ತಾಲೂಕಿನ ಅಕ್ರಮ ಚಟುವಟಿಕೆಗಳಿಗೆ ಶಾಸಕರ ಬೆಂಬಲ

| Published : Dec 27 2023, 01:30 AM IST / Updated: Dec 27 2023, 01:31 AM IST

ಸಾರಾಂಶ

ತಾಲೂಕಿನ ಅಕ್ರಮ ಚಟುವಟಿಕೆಗಳಿಗೆ ಶಾಸಕರ ಬೆಂಬಲ

ಕನ್ನಡಪ್ರಭ ವಾರ್ತೆ ಇಳಕಲ್ಲ

ಇಳಕಲ್ಲ ಹಾಗೂ ಹುನಗುಂದ ತಾಲೂಕಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಕ್ರಮಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಈಗಿನ ಶಾಸಕರ ಬೆಂಬಲವಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿನ ಕಾಂಗ್ರೆಸ್‌ ಪಕ್ಷದ ಅವಧಿಯಲ್ಲಿ ಯಾವುದೇ ಹೊಸ ಕಾಮಗಾರಿಗಳು ಮಂಜೂರು ಆಗಿಲ್ಲ. ನಮ್ಮಅವಧಿಯಲ್ಲಿ ಮಂಜೂರಾದ ಮತ್ತು ನಾವು ಪೂಜೆ ಮಾಡಿದ ಕಾಮಗಾರಿಗಳನ್ನೇ ಮರಳಿ ಪೂಜೆ ಮಾಡಿ ಇದನ್ನು ನನ್ನ ಅವಧಿಯಲ್ಲಿ ಮಾಡಿದ್ದೇನೆ ಎಂದು ಹೇಳುತ್ತಿದ್ದಾರೆ. ಇನ್ನು ಇವರ ಅವಧಿಯಲ್ಲಿ ತಾಲೂಕಿನಲ್ಲಿ ಜೂಜು ಕೇಂದ್ರಗಳು, ಒಸಿ ಬರೆದುಕೊಳ್ಳುವುದು, ಮರಳು ಅಕ್ರಮ ಸಾಗಣೆ ಹೆಚ್ಚಾಗಿದೆ. ಇದಕ್ಕೆ ಅಧಿಕಾರಗಳ ನಿರ್ಲಕ್ಷ್ಯವೇ ಮೂಲ ಕಾರಣ. ಈ ವಿಷಯದ ಮೇಲೆ ಮೇಲಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.

ಇನ್ನು ಇಳಕಲ್ಲ ನಗರದ ಬನ್ನಿ ಕಟ್ಟಿ ಪ್ರದೇಶದ ಜನರಿಗೆ ಕುಡಿಯುವ ನೀರು ಪೂರೈಸುವುದಕ್ಕಾಗಿ ನೂತನ ನೀರಿನ ಟ್ಯಾಂಕ್‌ ಅನ್ನು ನಿರ್ಮಿಸಲಾಗುತ್ತಿತ್ತು. ಆದರೆ, ಈಗಿನ ಶಾಸಕರು ಆ ಕಾಮಗಾರಿ ಬಂದ್‌ ಮಾಡಿ ಬನ್ನಿಕಟ್ಟಿ ಭಾಗದ ಜನರಿಗೆ ತೊಂದರೆ ಮಾಡುತ್ತಿದ್ದಾರೆ. ಅಲ್ಲದೆ, ಇಳಕಲ್ಲ ನಗರದಲ್ಲಿ 24x7 ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ಇಳಕಲ್ಲ ಜನತೆ ನೀರಿನ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಗ್ರಾಮೀಣ ಭಾಗದ ಪಿಕೆಪಿಎಸ್‌ ಚುನಾವಣೆಯಲ್ಲಿ ರಾಜಕೀಯ ಮಾಡಿ ಅಧಿಕಾರ ದುರುಪಯೋಗ ಮಾಡಿಕೊಂಡು ಆಡಳಿತ ಹದಗೆಡಿಸುತ್ತಿದ್ದಾರೆ. ಅಲ್ಲದೇ ಇಳಕಲ್ಲ ನಗರದಲ್ಲಿ ಕೋಮ ಜಗಳಗಳು ನಡೆಯುತ್ತಿವೆ. ಹೀಗಾಗಿ ಈಗ ತಾಲೂಕಿನಲ್ಲಿ ರಾವಣರಾಜ್ಯ ಪ್ರಾರಂಭವಾಗಿದೆ ದೂರಿದರು.

ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ಅಧಿಕಾರಿಗಳು ಬಂದ್‌ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಜೊತೆ ಸೇರಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ಲಕ್ಷ್ಮಣಗುರಂ, ಶೋಭಾ ಆಮದಿಹಾಳ, ನಗರ ಘಟಕದ ಅಧ್ಯಕ್ಷ ಅರವಿಂದ ಮಂಗಳೂರ ಸೇರಿದಂತೆ ಇತರರು ಇದ್ದರು.

--

26 ಇಳಕಲ್ಲ 1