ಸಾರಾಂಶ
ಬಸವಕಲ್ಯಾಣ : ಸಾವಿರಾರು ಜನರ ಮಧ್ಯ ಬಸವಕಲ್ಯಾಣದ ಕಟ್ಟಾ ರಾಜಕೀಯ ವಿರೋಧಿಗಳಾದ ಶಾಸಕ ಶರಣು ಸಲಗರ ಹಾಗೂ ಮಾಜಿ ಎಂಎಲ್ಸಿ ವಿಜಯಸಿಂಗ್ ಈ ಇಬ್ಬರೂ ನಾಯಕರು ಕೈ-ಕೈ ಮಿಲಾಯಿಸಿದ್ರು, ಗಿರ್ರನೆ ಗಿರಕಿ ಹೊಡೆಯುತ್ತ ನೆಲಕ್ಕೆ ಬಿದ್ರು. ಹಾಕಿದ್ದ ಬಟ್ಟೆ ಎಲ್ಲ ಮಣ್ಣು ಧೂಳಾಗಿ ಹೋಯ್ತು. ತಾಲೂಕಿನ ಆಲಗೂಡ ಗ್ರಾಮದ ಆದಿನಾಥ ಮಂದಿರದಲ್ಲಿ ನಡೆದ ನಾಥಷಷ್ಠಿ ಮಹೋತ್ಸವದ ದಿಂಡಿ ಮೆರವಣಿಗೆಯಲ್ಲಿ ಪಾಲ್ಗೊಂಡ ಜನಸ್ತೋಮ ಇದಕ್ಕೆ ಸಾಕ್ಷಿಯಾಯಿತು.
ಅಷ್ಟಕ್ಕೂ ಕೈಕೈ ಮಿಲಾಯಿಸಿದ್ರು ಅಂದ್ರೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ: ನಾಥಷಷ್ಠಿ ಮಹೋತ್ಸವದ ದಿಂಡಿ ಮೆರವಣಿಗೆಯ ನಂತರ ಮೊಸರಿನ ಗಡಿಗೆ ಒಡೆಯುವ ಸ್ಥಳದಲ್ಲಿ ವಿವಿಧ ಸಾಂಪ್ರದಾಯಿಕ ಚುಟುವಟಿಕೆ ನಡೆಯುತ್ತಿದ್ದ ಸಮಯದಲ್ಲಿ ಅಲ್ಲಿಗೆ ಆಗಮಿಸಿದ್ದ ಶಾಸಕ ಶರಣು ಸಲಗರ ಹಾಗೂ ಮಾಜಿ ಶಾಸಕ ವಿಜಯಸಿಂಗ್ ಅವರಿಬ್ಬರಿಗೂ ಫುಗಡಿ ಆಟ ಆಡುವಂತೆ ಜನ ದುಂಬಾಲು ಬಿದ್ರು. ಮಹಾರಾಷ್ಟ್ರ ಔಸಾದ ಗಹೀನಿನಾಥ್ ಮಹಾರಾಜರ ಮನವೊಲಿಕೆಗೆ ಇಬ್ಬರು ನಾಯಕರು ಕೈ-ಕೈ ಮಿಲಾಯಿಸಿ ಫುಗಡಿ ಆಟವಾಡಲು ಆರಂಭಿಸುತ್ತಿದ್ದಂತೆ ಆಯ ತಪ್ಪಿದ ಶರಣು ಸಲಗರ ನೆಲಕ್ಕೆ ಬಿದ್ದರು, ಅವರ ಕೈ ಹಿಡಿದಿದ್ದ ವಿಜಯಸಿಂಗ್ ಸಹ ಆಯ ತಪ್ಪಿ ಬಿದ್ದರು.
ಬಸವಕಲ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಶರಣು ಸಲಗರ ಎದುರಾಳಿಯಾಗಿದ್ದ ವಿಜಯ ಸಿಂಗ್ ಸೋಲನ್ನೊಪ್ಪಿದ್ದರು. ಇದೀಗ ಫುಗಡಿ ಆಟದಲ್ಲಿ ಸಲಗರಗೆ ಕುಸಿದು ಬೀಳುವಂತೆ ಮಾಜಿ ಎಂಎಲ್ಸಿ ವಿಜಯ ಸಿಂಗ್ ಮಾಡಿದರು ಎಂದು ಜನ ಮಾತಾಡಿಕೊಳ್ಳಲಾರಂಭಿಸಿದರು.
ಆಟದಲ್ಲಿ ಕುಸಿದು ಬಿದ್ದ ಇಬ್ಬರು ನಾಯಕರನ್ನು ಸೇರಿದ ಜನರು ಮೇಲೆತ್ತಿದರು. ದಿಂಡಿ ಮೆರವಣಿಗೆಯಲ್ಲಿ ಶಾಸಕ ಸಲಗರ, ವಿಜಯಸಿಂಗ್ ಫುಗಡಿ ಆಟ ಗಮನ ಸೆಳೆಯಿತು.