ಸಾರಾಂಶ
- ಮಾಜಿ ಸಂಸದ ಸಿದ್ದೇಶ್ವರ, ದೂಡಾ ಮಾಜಿ ಅಧ್ಯಕ್ಷರ ವಿರುದ್ಧ ಟೀಕೆಗೆ ಯಶವಂತ ರಾವ್ ಆಕ್ಷೇಪ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಮಾಜಿ ಸಂಸದ ಜಿ.ಮಲ್ಲಿಕಾರ್ಜುನಪ್ಪ ಹಾಗೂ ಜಿ.ಎಂ. ಸಿದ್ದೇಶ್ವರ ಅವರನ್ನು ದಾವಣಗೆರೆಗೆ ಕರೆ ತಂದಿದ್ದು ತಾವೇ ಎನ್ನುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ, ಹಿಂದುಳಿದ ನಾಯಕರಾಗಿದ್ದ ಚನ್ನಯ್ಯ ಒಡೆಯರ್ ಬೆನ್ನಿಗೆ ಚೂರಿ ಹಾಕಿದ್ದನ್ನು ಸ್ವತಃ ಶಾಸಕ ಶಾಮನೂರು ಶಿವಶಂಕರಪ್ಪನವರೇ ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಟಿಯಲ್ಲಿ ಮಾತನಾಡಿದ ಅವರು, ಶಾಸಕ ಡಾ.ಶಿವಶಂಕರಪ್ಪ ಅವರು ಮಾಜಿ ಸಂಸದ, ದೂಡಾ ಮಾಜಿ ಅಧ್ಯಕ್ಷರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ನಮ್ಮ ಬಗ್ಗೆ ಆರೋಪ ಮಾಡುವವರ ಬಳಿ ನಿಜವಾಗಿಯೂ ಸೆಡ್ಡು ಹೊಡೆಯುವುದಾದರೆ ದಾಖಲೆಗಳ ಸಮೇತ ಬರಲಿ. ನಾನೂ ದಾಖಲೆಗಳನ್ನು ತರುತ್ತೇವೆ. ಕಾಂಗ್ರೆಸ್ಸಿನ ನಾಯಕರು ಎನಿಸಿಕೊಂಡವರು ಮಾಡುವ ಆರೋಪಗಳಿಗೆ ದಾಖಲೆಗಳ ಮೂಲಕವೇ ಉತ್ತರ ನೀಡುತ್ತೇನೆ ಎಂದರು.
ಭ್ರಷ್ಟಾಚಾರ ಆರೋಪ ಸಲ್ಲ:ನನ್ನ ಮೇಲೆ ಮಾಡಿರುವ ಆರೋಪಗಳು ಸಾಬೀತಾದರೆ ಎಲ್ಲ ಆಸ್ತಿಯನ್ನು ಹಿಂದಿರುಗಿಸುತ್ತೇನೆ. ಈ ಬಗ್ಗೆ ದೇವಸ್ಥಾನದಲ್ಲಿ ಗಂಟೆ ಸಹ ಒಡೆಯುತ್ತೇನೆ. ಸೆಡ್ಡು ಹೊಡೆಯುವ ಜಾಗ, ದಿನ, ಸಮಯವನ್ನು ಶಾಸಕರೇ ನಿರ್ಧರಿಸಲಿ. ದೂಡಾ ಕಚೇರಿಯಲ್ಲಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಮತ್ತು ಕುಟುಂಬ ಹಾಗೂ ಹಿಂದಿನ ದೂಡಾ ಅಧ್ಯಕ್ಷರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿರುವುದು ಸರಿಯಲ್ಲ. ದಾಖಲೆ ಸಮೇತ ಮೊದಲು ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಲೋಕಸಭೆ 2019ರ ಚುನಾವಣೆಯಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಮನವರಿಕೆಯಾದ ತಕ್ಷಣ ಚುನಾವಣೆಯಿಂದ ಹಿಂದೆ ಸರಿದು, ಹಿಂದುಳಿದ ವರ್ಗದ ಮುಖಂಡನಿಗೆ ಟಿಕೆಟ್ ಕೊಡಿಸುವುದಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಸೋಲಿಗೆ ಕಾರಣರಾಗಿದ್ದು ಯಾರು? ಸಿದ್ದೇಶ್ವರ, ದೂಡಾ ಮಾಜಿ ಅಧ್ಯಕ್ಷರ ಮೇಲೆ ಗುರುತರ ಆರೋಪ ಮಾಡಿದವರಿಗೆ ನಿಜವಾಗಲು ಸೆಡ್ಡು ಹೊಡೆಯುವ ತಾಕತ್ತಿದ್ದರೆ ನಿಮ್ಮದೇ ಪಕ್ಷ ರಾಜ್ಯ, ಪಾಲಿಕೆ, ದೂಡಾದಲ್ಲಿದೆ. ನಿಮ್ಮವರೇ ಮಂತ್ರಿ, ಸಂಸದರು, ಶಾಸಕರಿದ್ದು, ಎಲ್ಲವೂ ಕಾಂಗ್ರೆಸ್ ಕಪಿಮುಷ್ಟಿಯಲ್ಲೇ ಇವೆ. ನೀವು ಯಾವುದೇ ತನಿಖೆ ಮಾಡಿಸಿ. ತನಿಖೆಯಲ್ಲಿ ನಮ್ಮದು ತಪ್ಪೆಂದಾದರೆ ನೀವು ಹೇಳುವ ಶಿಕ್ಷೆಗೆ ಗುರಿಯಾಗುತ್ತೇವೆ ಎಂದು ತಿಳಿಸಿದರು.ದೂಡಾದಿಂದ ನಿಮ್ಮ ಸಂಸ್ಥೆಗೆ ಎಷ್ಟು ಆಸ್ತಿ ಬರೆದುಕೊಂಡಿದ್ದೀರಿ? ಅದೇ ರೀತಿ ಬಡಾವಣೆ ಎಸ್.ಎಂ. ಕೃಷ್ಣ ಸಿಎಂ ಇದ್ದಾಗ ಮೂಲೆ ನಿವೇಶನ ತುಂಡರಿಸಿ, ಯಾರು ಯಾರ ಹೆಸರಿಗೆ ಬರೆಸಿ ಕೊಂಡಿದ್ದೀರಿ? 1996ರಲ್ಲಿ ವಿದ್ಯುತ್ ಕಳವು ಕೇಸ್‌ನಲ್ಲಿ ದಂಡ ಕಟ್ಟಿದ್ದು ಯಾರು? ಮಾಜಿ ಶಾಸಕ ಗಾಂಜಿ ವೀರಪ್ಪ ಸಮಾಧಿ, ರಸ್ತೆ, ಪಾರ್ಕ್ ಜಾಗ ಕಬಳಿಸಿ, ಮಾಲ್ ಕಟ್ಟಿದ್ದು ಯಾರೆಂಬ ಬಗ್ಗೆ ನಮ್ಮಲ್ಲೂ ದಾಖಲೆ ಇವೆ. ನೀವು ಹೇಳಿದ ಸ್ಥಳ, ದಿನ, ಸಮಯದಂದು ಚರ್ಚೆಗೆ ದಾಖಲೆ ಸಮೇತ ಬರುತ್ತೇವೆ. ನಿಮ್ಮಲ್ಲಿ ದಾಖಲೆ ಇದ್ದರೆ ಚರ್ಚೆಗೆ ಬನ್ನಿ ಎಂದು ಪ್ರತಿ ಸವಾಲು ಹಾಕಿದರು.
ಬಿಜೆಪಿ ಮುಖಂಡರಾದ ಕೊಂಡಜ್ಜಿ ಜಯಪ್ರಕಾಶ, ಶಿವನಗೌಡ ಟಿ.ಪಾಟೀಲ್, ಟಿಂಕರ್ ಮಂಜಣ್ಣ, ಕಿಶೋರಕುಮಾರ ಇತರರು ಇದ್ದರು.- - -
ಬಾಕ್ಸ್ * ಬಾಯಿ ಚಟಕ್ಕೆಂದು ಮಾತನಾಡಬೇಡಿ ಬೆಂಗಳೂರಿನ ರೌಡಿ ಕಾಲಪತ್ತಾರ್‌ಗೆ 1998ರ ಲೋಕಸಭೆ ಚುನಾವಣೆ ವೇಳೆ ರೌಡಿಸಂ ಮಾಡಿಸಲಿಕ್ಕೆ ಯಾರು ಕರೆಸಿದ್ದರು? ಶಾಮನೂರು ಆರೋಪ ಮಾಡಿದಂತೆ ನಾವ್ಯಾರೂ ರೌಡಿಗಳಲ್ಲ. ಬಾಯಿ ಚಟಕ್ಕೆಂದು ಮಾತನಾಡಬೇಡಿ, ಕಾಂಗ್ರೆಸ್ಸಿನವರ ಹಗರಣಗಳ ಪಟ್ಟಿಯೇ ನನ್ನಲ್ಲಿದೆ. ಹೈಟೆಕ್ ಆಸ್ಪತ್ರೆ ಕಟ್ಟಲು ಲೈಸೆನ್ಸ್ ಪಡೆದಿದ್ದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಿ. ಬಿಜೆಪಿ ವಿಚಾರ, ಸಿದ್ದೇಶ್ವರರ ಬಗ್ಗೆ ಶಾಮನೂರು ಮಾತನಾಡಿದ್ದಾರೆ. ನಮ್ಮ ಪಕ್ಷದ ವಿಚಾರ ಕಾಂಗ್ರೆಸ್ಸಿನವರಿಗೇಕೆ? ನಾವು ಮಾತನಾಡುತ್ತೇವೆ. ಮುಂದೆ ಎಲ್ಲರೂ ಸೇರಿ ಪಕ್ಷ ಕಟ್ಟುತ್ತೇವೆ. ಶಾಮನೂರು ಮನೆಯಲ್ಲೇನಾದರೂ ಜಿ.ಎಂ. ಸಿದ್ದೇಶ್ವರ ಅತ್ತಿದ್ದರಾ ಎಂದು ಯಶವಂತ ರಾವ್ ಕಾಂಗ್ರೆಸ್ ಹಿರಿಯ ಶಾಸಕರನ್ನು ಪ್ರಶ್ನಿಸಿದರು.- - - -2ಕೆಡಿವಿಜಿ1:
ದಾವಣಗೆರೆಯಲ್ಲಿ ಶುಕ್ರವಾರ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.