ಸಾರಾಂಶ
ಕವಿತಾಳ ಪಟ್ಟಣದ ವಿವಿಧ ಕಾಮಗಾರಿ ಸ್ಥಳಗಳಿಗೆ ಶಾಸಕ ಜಿ.ಹಂಪ್ಪಯ್ಯ ನಾಯಕ ಭೇಟಿ ನೀಡಿ ಪರಿಶೀಲಿಸಿದರು.
ಭೋಜನಾಲಯ, ಶೌಚಾಲಯ ಕಾಮಗಾರಿಗೆ ಜಿ,ಹಂಪಯ್ಯ ನಾಯಕ ಅಸಮಧಾನ
ಕನ್ನಡಪ್ರಭ ವಾರ್ತೆ ಕವಿತಾಳ:
ಪಟ್ಟಣಕ್ಕೆ ಭೇಟಿ ನೀಡಿದ ಶಾಸಕ ಜಿ,ಹಂಪಯ್ಯ ನಾಯಕ ಅವರು ಕ್ರೀಡಾಂಗಣ ನಿರ್ಮಾಣ ಮಾಡಲು ಉದ್ದೇಶಿಸಿದ ಸ್ಥಳ, ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಭೋಜನಾಲಯ, ಶೌಚಾಲಯ ಕಾಮಗಾರಿ ಹಾಗೂ ಸಂತೆ ಬಜಾರ್ ರಸ್ತೆ ಬದಿ ನಡೆಯುತ್ತಿರುವ ಚರಂಡಿ ಕಾಮಗಾರಿಯನ್ನು ಪರಿಶೀಲಿಸಿದರು.ವಸತಿ ಯುಕ್ತ ಪದವಿ ಕಾಲೇಜಿನ ಹತ್ತಿರ ಕ್ರೀಡಾಂಗಣ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದ್ದು, ಸ್ಥಳದ ದಾಖಲೆ ಪತ್ರಗಳನ್ನು ಸಲ್ಲಿಸುವಂತೆ ತಹಸೀಲ್ದಾರ ರವಿ ಎಸ್.ಅಂಗಡಿ ಅವರಿಗೆ ಹೇಳಿದರು.
ಇಲ್ಲಿನ ಬಾಲಕಯರ ಸರ್ಕಾರಿ ಪ್ರೌಢಶಾಲೆ ಪಕ್ಕದಲ್ಲಿ ನಿರ್ಮಿಸುತ್ತಿರುವ ಭೋಜನಾಲಯ ಹಾಗೂ ಶೌಚಾಲಯ ಕಾಮಗಾರಿ ಕುರಿತು ಅಸಮಧಾನ ವ್ಯಕ್ತಪಡಿಸಿದ ಶಾಸಕರು, ಇಂತಹ ಸ್ಥಳದಲ್ಲಿ ಸಣ್ಣ ಪುಟ್ಟ ಕಟ್ಟಡಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿದರೆ, ಮುಂದೆ ದೊಡ್ಡ ಕಟ್ಟಡಗಳನ್ನು ನಿರ್ಮಿಸಲು ಸ್ಥಳ ಸಿಗುವುದಿಲ್ಲ ಹೀಗಾಗಿ ತಕ್ಷಣ ಕಾಮಗಾರಿ ನಿಲ್ಲಿಸುವಂತೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ನೊಟೀಸ್ ನೀಡುವಂತೆ ಎಇಇ ಶ್ಯಾಮಲಪ್ಪಗೆ ಸೂಚಿಸಿದರು.ಮುಖ್ಯ ರಸ್ತೆಗೆ ಶೌಚಾಲಯ ನಿರ್ಮಿಸಿರುವುದು ಸರಿಯಲ್ಲ ಎಂದು ತಿಳಿಸಿದ ಶಾಸಕರು, ಪಾಳುಬಿದ್ದ ಶಿಕ್ಷಕರ ವಸತಿ ಗೃಹಗಳ ತೆರವಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬಜಾರ್ ಆಂಜನೇಯ ದೇವಸ್ಥಾನದ ಮುಂದಿನ ಚರಂಡಿ ಮಳೆ ಬಂದರೆ ತುಂಬಿ ಹರಿಯುತ್ತದೆ ಹೀಗಾಗಿ ಸ್ವಚ್ಛತೆ ಕಾಪಾಡುವಂತೆ ಪ್ರಭಾರ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಅವರಿಗೆ ಸೂಚಿಸಿದರು. ಈ ವೇಳೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ಮುಖಂಡರು ಇದ್ದರು.