ಜಿಲ್ಲೆಯಲ್ಲಿ ಭೂ ಮಾಫಿಯಾ, ಅಕ್ರಮ ಕಲ್ಲುಗಣಿಗಾರಿಕೆ ಹೆಚ್ಚಾಗಿದ್ದು, ಇದೆಲ್ಲದರ ಜತೆ ಕಂದಾಯ ಇಲಾಖೆ ಶಾಮೀಲಾಗಿದೆ. ಇದರ ವಿರುದ್ಧ ಸಮಗ್ರ ತನಿಖೆ ನಡೆಸಲು ತಕ್ಷಣವೇ ವಿಶೇಷ ತನಿಖಾ ತಂಡ ರಚಿಸಿ ಕ್ರಮಕೈಗೊಳ್ಳಬೇಕು ಹಾಗೂ ಇನ್ನು ಹಾಸನ ತಹಸೀಲ್ದಾರ್ ಅವರನ್ನ ಅಮಾನತು ಮಾಡಬೇಕು. ಕೂಡಲೇ ಕಾನೂನು ಕ್ರಮ ಜರುಗಿಸದಿದ್ದರೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾಕ್ಷಿ ಸಮೇತ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಮಾಜಿ ಸಚಿವ ಎಚ್. ಡಿ. ರೇವಣ್ಣ ಆಗ್ರಹಿಸಿ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯಲ್ಲಿ ಭೂ ಮಾಫಿಯಾ, ಅಕ್ರಮ ಕಲ್ಲುಗಣಿಗಾರಿಕೆ ಹೆಚ್ಚಾಗಿದ್ದು, ಇದೆಲ್ಲದರ ಜತೆ ಕಂದಾಯ ಇಲಾಖೆ ಶಾಮೀಲಾಗಿದೆ. ಇದರ ವಿರುದ್ಧ ಸಮಗ್ರ ತನಿಖೆ ನಡೆಸಲು ತಕ್ಷಣವೇ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಕ್ರಮಕೈಗೊಳ್ಳಬೇಕು ಹಾಗೂ ಇನ್ನು ಹಾಸನ ತಹಸೀಲ್ದಾರ್ ಅವರನ್ನ ಅಮಾನತು ಮಾಡಬೇಕು. ಕೂಡಲೇ ಕಾನೂನು ಕ್ರಮ ಜರುಗಿಸದಿದ್ದರೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾಕ್ಷಿ ಸಮೇತ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಮಾಜಿ ಸಚಿವ ಎಚ್. ಡಿ. ರೇವಣ್ಣ ಆಗ್ರಹಿಸಿ ಎಚ್ಚರಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಮಾಫಿಯ ಜೊತೆ ಹಾಸನದ ತಹಸೀಲ್ದಾರ್ ಭಾಗಿ ಹಾಗೂ ಕಂದಾಯ ಇಲಾಖೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರೇವಣ್ಣ, ಕಿತ್ತಾನೆ ಗ್ರಾಮದ ದ್ಯಾವಮ್ಮ ಅವರಿಗೆ ಸೇರಿದ ಜಮೀನಿನ ಖಾತೆಯನ್ನು ಕಾನೂನುಬಾಹಿರವಾಗಿ ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿರುವುದು ದೊಡ್ಡ ಅನ್ಯಾಯ. ಪತಿಯ ನಿಧನದ ಬಳಿಕ ೩೦ ದಿನಗಳೊಳಗೆ ಪೌತಿ ಖಾತೆ ಹೆಂಡತಿಯ ಹೆಸರಿಗೆ ಮಾಡಬೇಕಾಗಿದ್ದರೂ, ನಿಯಮ ಉಲ್ಲಂಘಿಸಿ ಅಕ್ರಮ ನಡೆದಿದೆ. ಬಡ ಮಹಿಳೆಗೆ ನ್ಯಾಯ ಸಿಗದಿರುವುದು ವಿಷಾದನೀಯ ಎಂದು ಹೇಳಿದರು. ಅಮಾನತಾಗಿದ್ದ ತಹಸೀಲ್ದಾರ್‌:

ತಹಸೀಲ್ದಾರ್ ವಿರುದ್ಧ ಗಂಭೀರ ಆರೋಪ ಮಾಡಿರುವ ಅವರು, “ಹಿಂದೆ ತರೀಕೆರೆಯಲ್ಲಿ ಅಮಾನತುಗೊಂಡಿದ್ದವರನ್ನೇ ಮತ್ತೆ ಇದೇ ಹುದ್ದೆಗೆ ನೇಮಿಸಿ, ಇಂತಹ ಅಕ್ರಮಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕೋರ್ಟ್‌ನಲ್ಲೇ ಮಹಿಳೆಯ ಹೆಬ್ಬೆಟ್ಟು ಪಡೆದು ದಾಖಲೆಗಳಲ್ಲಿ ಬದಲಾವಣೆ ಮಾಡಿರುವುದು ಗಂಭೀರ ವಿಷಯ ಎಂದು ಕಿಡಿಕಾರಿದರು. ಭೂ ಮಾಫಿಯ ಜೊತೆ ಹಾಸನದ ತಹಸೀಲ್ದಾರ್ ಮತ್ತು ಹೊಳೆನರಸೀಪುರ ತಹಸೀಲ್ದಾರ್‌ ಶಾಮೀಲಾಗಿದ್ದಾರೆ ಎಂದು ಸಿಡಿಮಿಡಿಗೊಂಡ ರೇವಣ್ಣ ಅವರು, ಸಂಬಂಧಿತ ಅಧಿಕಾರಿಗಳನ್ನು ಕೂಡಲೇ ಅಮಾನತ್ತುಗೊಳಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮಗಳು ಆಡಳಿತದ ವೈಫಲ್ಯವನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಭೂಮಿಯ ಲೂಟಿ ನಿರಂತರವಾಗಿ ನಡೆಯುತ್ತಿದ್ದು, ಇದನ್ನು ತಡೆಗಟ್ಟಲು ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು. ಏರ್‌ಪೋರ್ಟ್ ಮತ್ತು ಐಐಟಿ ಯೋಜನೆಗಳಿಗೆ ಮೀಸಲಾದ ಭೂಮಿಯನ್ನೇ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಸಾರ್ವಜನಿಕ ಹಿತದ ಯೋಜನೆಗಳಿಗಾಗಿ ಕಾಯ್ದಿರಿಸಿದ ಭೂಮಿಯನ್ನೇ ಖಾಸಗಿ ಲಾಭಕ್ಕಾಗಿ ಬಳಸಲಾಗುತ್ತಿದೆ. ಮಂತ್ರಿಗಳಿಗೆ ತಾಕತ್ತಿದ್ದರೆ ಈ ಅಕ್ರಮಗಳನ್ನು ತಕ್ಷಣವೇ ನಿಲ್ಲಿಸಲಿ. ಜಿಲ್ಲಾಧಿಕಾರಿಗಳ ಕಾರ್ಯವೈಖರಿಯ ಮೇಲೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರೇವಣ್ಣ, ಜಿಲ್ಲೆಯಲ್ಲಿ ಬಡವರು ಅನ್ಯಾಯಕ್ಕೆ ಒಳಗಾಗುತ್ತಿದ್ದರೂ, ಅಧಿಕಾರಿಗಳು ಸಭೆಗಳಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸದವರು ಆ ಹುದ್ದೆಗೆ ಯೋಗ್ಯರಲ್ಲ ಎಂದು ಹೇಳಿದರು.ಡೀಸಿ ವಿರುದ್ಧ ಆರೋಪ:

ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸದೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿರುವುದು ಆಡಳಿತದ ದೌರ್ಬಲ್ಯ. ಇನ್ನು ಡಿಸಿಯವರು ಇದರಲ್ಲಿ ಕೂಡ ಶಾಮೀಲಾಗಿದ್ದು, ಕಾಂಗ್ರೆಸ್ ಏಜೆಂಟ್ ಎಂದು ಕರೆಯಬೇಕಾಗುತ್ತದೆ. ಎಷ್ಟು ದಿನ ಕಾಂಗ್ರೆಸ್ ಅಧಿಕಾರದಲ್ಲಿ ಇರುತ್ತದೆ ನಾನು ನೋಡುತ್ತೇನೆ. ಕೂಡಲೇ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೇ ಡಿಸಿ ಕಚೇರಿ ಮುಂದೆ ಸಾಕ್ಷಿ ಸಮೇತವಾಗಿ ಬೃಹತ್ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸದಾ ಅಧಿಕಾರದಲ್ಲಿರುತ್ತದೆ ಎಂಬ ಭ್ರಮೆಯಲ್ಲಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಸಚಿವರ ಹೆಸರಿನಲ್ಲಿ ಕಂದಾಯ ಇಲಾಖೆಯಲ್ಲಿ ಲೂಟಿ ನಡೆಯುತ್ತಿದೆ. ಇದನ್ನು ನಿಲ್ಲಿಸಲು ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಇತ್ತೀಚೆಗೆ ೨೨ ಮರಳು ಪಾಯಿಂಟ್‌ಗಳಿಗೆ ಟೆಂಡರ್‌ ನೀಡಿರುವ ವಿಚಾರ ಪ್ರಸ್ತಾಪಿಸಿ, ಮರಳು ದಂಧೆ ನಿಯಂತ್ರಣಕ್ಕೆ ಎಲ್ಲಾ ಮರಳು ಸಾಗಣೆ ಲಾರಿಗಳಿ ಗೆ ಜಿಪಿಎಸ್ ಅಳವಡಿಕೆ ಕಡ್ಡಾಯಗೊಳಿಸಬೇಕು. ಇಲ್ಲದಿದ್ದರೆ ಸರ್ಕಾರದ ಆದಾಯಕ್ಕೂ ನಷ್ಟವಾಗುತ್ತಿದೆ ಎಂದು ಹೇಳಿದರು.ಹೊಳೆನರಸೀಪುರ ಜಾತ್ರಾ ಮಹೋತ್ಸವದ ವೇಳೆ ಶಿಷ್ಟಾಚಾರ ಉಲ್ಲಂಘನೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿರುವುದನ್ನೂ ಉಲ್ಲೇಖಿಸಿದ ಅವರು, ಆ ದಿನ ಪರಿಸ್ಥಿತಿ ತೀವ್ರವಾಗಿತ್ತು. ಸಮಯೋಚಿತ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಅನಾಹುತ ಸಂಭವಿಸಬಹುದಾಗಿತ್ತು. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಅಂತ್ಯ ಕಾಣಿಸಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.ಇದೇ ವೇಳೆ ಜೆಡಿಎಸ್ ಮುಖಂಡ ಲಕ್ಷ್ಮಣ್, ಆಸ್ತಿ ವಿಚಾರದಲ್ಲಿ ಮೋಸ ಹೋದ ಕಿತ್ತಾನೆ ಗ್ರಾಮದ ದ್ಯಾವಮ್ಮ ಇತರರು ಇದ್ದರು.