗದಂತೆ ಮುತುವರ್ಜಿ ವಹಿಸಲಾಗುತ್ತಿದೆ ಎಂದ ಅವರು, ಬರುವ ಎರಡು ದಿನಗಳಲ್ಲಿ ಪ್ರವಾಹ ನದಿಯ ನೀರು ಸ್ವಲ್ಪ ಇಳಿಕೆಯಾಗುವ ನಿರೀಕ್ಷೆಯಿದ್ದು, ಯಾರು ಭಯಪಡಬಾರದು ಎಂದು ಹೇಳಿದರು.

ಗೋಕಾಕ-ಶಿಂಗಳಾಪುರ ಹೊಸ ಸೇತುವೆಯನ್ನು ಪ್ರವಾಹದ ನೀರು ಆವರಿಸುತ್ತದೆ ಎಂದು ನಾವು ಊಹಿಸಿರಲಿಲ್ಲ. ಸೇತುವೆಯ ಪಕ್ಕದ ಶಿಂಗಳಾಪುರ ಭಾಗದಲ್ಲಿ ನೀರು ನುಗ್ಗಿದೆ. ಅದನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಪ್ರವಾಹ ಕಡಿಮೆಯಾದ ಮೇಲೆ ತುರ್ತಾಗಿ ಇನ್ನಷ್ಟು ಎತ್ತಕ್ಕೆ ಏರಿಸಿ ನೀರು ನುಗ್ಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು

ನಿರಾಶ್ರಿತರಿಗೆ ಶಾಶ್ವತ ವಸತಿ ಕಲ್ಪಿಸಲು ಕ್ರಮ: ಪದೇ ಪದೆ ಮುಳುಗಡೆಯಾಗುತ್ತಿರುವ ಗೋಕಾಕ ಭಾಗದ ನಿರಾಶ್ರಿತರಿಗೆ ಶಾಶ್ವತವಾಗಿ ಪುನರ್ವಸತಿ ಕಲ್ಪಿಸಲು ಎತ್ತರದ ಪ್ರದೇಶದಲ್ಲಿ ಜಾಗೆ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಈಗಾಗಲೇ ಹಲವರಿಗೆ ಪುನರ್ವಸತಿ ಕಲ್ಪಿಸಿದ್ದರೂ ಭಾಗಶಃ ಜನರು ಪೂರ್ವಜರ ಮನೆಗಳನ್ನು ಬಿಟ್ಟು ಬರಲು ಹಿಂದೇಟು ಹಾಕುತ್ತಿದ್ದಾರೆ. ಅವರ ಮನವೊಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ ಡಾ.ಮೋಹನ ಭಸ್ಮೆ, ಡಿ.ವೈ.ಎಸ್.ಪಿ ಡಿ. ಮುಲ್ಲಾ, ಜಿಲ್ಲಾ ಪರಿಶಷ್ಟ ವರ್ಗಗಳ ಕಲ್ಯಾಣಾಧಿಕಾರಿ ನೋಡಲ್ ಅಧಿಕಾರಿ ಬಸವರಾಜ ಕುರಿಹೂಲಿ, ನಗರಸಭೆ ಪೌರಾಯುಕ್ತ ರಮೇಶ ಜಾಧವ, ಸಿಪಿಐ ಗೋಪಾಲ ರಾಠೋಡ, ಜಿಪಂ ಮಾಜಿ ಸದಸ್ಯ ಟಿ.ಆರ್. ಕಾಗಲ್ , ಪಿ.ಎಸ್.ಐ ಕೆ.ವಾಲಿಕರ, ಡಾ.ಮೋಹನ ಕಮತ್ ಸೇರಿದಂತೆ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.