ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ನೂತನ ಅಧ್ಯಕ್ಷರಾಗಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿರುವುದು ನಗರದ ರಾಜಕೀಯ ಹಾಗೂ ಅಭಿವೃದ್ಧಿ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ನಗರದ ವಿಸ್ತರಣೆ, ಹೊಸ ಬಡಾವಣೆಗಳ ಅಭಿವೃದ್ಧಿ, ನಿವೇಶನ ಯೋಜನೆ, ಭೂ ಬಳಕೆ ಹಾಗೂ ಮೂಲಸೌಕರ್ಯಕ್ಕೆ ಸಂಬಂಧಿಸಿದ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಬುಡಾದ ಸಾರಥ್ಯ ಇದೀಗ ಆಡಳಿತ ಪಕ್ಷದ ಶಾಸಕರ ಹೆಗಲೇರಿದೆ.
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ನೂತನ ಅಧ್ಯಕ್ಷರಾಗಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿರುವುದು ನಗರದ ರಾಜಕೀಯ ಹಾಗೂ ಅಭಿವೃದ್ಧಿ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ನಗರದ ವಿಸ್ತರಣೆ, ಹೊಸ ಬಡಾವಣೆಗಳ ಅಭಿವೃದ್ಧಿ, ನಿವೇಶನ ಯೋಜನೆ, ಭೂ ಬಳಕೆ ಹಾಗೂ ಮೂಲಸೌಕರ್ಯಕ್ಕೆ ಸಂಬಂಧಿಸಿದ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಬುಡಾದ ಸಾರಥ್ಯ ಇದೀಗ ಆಡಳಿತ ಪಕ್ಷದ ಶಾಸಕರ ಹೆಗಲೇರಿದೆ.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ-1987ರ ಅನ್ವಯ, ಹಿಂದಿನ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಅವರ ಸ್ಥಾನಕ್ಕೆ ಆಸೀಫ್ ಸೇಠ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬುಡಾ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಚಿಕ್ಕೋಡಿಯ ಲಕ್ಷ್ಮಣರಾವ್ ಚಿಂಗಳೆ ಅವರನ್ನು ನೇಮಕ ಮಾಡಲಾಗಿತ್ತು. ಆದರೆ, ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಅವರ ನೇಮಕಕ್ಕೆ ವಿರೋಧ ವ್ಯಕ್ತವಾಗಿತ್ತು.ಬುಡಾ ಅಧ್ಯಕ್ಷ ಸ್ಥಾನವನ್ನು ಬೆಳಗಾವಿಯ ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ನೀಡಬೇಕು. ಹೊರಗಿನವರನ್ನು ನೇಮಕ ಮಾಡಬಾರದು ಎಂಬ ಆಗ್ರಹವೂ ಕೇಳಿಬಂದಿತ್ತು. ಆದರೂ ಚಿಂಗಳೆ ಅವರನ್ನೇ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅಧಿಕಾರಾವಧಿ ಮುಗಿದ ಬಳಿಕವೂ ಅವರನ್ನು ಮುಂದುವರಿಸಿದ್ದ ಕ್ರಮ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು. ಮಾತ್ರವಲ್ಲ, ಒಳಗೊಳಗೆ ಬೂದಿಮುಚ್ಚಿದ ಕೆಂಡದಂತಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಚಿಂಗಳೆ ಅವರ ಸ್ಥಾನಕ್ಕೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರನ್ನು ನೇಮಕ ಮಾಡಿರುವುದು ಹಲವು ರಾಜಕೀಯ ಲೆಕ್ಕಾಚಾರಗಳಿಗೆ ವೇದಿಕೆ ಕಲ್ಪಿಸಿದೆ.ಬುಡಾ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್‌ನ ಹಲವು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಪೈಪೋಟಿಗೆ ಇಳಿದಿದ್ದರು. ಆದರೆ ಸರ್ಕಾರ ಅಂತಿಮವಾಗಿ ಹಾಲಿ ಶಾಸಕರನ್ನೇ ಬುಡಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಹೀಗಾಗಿ ಈ ನೇಮಕಾತಿ ಕೇವಲ ಆಡಳಿತಾತ್ಮಕ ಬದಲಾವಣೆಯೇ ಅಥವಾ ಇದರ ಹಿಂದೆ ರಾಜಕೀಯ ಲೆಕ್ಕಾಚಾರವೂ ಇದೆಯೇ ಎಂಬ ಚರ್ಚೆ ಆರಂಭವಾಗಿದೆ. ಸರ್ಕಾರದ ಅಧಿಕೃತ ಆದೇಶದಲ್ಲಿ ನೇಮಕಾತಿಗೆ ಯಾವುದೇ ನಿರ್ದಿಷ್ಟ ಕಾರಣವನ್ನು ಉಲ್ಲೇಖಿಸದಿರುವುದು ಈ ಚರ್ಚೆಗೆ ಮತ್ತಷ್ಟು ಕುತೂಹಲ ಮೂಡಿಸಿದೆ.ಬುಡಾ ಅಧ್ಯಕ್ಷ ಸ್ಥಾನ ಏಕೆ ಮಹತ್ವದ್ದು?: ಬೆಳಗಾವಿ ಭವಿಷ್ಯದ ಬೆಳವಣಿಗೆಯಲ್ಲಿ ಬುಡಾದ ಪಾತ್ರ ಪ್ರಮುಖವಾಗಿದೆ. ನಗರದ ವಿಸ್ತರಣೆ, ಹೊಸ ಬಡಾವಣೆಗಳ ಯೋಜನೆ, ನಿವೇಶನಗಳ ಅಭಿವೃದ್ಧಿ, ಭೂ ಬಳಕೆ, ಮೂಲಸೌಕರ್ಯ ಹಾಗೂ ನಗರ ಯೋಜನೆಗೆ ಸಂಬಂಧಿಸಿದ ಹಲವು ವಿಷಯಗಳಲ್ಲಿ ಪ್ರಾಧಿಕಾರ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ವೇಗವಾಗಿ ವಿಸ್ತರಿಸುತ್ತಿರುವ ಬೆಳಗಾವಿಯಲ್ಲಿ ಯೋಜಿತ ನಗರಾಭಿವೃದ್ಧಿ ದೊಡ್ಡ ಸವಾಲಾಗಿದೆ. ರಸ್ತೆ, ಒಳಚರಂಡಿ, ಕುಡಿಯುವ ನೀರು, ಸಾರ್ವಜನಿಕ ಸೌಲಭ್ಯ, ವಸತಿ ಪ್ರದೇಶಗಳ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳಲ್ಲಿ ಸಮನ್ವಯ ಅಗತ್ಯವಿದೆ. ಮಹಾನಗರ ಪಾಲಿಕೆ, ಬುಡಾ ಹಾಗೂ ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಉಂಟಾದರೆ ನಗರದ ಬೆಳವಣಿಗೆ ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ. ಹೀಗಾಗಿ ಬುಡಾದ ಅಧ್ಯಕ್ಷರಾಗಿ ಶಾಸಕರ ನೇಮಕಾತಿ ಆಡಳಿತಾತ್ಮಕವಾಗಿ ಮಾತ್ರವಲ್ಲ, ರಾಜಕೀಯವಾಗಿಯೂ ಮಹತ್ವ ಪಡೆದಿದೆ.ಮೊದಲ ಆದ್ಯತೆ ಏನಾಗಲಿದೆ?: ನೂತನ ಅಧ್ಯಕ್ಷರ ಮುಂದೆ ಹಲವು ಸವಾಲುಗಳಿವೆ. ಕಣಬರ್ಗಿ ವಸತಿ ಯೋಜನೆ ಸೇರಿದಂತೆ ಬಾಕಿ ಉಳಿದಿರುವ ಯೋಜನೆಗಳಿಗೆ ವೇಗ ನೀಡುವುದು, ನಗರ ವಿಸ್ತರಣೆಗೆ ವೈಜ್ಞಾನಿಕ ರೂಪುರೇಷೆ ಸಿದ್ಧಪಡಿಸುವುದು, ಮೂಲಸೌಕರ್ಯ ಕಲ್ಪಿಸುವುದು ಹಾಗೂ ಅಕ್ರಮ ನಿರ್ಮಾಣಗಳಿಗೆ ಕಡಿವಾಣ ಹಾಕುವುದು ಪ್ರಮುಖವಾಗಿದೆ. ಇದರ ಜತೆಗೆ ಬುಡಾದ ಹಳೆಯ ಯೋಜನೆಗಳು, ಭೂಮಿಯ ಬಳಕೆ, ನಿವೇಶನ ಹಂಚಿಕೆ ಹಾಗೂ ಬಾಕಿ ಇರುವ ಕಡತಗಳ ಸ್ಥಿತಿಗತಿ ಪರಿಶೀಲನೆ ನಡೆಸುವ ಅಗತ್ಯವೂ ಇದೆ. ಶಾಸಕರೇ ಬುಡಾ ಅಧ್ಯಕ್ಷರಾಗಿರುವುದರಿಂದ ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವುದು ಸುಲಭವಾಗಬಹುದು ಎಂಬ ನಿರೀಕ್ಷೆಯಿದೆ. ಇದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗಬಹುದು ಎಂಬ ಆಶಾಭಾವನೆಯೂ ಇದೆ.ಬುಡಾ ಅಧ್ಯಕ್ಷ ಸ್ಥಾನದಲ್ಲಿ ನಡೆದಿರುವ ಈ ಬದಲಾವಣೆ ಬೆಳಗಾವಿ ನಗರಾಭಿವೃದ್ಧಿಯ ಮುಂದಿನ ದಿಕ್ಕಿನ ಬಗ್ಗೆ ನಿರೀಕ್ಷೆ ಹುಟ್ಟಿಸಿದೆ. ಆಸೀಫ್ ಸೇಠ್ ಅವರ ಮುಂದಿನ ಕಾರ್ಯವೈಖರಿ, ಅವರು ಕೈಗೊಳ್ಳುವ ಮೊದಲ ನಿರ್ಧಾರಗಳು ಹಾಗೂ ನಗರಾಭಿವೃದ್ಧಿಗೆ ನೀಡುವ ಆದ್ಯತೆಗಳು ಈ ನೇಮಕಾತಿಯ ನಿಜವಾದ ಮಹತ್ವವನ್ನು ನಿರ್ಧರಿಸಲಿವೆ.