ಸರ್ಕಾರಿ ಶಾಲೆ ಮಕ್ಕಗಳಿಗೆ ಶಾಸಕರ ಭಾಷಾ, ಗಣಿತ ಪಾಠ

| Published : Jul 06 2025, 01:48 AM IST

ಸರ್ಕಾರಿ ಶಾಲೆ ಮಕ್ಕಗಳಿಗೆ ಶಾಸಕರ ಭಾಷಾ, ಗಣಿತ ಪಾಠ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಮನಕಲ್ಲೂರು, ಅಮೀನಗಡ, ಕೋಟೆಕಲ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಶನಿವಾರ ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್.ಬಸನಗೌಡ ತುರ್ವಿಹಾಳ ಭೇಟಿ ನೀಡಿ ಮೂಲ ಸೌಲಭ್ಯಗಳನ್ನು ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಸ್ಕಿ

ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಮನಕಲ್ಲೂರು, ಅಮೀನಗಡ, ಕೋಟೆಕಲ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಶನಿವಾರ ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್.ಬಸನಗೌಡ ತುರ್ವಿಹಾಳ ಭೇಟಿ ನೀಡಿ ಮೂಲ ಸೌಲಭ್ಯಗಳನ್ನು ಪರಿಶೀಲನೆ ನಡೆಸಿದರು.

ನಂತರ ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಫಲಿತಾಂಶ ಸುಧಾರಣೆಗಾಗಿ ಹಾಗೂ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಲಭ್ಯಕ್ಕಾಗಿ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಮುಖ್ಯವಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೌಚಾಲಯ, ಶುದ್ಧ ಕುಡಿಯುವ ನೀರಿಗಾಗಿ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಫಲಿತಾಂಶ ಸುಧಾರಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಂಡು ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಮಸ್ಕಿ ಕ್ಷೇತ್ರ ಅತಿ ಹೆಚ್ಚು ಫಲಿತಾಂಶ ಬರುವಂತೆ ಶಿಕ್ಷಕರು ಶ್ರಮ ವಹಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ತಾಪಂ ಅಮರೇಶ್ ಯಾದವ್, ಮಸ್ಕಿ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಮುದ್ದಾಪುರ್, ಜಿ.ಪಂ. ಮಾಜಿ ಸದಸ್ಯ ಕಿರಲಿಂಗಪ್ಪ, ಬಲವಂತರಾಯ ವಟಗಲ್, ಗ್ರಾಪಂ ಮಾಜಿ ಅಧ್ಯಕ್ಷ ರಾಜಸಾಬ್ ಗುಡಿಹಾಳ, ಪಿಡಿಒ ಕೃಷ್ಣ, ಕವಿತಾಳ ಠಾಣೆಯ ಪಿಎಸ್ಐ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಇನ್ನಿತರ ಮುಖಂಡರು ಇದ್ದರು.

ಶಾಸಕರಿಂದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪಾಠ ಬೋಧನೆ

ಮಸ್ಕಿ ಕ್ಷೇತ್ರ ವ್ಯಾಪ್ತಿಯ ಪಾಮಾನಕಲ್ಲೂರು ಗ್ರಾಮದ ವರ ವಲಯದಲ್ಲಿರುವ ಪ್ರೌಢಶಾಲೆಗೆ ಶಾಸಕ ಆರ್ ಬಸನಗೌಡ ಭೇಟಿ ನೀಡಿ ವಿದ್ಯಾರ್ಥಿಗಳ ಕೊಠಡಿಗೆ ತೆರಳಿ ವಿದ್ಯಾರ್ಥಿಗಳ ದಾಖಲಾತಿಯನ್ನು ಪರಿಶೀಲನೆ ನಡೆಸಿ ನಂತರ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಈ ಹಿಂದೆ ಶಾಲೆಯಲ್ಲಿ ಶಿಕ್ಷಕರು ಬೋಧಿಸಿರುವ ಕನ್ನಡ, ಇಂಗ್ಲಿಷ್ ವಿಷಯಗಳು ಹಾಗೂ ಗಣಿತ ಮಗ್ಗಿಗಳನ್ನು ಹೇಳುವಂತೆ ವಿದ್ಯಾರ್ಥಿಗಳಿಗೆ ಸ್ವತಃ ಶಾಸಕರೇ ಶಿಕ್ಷಕರ ರೀತಿಯಲ್ಲಿ ಕೇಳಿ ಎಲ್ಲರ ಗಮನ ಸೆಳೆದರು. ನಂತರ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಶಾಸಕರ ಮುಂದೆ ನಿಂತು ಗಣಿತ ಅಂಕಿ- ಸಂಖ್ಯೆಗಳು ಹೇಳಿದರು. ಇನ್ನುಳಿದ ವಿದ್ಯಾರ್ಥಿಗಳ ಬಳಿ ತೆರಳಿ ಇಂಗ್ಲಿಷ್ ನಲ್ಲಿ ವಿದ್ಯಾರ್ಥಿಗಳ ಹೆಸರು ಹಾಗೂ ತಂದೆ ಹೆಸರು ಹೇಳುವಂತೆ ವಿದ್ಯಾರ್ಥಿಗಳಿಗೆ ಕೇಳಿದರು. ನಂತರ ಮುಂದಿನ ವಾರ ಶಾಲೆಗೆ ಮತ್ತೆ ಬರುವುದರ ಒಳಗಾಗಿ ಇನ್ನಷ್ಟು ಕಲಿತುಕೊಳ್ಳಿ ನಂತರ ನಾನೇ ಖುದ್ದಾಗಿ ಬಂದು ಮತ್ತೆ ಕೇಳುತ್ತೇನೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಎಲ್‌ಕೆ ಜಿ ಮಕ್ಕಳ ಇಂಗ್ಲಿಷ್ ಕೇಳಿ ಹರ್ಷ

ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಸರ್ಕಾರಿ ಎಲ್‌ಕೆಜಿ ಶಾಲೆಗೆ ಭೇಟಿ ನೀಡಿ, ಎಲ್‌ಕೆಜಿಯ ಚಿಕ್ಕ ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆದ ನಂತರ ಮಕ್ಕಳಿಗೆ ಎಬಿಸಿಡಿ ಬರುತ್ತದೆಯೇ? ಎಂದು ಕೇಳಿದರು. ಶಾಸಕರ ಮಾತಿಗೆ ಮಕ್ಕಳು ಬರುತ್ತದೆ ಎಂದು ಉತ್ತರಿಸಿ ಎದ್ದು ನಿಂತು ಇಂಗ್ಲಿಷ್ ಅಕ್ಷರಗಳನ್ನು ಓದಿದರು. ಇದರಿಂದ ಸಂತಸಗೊಂಡ ಶಾಸಕರು ಇನ್ನಷ್ಟು ಉತ್ತಮ ರೀತಿಯಲ್ಲಿ ಮಕ್ಕಳಿಗೆ ಈಗಿನಿಂದಲೇ ಶಿಕ್ಷಣದ ಜೊತೆಗೆ ಶಿಸ್ತು ಸಂಸ್ಕಾರವನ್ನು ಕಲಿಸಿ ಇದರಿಂದ ಮುಂದಿನ ದಿನಗಳಲ್ಲಿ ಅವರು ಉನ್ನತ ಸ್ಥಾನಮಾನಕ್ಕೆ ಹೋಗಲು ಅನುಕೂಲವಾಗುತ್ತದೆ ಎಂದರು.