MLA's insult to Tahsildar condemned
-ಮಾಜಿ ಸಚಿವ ಎಚ್. ಹಾಲಪ್ಪ ಆಕ್ರೋಶ । ಕೆಡಿಪಿ ಸಭೆಯಲ್ಲಿ ತಹಸೀಲ್ದಾರ್‌ಗೆ ಅವಮಾನ ಆರೋಪ----
ಕನ್ನಡಪ್ರಭ ವಾರ್ತೆ ಸಾಗರಕೆಡಿಪಿ ಸಭೆಯಲ್ಲಿ ದಕ್ಷತೆಯಿಂದ ಕೆಲಸ ಮಾಡುತ್ತಿರುವ ತಹಸೀಲ್ದಾರ್ ಡಾ. ಪ್ರತಿಭಾ ಅವರನ್ನು ಶಾಸಕರು ಅವಮಾನಿಸಿದ್ದು ಖಂಡನೀಯ. ತಹಸೀಲ್ದಾರ್‌ಗೆ ಬುದ್ಧಿ ಹೇಳಲು ಬೇರೆ ವೇದಿಕೆ ಇತ್ತು. ಸಾರ್ವಜನಿಕವಾಗಿ ಕೆಡಿಪಿ ಸಭೆಯಲ್ಲಿ ಮಹಿಳಾ ಅಧಿಕಾರಿಯನ್ನು ಅವಮಾನಿಸಿದ್ದನ್ನು ಖಂಡಿಸುತ್ತೇನೆಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಚ್.ಹಾಲಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲುಕ್ವಾರೆ ಸೇರಿ ಬೇರೆ ಬೇರೆ ಅಕ್ರಮಗಳಿಗೆ ಕಡಿವಾಣ ಹಾಕುವ ಕೆಲಸವನ್ನು ತಹಸೀಲ್ದಾರ್ ಮಾಡುತ್ತಿದ್ದಾರೆ.ಬಹುಶಃ ತಮ್ಮ ವ್ಯವಹಾರಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎನ್ನುವ ಉದ್ದೇಶದಿಂದ ಶಾಸಕರು ತಹಸೀಲ್ದಾರ್‌ಗೆ ಸಭೆಯಲ್ಲಿ ಅವಮಾನಿಸಿರಬೇಕು ಎಂದು ಟೀಕಿಸಿದರು.
ಹಲವು ಹುದ್ದೆಗಳು ಖಾಲಿ:ಪೌರಾಯುಕ್ತರು, ಕಾರ್ಯನಿರ್ವಾಹಣಾಧಿಕಾರಿಗಳು, ಕೆಎಸ್ಆರ್‌ಟಿಸಿ ಡಿಪೋ ಮ್ಯಾನೇಜರ್ ಹುದ್ದೆಗಳು ಖಾಲಿ ಇದೆ. ೧೨ ಸಬ್ ಇನ್ಸ್ಪೆಕ್ಟರ್‌ಗಳ ಪೈಕಿ ಕೇವಲ ೪ ಜನ ಮಾತ್ರ ಇದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ತಾಲೂಕಿನಲ್ಲಿ ಕೊಲೆ, ಸುಲಿಗೆ ಪ್ರಕರಣ ಜಾಸ್ತಿಯಾಗಿದ್ದು ಕಾನೂನು ವ್ಯವಸ್ಥೆ ಹಳಿ ತಪ್ಪಿದೆ ಎಂದು ದೂರಿದರು.
ಏಪ್ರಿಲ್, ಮೇ ತಿಂಗಳಿನಲ್ಲಿ ಆಗಬೇಕಿದ್ದ ಮಳೆ ಮಾಪನಾ ಕೇಂದ್ರಗಳ ದುರಸ್ತಿ ಬಗ್ಗೆ ಶಾಸಕರು ಈಗ ಆಸಕ್ತಿ ವಹಿಸುತ್ತಿದ್ದಾರೆ.ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆ ಮಾಪನಾ ಕೇಂದ್ರ ಸರಿ ಇದೆಯಾ ಎಂದು ಕೇಳುತ್ತಿರುವುದೇ ವಿಚಿತ್ರ. ಮೂರು ಬಾರಿ ಶಾಸಕನಾಗಿದ್ದೇನೆ ಎಂದು ಹೇಳಿಕೊಳ್ಳುವವರಿಗೆ ಕನಿಷ್ಠ ಇಂತಹದ್ದರ ಬಗ್ಗೆ ಜ್ಞಾನ ಇರಬೇಕು. ಉಪವಿಭಾಗೀಯ ಆಸ್ಪತ್ರೆಗೆ ₹೭೦ ಕೋಟಿ ಬಂದಿದೆ ಎನ್ನುತ್ತಾರೆ. ಹಾಗಾದರೆ, ಹಣ ಎಲ್ಲಿದೆ ಎಂದು ಜನರಿಗೆ ಲೆಕ್ಕಕೊಡಿ. ಮಾತೆತ್ತಿದರೆ ಸುಳ್ಳು ಹೇಳಿ ಇಲ್ಲದ್ದನ್ನು ಇದೆ ಎಂದು ಬಿಂಬಿಸುತ್ತಿದ್ದಾರೆ. ಸದ್ಯದಲ್ಲೇ ಅವರ ಸುಳ್ಳಿನ ಸರಮಾಲೆಯ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
ಪಕ್ಷದ ಪ್ರಮುಖರಾದ ದೇವೇಂದ್ರಪ್ಪ, ಗಣೇಶ್ ಪ್ರಸಾದ್, ಡಾ.ರಾಜನಂದಿನಿ ಕಾಗೋಡು, ಮಲ್ಲಿಕಾರ್ಜುನ ಹಕ್ರೆ, ಕೊಟ್ರಪ್ಪ ನೇದರವಳ್ಳಿ, ಸುಜಯ ಶೆಣೈ, ಸತೀಶ್ ಕೆ. ರಮೇಶ್ ಎಚ್.ಎಸ್., ಸಂತೋಷ್, ಬಿ.ಟಿ.ರವೀಂದ್ರ ಇದ್ದರು.ರೈತಸಂಘದ ಖಂಡನೆ:
ಅತ್ಯುತ್ತಮವಾಗಿ ಕೆಲಸ ಮಾಡುತ್ತಿರುವ ತಹಸೀಲ್ದಾರ್ ಅವರನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಅವಮಾನಿಸಿದ್ದು ಸರಿಯಲ್ಲ ಎಂದು ಸಂಯುಕ್ತ ರೈತ ಸಂಘದ ಅಧ್ಯಕ್ಷ ಎಂ.ಬಿ.ಮಂಜಪ್ಪ ಹಿರೇನೆಲ್ಲೂರು ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿಗೆ ಅನೇಕ ವರ್ಷಗಳ ನಂತರ ಓರ್ವ ದಕ್ಷ ತಹಸೀಲ್ದಾರ್ ಬಂದಿದ್ದಾರೆ. ಅವರ ಸೇವೆಯನ್ನು ಬಳಕೆ ಮಾಡಿಕೊಳ್ಳಬೇಕೆ ಹೊರತು ಅವರನ್ನು ಅಧಿಕಾರಿಗಳ ಸಭೆಯಲ್ಲಿ ತಲೆತಗ್ಗಿಸುವಂತೆ ಮಾಡುವುದು ಒಳ್ಳೆಯ ಲಕ್ಷಣವಲ್ಲ ಎಂದರು.
ಯಾರೋ ಹೇಳಿದ್ದಾರೆಂದು ದಾಳಿ ಮಾಡುತ್ತೀರಿ, ಮೀಡಿಯಾ ಇರಿಸಿಕೊಂಡು ಪ್ರಚಾರ ಪಡೆಯುತ್ತೀರಿ ಎಂದು ಶಾಸಕರು ಹೇಳುವುದು ಎಷ್ಟು ಸರಿ. ಓರ್ವ ಜವಾಬ್ದಾರಿಯುತ ಪ್ರಜೆಯಾಗಿ ನಾನೇ ಅಕ್ರಮಗಳ ಬಗ್ಗೆ ತಹಸೀಲ್ದಾರ್‌ಗೆ ಮಾಹಿತಿ ನೀಡಿದ್ದೇನೆ. ಹಾಗಾದರೆ, ನನ್ನನ್ನು ಶಾಸಕರು ಯಾವನೋ ಎಂದು ಸಂಭೋದಿಸಿದ್ದು ಸರಿಯೇ ಎಂದು ಪ್ರಶ್ನಿಸಿದ ಅವರು ತಕ್ಷಣ ಶಾಸಕರು ತಮ್ಮ ಮಾತನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.ಕಸ್ತೂರಿ ರಂಗನ್ ವರದಿ ವಿರುದ್ಧ ತಹಸೀಲ್ದಾರ್, ಉಪವಿಭಾಗಾಧಿಕಾರಿಗಳಿಗೆ ಮನವಿ ಕೊಟ್ಟರೆ ಏನೂ ಪ್ರಯೋಜನವಿಲ್ಲ. ಸಂಸತ್‌ನಲ್ಲಿ ಮಾತನಾಡಲು ಬಿ.ವೈ. ರಾಘವೇಂದ್ರ ಅವರನ್ನು, ವಿಧಾನಸಭೆಯಲ್ಲಿ ಮಾತನಾಡಲು ಗೋಪಾಲಕೃಷ್ಣ ಬೇಳೂರು ಅವರನ್ನು ನಾವು ಆಯ್ಕೆ ಮಾಡಿ ಕಳಿಸಿದ್ದೇವೆ. ಅಲ್ಲಿ ಜನಪ್ರತಿನಿಧಿಗಳು ನಮ್ಮ ಧ್ವನಿಯಾಗಬೇಕು. ಕೇರಳ ಮಾದರಿ ಎಂದು ಹೇಳಿ ಇನ್ನೊಂದಿಷ್ಟು ಆತಂಕ ತಂದುಕೊಳ್ಳುವುದಕ್ಕಿಂತ ವಾಸ್ತವತೆಯನ್ನು ಸಮೀಕ್ಷೆ ನಡೆಸಲು ಒತ್ತಾಯ ಮಾಡಬೇಕು ಎಂದರು. ದೇವು ಆಲಳ್ಳಿ ಇದ್ದರು.
