ಸಾರಾಂಶ
ತಿಪಟೂರಿನಲ್ಲಿ ಇ-ಖಾತಾ ಪತ್ರವನ್ನು ಶಾಸಕ ಕೆ.ಷಡಕ್ಷರಿ ವಿತರಿಸಿದರು. ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ಮತ್ತಿತರರು ಇದ್ದರು.
ಕನ್ನಡಪ್ರಭ ವಾರ್ತೆ ತಿಪಟೂರು
ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರು ತಮ್ಮ ಸ್ವತ್ತುಗಳ ಮಾಲೀಕತ್ವ ಪಡೆಯಲು ಪರದಾಡಬೇಕಾಗಿತ್ತು ಆದರೆ ಸರ್ಕಾರ ಸಾರ್ವಜನಿಕರ ತೊಂದರೆಯನ್ನು ಗಮನಿಸಿ ಮಧ್ಯವರ್ತಿಗಳಿಗೆ ಅವಕಾಶ ನೀಡದೆ ಆಸ್ತಿಯ ನಿಖರ ದಾಖಲಾತಿಗಳನ್ನು ಸಲ್ಲಿಸಿದರೆ ಅಧಿಕೃತ ಇ-ಖಾತಾ ನೀಡಲಾಗುತ್ತಿದ್ದು ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.ನಗರಸಭೆಯ ಶಾಸಕರ ಕಚೇರಿಯಲ್ಲಿ ನಗರವಾಸಿಗಳಿಗೆ ಇ-ಖಾತಾ ಪತ್ರವನ್ನು ವಿತರಿಸಿ ಮಾತನಾಡಿ, ಇದು ಬಹಳ ವರ್ಷಗಳ ಬೇಡಿಕೆಯಾಗಿದ್ದು ಸರ್ಕಾರ ಸಾರ್ವಜನಿಕರ ಕಷ್ಟ ಅರ್ಥಮಾಡಿಕೊಂಡು ನಗರದ ಆಸ್ತಿಯ ಮಾಲೀಕರು ತನ್ನದೆ ಆಸ್ತಿಯೆಂದು ನಿಖರವಾಗಿ ಗುರುತಿಸಿಕೊಂಡು ಅದಕ್ಕೆ ದಾಖಾಲಾತಿಗಳನ್ನು ಸಲ್ಲಿಸಿದರೆ ಸರ್ಕಾರದಿಂದ ಅಧಿಕೃತ ದಾಖಾಲಾತಿ ಪಡೆದುಕೊಳ್ಳುವ ಡಿಜಿಟಲ್ ಪ್ರಮಾಣ ಪತ್ರವನ್ನು (ಇ-ಖಾತಾ) ನೀಡಲಾಗುವುದು. ನಗರದ ಜನರಿಗೆ ತಮ್ಮ ಆಸ್ತಿಯ ಮೇಲೆ ಇ-ಖಾತಾ ಪಡೆಯಲು ಅನುಕೂಲವಾಗಲೆಂದು ಸರ್ಕಾರದಿಂದ ಎ ಖಾತಾ ಹಾಗೂ ಬಿ ಖಾತಾ ನೀಡಲಾಗುತ್ತಿದ್ದು ಮುಂದಿನ ಮೂರು ತಿಂಗಳವರೆಗೆ ಅವಕಾಶ ಮಾಡಿಕೊಡಲಾಗಿದೆ.
ಇಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶವಿರುವುದಿಲ್ಲ. ಅಂತಹ ಘಟನೆಗಳು ಕಂಡು ಬಂದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ನಗರಸಭೆಯ ಹಳೇ ಕಚೇರಿ, ಗಾಂಧಿನಗರದ ಪಾರ್ಕ್ ಬಳಿ, ಶಾರದನಗರ ಬೈಫ್ ಕಚೇರಿ, ಹೌಸಿಂಗ್ ಬೋರ್ಡ್ ಕಾಲೋನಿ, ಹಳೇಪಾಳ್ಯದ ರಾಮಮಂದಿರದಲ್ಲಿ ಪ್ರತ್ಯೇಕವಾಗಿ 5 ಕಡೆಯಲ್ಲಿ ಇ-ಖಾತಾ ಅರ್ಜಿ ಸ್ವೀಕರಿಸಲು ಕೇಂದ್ರಗಳನ್ನು ತೆರಯಲಾಗಿದೆ. ಸಾರ್ವಜನಿಕರು ಆನ್‌ಲೈನ್‌ಲ್ಲೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಇ-ಆಸ್ತಿ ತಂತ್ರಾಶವನ್ನು 2016 ರಿಂದ ಜಾರಿಗೊಳಿಸಿ ಒಂಭತ್ತು ವರ್ಷಗಳಲ್ಲಿ 14 ಸಾವಿರ ಇ-ಖಾತಾಗಳನ್ನು ಮಾಡಲಾಗಿದ್ದು ಉಳಿದ ಎಲ್ಲಾ ಆಸ್ತಿ ಮಾಲೀಕರು ನಿವೇಶನ ಹಾಗೂ ಕಟ್ಟಡಗಳಿಗೆ ಮೇ.10ರೊಳಗಾಗಿ ಇ-ಖಾತೆಗಳನ್ನು ಮಾಡಿಸಿಕೊಳ್ಳಬಹುದು ಎಂದರು. ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ಮಾತನಾಡಿ, ಸರ್ಕಾರದ ನಿರ್ದೇಶನದಂತೆ 2024ರ ಪೂರ್ವದಲ್ಲಿ ಅಧಿಕೃತ ಹಾಗೂ ಅನಧಿಕೃತ ಸ್ವತ್ತುಗಳಿಗೆ ಇ-ಖಾತಾ ಮತ್ತು ಬಿ-ಖಾತೆಗಳ ಇ-ಸ್ವತ್ತು ಖಾತೆ ಮಾಡಲು ಅವಕಾಶ ನೀಡಿದ್ದು, ಹೊಸ ಇ-ಸ್ವತ್ತು ತಂತ್ರಾಂಶದಲ್ಲಿ ದಾಖಲೆ ಪಡೆಯಲು ತಮ್ಮ ಸ್ವತ್ತುಗಳ ಮೂಲ ದಾಖಲೆಗಳು ಹಾಗೂ ತೆರಿಗೆ ಪಾವತಿ ರಸೀತಿ, ಅಗತ್ಯ ದಾಖಲೆಗಳೊಂದಿಗೆ ಅಧಿಕೃತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಖಾತೆ ಮಾಡಿಸಿಕೊಳ್ಳಬೇಕು. 3 ತಿಂಗಳು ಕಾಲಾವಕಾಶ ನೀಡಿದ್ದು, ನಿಗದಿತ ಕಾಲಾವಧಿಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ ಇ-ಖಾತಾ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಸಾರ್ವಜನಿಕರು ತಮ್ಮ ಆಸ್ತಿಯ ಮೇಲಿನ ತೆರಿಗೆಯನ್ನು ನಗರಸಭೆಯ ಕಚೇರಿಯಲ್ಲಿ ಪಾವತಿಸಬೇಕೆಂದರು. ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಮಾತನಾಡಿ, ನಗರದಲ್ಲಿ 30,000 ನಿವೇಶನಗಳಿದ್ದು, 16,000 ನಿವೇಶನಗಳ ಇ-ಖಾತಾ ಬಾಕಿಯಿದ್ದು, ಅನಧೀಕೃತ ಆಸ್ತಿಗಳು 8-10 ಸಾವಿರ ಆಸ್ತಿಗಳು ಬಾಕಿ ಇವೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಹೂರ್‌ಬಾನು, ವಿನುತಾ ತಿಲಕ್, ಮುನ್ನಾ ಮತ್ತಿತರರಿದ್ದರು.