ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ವಿವಿಧ ಸಮಸ್ಯೆಗಳ ಕುರಿತಂತೆ ಅಹವಾಲುಗಳ ಮಹಾಪೂರವೇ ಹರಿಸಿದರು. ಜಮೀನು ಖಾತೆ, ರಸ್ತೆ, ಕುಡಿಯುವ ನೀರು, ಮನೆ, ನಿವೇಶನ, ಸರ್ವೆ, ವಿದ್ಯುತ್ ಕಂಬಗಳ ದುರಸ್ತಿ ಹಾಗೂ ಬಸ್ ಸೌಲಭ್ಯ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಜನರು ಮನವಿಗಳನ್ನು ಸಲ್ಲಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಕೆ. ಎಂ. ಶಿವಲಿಂಗೇಗೌಡ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ವಿವಿಧ ಸಮಸ್ಯೆಗಳ ಕುರಿತಂತೆ ಅಹವಾಲುಗಳ ಮಹಾಪೂರವೇ ಹರಿಸಿದರು. ಜಮೀನು ಖಾತೆ, ರಸ್ತೆ, ಕುಡಿಯುವ ನೀರು, ಮನೆ, ನಿವೇಶನ, ಸರ್ವೆ, ವಿದ್ಯುತ್ ಕಂಬಗಳ ದುರಸ್ತಿ ಹಾಗೂ ಬಸ್ ಸೌಲಭ್ಯ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಜನರು ಮನವಿಗಳನ್ನು ಸಲ್ಲಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಕೆ. ಎಂ. ಶಿವಲಿಂಗೇಗೌಡ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗಗಳಲ್ಲಿ ಕೆಲಸ ಮಾಡುವ ಪಿಡಿಒಗಳು ಮತ್ತು ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದರೆ ಜನರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದರು. ಸಾರ್ವಜನಿಕರು ನೀಡುವ ಅರ್ಜಿಗಳಿಗೆ ಕನಿಷ್ಠ ಐದು ದಿನಗಳೊಳಗೆ ಉತ್ತರ ನೀಡಬೇಕು ಎಂದು ಸೂಚಿಸಿದರು. ಗ್ರಾಮೀಣಾಭಿವೃದ್ಧಿಯೇ ತಾಲೂಕು ಅಭಿವೃದ್ಧಿಗೆ ಮೂಲ ಎಂದು ಹೇಳಿದರು.ತಹಸೀಲ್ದಾರ್‌ ಸಂತೋಷ್ ಕುಮಾರ್ ಮಾತನಾಡಿ, ಜನಸಂಪರ್ಕ ಸಭೆಯಲ್ಲಿ ಒಟ್ಟು 92 ಅರ್ಜಿಗಳು ಸ್ವೀಕರಿಸಲಾಗಿದ್ದು, ಪ್ರತಿಯೊಂದು ಮನವಿಗೂ ಸಂಬಂಧಿಸಿದ ಇಲಾಖೆ ಮೂಲಕ ಸ್ಪಂದಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಗ್ರಾಮೀಣ ಭಾಗದ ಜನರು ಸಣ್ಣ ಸಮಸ್ಯೆಗಳಿಗೆ ಕಚೇರಿಗಳಿಗೆ ಅಲೆದಾಡದಂತೆ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ನೀಡಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಜಮೀನು ಮಂಜೂರು ಖಾತೆ, ಚಿಕ್ಕೂರು ಗ್ರಾಮದ ರುದ್ರಭೂಮಿ ರಸ್ತೆಗೆ ಅನುದಾನ, ನಿವೇಶನ ಹಕ್ಕುಪತ್ರ ವಿತರಣೆ, ಚಕ್ಕುಬಂಧಿ ತಿದ್ದುಪಡಿ, ಕುಡಿಯುವ ನೀರಿನ ಸೌಲಭ್ಯ, ಸರ್ವೇ ಸಮಸ್ಯೆ, ಕಣಕಟ್ಟೆ ಭಾಗದ ಜನರಿಗೆ ಮನೆ ಹಾಗೂ ನಿವೇಶನ, ತಳಲೂರು ಗ್ರಾಮದಲ್ಲಿ ವಿದ್ಯುತ್ ಕಂಬಗಳ ದುರಸ್ತಿ, ನಾರಾಯಣಘಟ್ಟ ಹಳ್ಳಿಯ ದನಕರುಗಳಿಗೆ ರಸ್ತೆ ವ್ಯವಸ್ಥೆ, ಬಿಪಿಎಲ್ ಕಾರ್ಡ್ ವಿತರಣೆ, ಬೋರನಕೊಪ್ಪಲಿನಲ್ಲಿ ಟಿಸಿ ಅಳವಡಿಕೆ, ಕಾಂಕ್ರಿಟ್ ರಸ್ತೆ ನಿರ್ಮಾಣ, ನಿರಂತರ ಜ್ಯೋತಿ ಯೋಜನೆ, ಬಸ್ ನಿಲ್ದಾಣ ನಿರ್ಮಾಣ, ನಗರದ ಮುಖ್ಯ ರಸ್ತೆಗಳಿಗೆ ಸಿ.ಸಿ. ಕ್ಯಾಮೆರಾ ಅಳವಡಿಕೆ, ಚಿಕ್ಕೂರು ಗ್ರಾಮಕ್ಕೆ ಬಸ್ ಸೌಲಭ್ಯ, ಸಾಲದಪುರ ಶಾಲಾ ಆಟದ ಮೈದಾನಕ್ಕೆ ಖಾತೆ ಹಾಗೂ ವಾಸದ ಮನೆಗಳಿಗೆ ಹಕ್ಕುಪತ್ರ ಸೇರಿದಂತೆ ಹಲವು ಬೇಡಿಕೆಗಳು ಕೇಳಿಬಂದವು. ಗಂಗಣ್ಣ ಮೋಹನ್ ಕುಮಾರ್‌, ಎತ್ತಿನಹೊಳೆ ಎಇಇ ಇಂದುಕುಮಾರ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.