ಜಿಲ್ಲೆಯಲ್ಲಿ ಬೆಳೆ ನಷ್ಟಕ್ಕೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು

| Published : Nov 01 2023, 01:00 AM IST / Updated: Nov 01 2023, 01:01 AM IST

ಜಿಲ್ಲೆಯಲ್ಲಿ ಬೆಳೆ ನಷ್ಟಕ್ಕೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ ಜಿಲ್ಲೆಯಲ್ಲಿ 131 ಕೋಟಿ ರು. ಮೌಲ್ಯದಷ್ಟು ಬೆಳೆ ಹಾನಿಯಾಗಿದೆ. ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಒತ್ತಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹಾಸನ ಮಳೆ ಬರದೆ ಜಿಲ್ಲೆಯಲ್ಲಿ 131 ಕೋಟಿ ರು. ಮೌಲ್ಯದಷ್ಟು ಬೆಳೆ ಹಾನಿಯಾಗಿದೆ. ಈ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಒತ್ತಾಯಿಸಿದರು. ನಗರದಲ್ಲಿ ಸಂಸದರ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಈಗಾಗಲೇ ಮಳೆ ಇಲ್ಲದೆ ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಲಾಗಿದೆ, ಆದರೆ ಸರ್ಕಾರ ಪರಿಹಾರ ವಿತರಣೆ ಮಾಡುವಲ್ಲಿ ವಿಳಂಬ ಮಾಡುತ್ತಿರುವುದು ಖಂಡನೀಯ. ಜಿಲ್ಲೆಯಲ್ಲಿ ಒಟ್ಟು 1 ಲಕ್ಷದ 56 ಸಾವಿರದ 600 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಸಂಪೂರ್ಣ ಹಾಳಾಗಿದೆ. ಈಗಾಗಲೇ ಜಿಲ್ಲಾಡಳಿತ ಸರ್ವೆ ನಡೆಸಿ ವರದಿ ನೀಡಿದ್ದು ಆದಾಗ್ಯೂ ಪರಿಹಾರ ವಿತರಣೆಯಲ್ಲಿ ಸರ್ಕಾರ ವಿಳಂಬ ತೋರುತ್ತಿದೆ ಎಂದು ದೂರಿದರು. ಜಿಲ್ಲೆಯಲ್ಲಿ ಒಟ್ಟು 2 ಲಕ್ಷದ 95 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತೋಟಗಾರಿಕಾ ಬೆಳೆಗಳು ಹಾಳಾಗಿದ್ದು ಈಗಾಗಲೇ ತೆಂಗು ಬೆಳೆಗೆ ರೋಗದ ಭೀತಿ ಎದುರಾಗಿದೆ. ಆದರೆ ಸರ್ಕಾರ ರೋಗಕ್ಕೆ ಔಷಧಿ ವಿತರಣೆ ಮಾಡುವಲ್ಲಿ ಕೂಡ ವಿಫಲವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಜಿಲ್ಲೆಯ ಶೇ.50ರಷ್ಟು ತೆಂಗು ಸಂಪೂರ್ಣ ನಾಶ ವಾಗಲಿದೆ. ಆದುದರಿಂದ ಕೂಡಲೇ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಔಷಧಿ ವಿತರಣೆಗೆ ಮುಂದಾಗಬೇಕು ಎಂದರು. ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಏನು: ಜೆಡಿಎಸ್ ಹಾಸನ ಜಿಲ್ಲೆಗೆ ಏನು ಕೆಲಸ ಮಾಡಿದೆ ಎಂಬ ಮಾಜಿ ಎಂ.ಎಲ್.ಸಿ ಗೋಪಾಲಸ್ವಾಮಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೇವಣ್ಣ, ಹಾಸನ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ರೈಲ್ವೆ ಮೇಲ್ಸೇತುವೆ, ಶಾಲಾ ಕಾಲೇಜುಗಳ ನಿರ್ಮಾಣ, ಹಾಸನ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸೇರಿದಂತೆ ಅನೇಕ ಕೊಡುಗೆಗಳನ್ನು ಜೆಡಿಎಸ್ ನೀಡಿದೆ. ಆದರೆ ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಏನು ಎಂದು ಮರು ಪ್ರಶ್ನೆ ಮಾಡಿದರು. ಹಾಸನ ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಶೂನ್ಯ. ಅವರಿಗೆ ಹಾಸನ ಜಿಲ್ಲೆಯ ಜನರ ಮತ ಕೇಳುವ ಯಾವುದೇ ನೈತಿಕತೆ ಇಲ್ಲ ಎಂದರು.