ಸಾಂಪ್ರದಾಯಿಕ ಕೃಷಿಯ ಜೊತೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಹೆಚ್ಚಿನ ಉತ್ಪಾದನೆ ಪಡೆಯುವತ್ತ ರೈತರು ಗಮನಹರಿಸಬೇಕು. ಮೆಕ್ಕೆಜೋಳವನ್ನು ವಾಣಿಜ್ಯ ಬೆಳೆಯಾಗಿ ಪರಿಗಣಿಸಿ, ಎಥೆನಾಲ್ ಉತ್ಪಾದನೆ ಸೇರಿದಂತೆ ಮೌಲ್ಯವರ್ಧಿತ ಕೃಷಿಗೆ ಮುಂದಾದರೆ ರೈತರಿಗೆ ಹೆಚ್ಚಿನ ಲಾಭ ದೊರೆಯಲಿದೆ. ಕಬ್ಬು ಮತ್ತು ಮೆಕ್ಕೆಜೋಳವನ್ನು ದೇಶದಲ್ಲೇ ಖರೀದಿಸಿ ಎಥೆನಾಲ್ ಉತ್ಪಾದಿಸಬಹುದಾದರೂ, ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ನೀತಿ ರೂಪಿಸದಿರುವುದು ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆಭಾರತದ ಬೆನ್ನೆಲುಬು ರೈತನೆಂದು ಮಹಾತ್ಮ ಗಾಂಧೀಜಿ ಆಗಲೇ ಹೇಳಿದ್ದರು. ರೈತರ ಹೋರಾಟದ ಮೂಲಕವೇ ಗ್ರಾಮ ಸ್ವರಾಜ್ಯದ ಕನಸು ಕಂಡ ಮಹಾನ್ ಚಿಂತಕರು ಅವರು ಎಂದು ಶಾಸಕ ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.
ತಾಲೂಕು ಕಚೇರಿ ಆವರಣದಲ್ಲಿ ಕೃಷಿ ಇಲಾಖೆ, ಕೃಷಿಕ ಸಮಾಜ ಹಾಗೂ ವಿವಿಧ ರೈತ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರು ಮಣ್ಣಿನಲ್ಲಿ ಬೆವರು ಸುರಿಸಿ ದುಡಿದರೆ ಸಮಾಜಕ್ಕೆ ಅನ್ನ ದೊರೆಯುವುದರ ಜೊತೆಗೆ ದೇಶದ ಅಭಿವೃದ್ಧಿಗೂ ಸಹಕಾರವಾಗುತ್ತದೆ. ಭಾರತದಲ್ಲಿ ಶೇ. 75ರಿಂದ 80ರಷ್ಟು ಜನರು ರೈತವರ್ಗಕ್ಕೆ ಸೇರಿದವರಾಗಿದ್ದು, ಕೃಷಿಯನ್ನೇ ಆಧಾರವಾಗಿ ಬದುಕುತ್ತಿರುವ ರಾಷ್ಟ್ರಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದೆ ಎಂದು ತಿಳಿಸಿದರು.ಸಾಂಪ್ರದಾಯಿಕ ಕೃಷಿಯ ಜೊತೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಹೆಚ್ಚಿನ ಉತ್ಪಾದನೆ ಪಡೆಯುವತ್ತ ರೈತರು ಗಮನಹರಿಸಬೇಕು. ಮೆಕ್ಕೆಜೋಳವನ್ನು ವಾಣಿಜ್ಯ ಬೆಳೆಯಾಗಿ ಪರಿಗಣಿಸಿ, ಎಥೆನಾಲ್ ಉತ್ಪಾದನೆ ಸೇರಿದಂತೆ ಮೌಲ್ಯವರ್ಧಿತ ಕೃಷಿಗೆ ಮುಂದಾದರೆ ರೈತರಿಗೆ ಹೆಚ್ಚಿನ ಲಾಭ ದೊರೆಯಲಿದೆ. ಕಬ್ಬು ಮತ್ತು ಮೆಕ್ಕೆಜೋಳವನ್ನು ದೇಶದಲ್ಲೇ ಖರೀದಿಸಿ ಎಥೆನಾಲ್ ಉತ್ಪಾದಿಸಬಹುದಾದರೂ, ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ನೀತಿ ರೂಪಿಸದಿರುವುದು ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.ತಾಲೂಕಿನಲ್ಲಿ ರೈತರ ಹಿತದೃಷ್ಟಿಯಿಂದ ಹೊಸ ತರಕಾರಿ ಮಾರುಕಟ್ಟೆ, ನಿರಂತರ ಜ್ಯೋತಿ ವ್ಯವಸ್ಥೆ, ನೀರಿನ ಸಂರಕ್ಷಣೆಗೆ 2 ಸಾವಿರಕ್ಕೂ ಅಧಿಕ ಚೆಕ್‌ಡ್ಯಾಂಗಳ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಎತ್ತಿನಹೊಳೆ, ಅಪ್ಪರ್ ಭದ್ರ ಹಾಗೂ ಹೇಮಾವತಿ ನೀರಾವರಿ ಯೋಜನೆಗಳ ಅನುಷ್ಠಾನದಿಂದ ಮುಂದಿನ ವರ್ಷಗಳಲ್ಲಿ ಬರಗಾಲದ ಆತಂಕದಿಂದ ರೈತರು ಮುಕ್ತರಾಗಲಿದ್ದಾರೆ ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ್ ಮಾತನಾಡಿ, ಡಿಸೆಂಬರ್ 23ರಂದು ದೇಶದ ಐದನೇ ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ರಾಷ್ಟ್ರೀಯ ರೈತ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. 1979ರಿಂದ 1980ರವರೆಗೆ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ ಚೌಧರಿ ಚರಣ್ ಸಿಂಗ್ ಅವರು ರೈತ ನಾಯಕ ಹಾಗೂ ಜನಾನುರಾಗಿ ಎಂದು ಖ್ಯಾತರಾಗಿದ್ದು, ರೈತರ ಸಾಲಭಾರ ನಿವಾರಣೆಗೆ ಸಂಬಂಧಿಸಿದ ಮಸೂದೆಯನ್ನು ದೇಶಕ್ಕೆ ಪರಿಚಯಿಸಿದ ಮಹತ್ವದ ಕೊಡುಗೆ ನೀಡಿದ್ದಾರೆ. ಗ್ರಾಮೀಣ ಅಭಿವೃದ್ಧಿಗೆ ಅವರ ಪಾತ್ರ ಅನನ್ಯವಾಗಿದೆ ಎಂದು ಸ್ಮರಿಸಿದರು.
ದೇಶದ ಅಭಿವೃದ್ಧಿಗೆ ರೈತರ ಆರ್ಥಿಕ ಬೆಳವಣಿಗೆ ಪ್ರಮುಖವಾಗಿದ್ದು, ರಾಷ್ಟ್ರದ ಜನಸಂಖ್ಯೆಯ ಸುಮಾರು ಶೇ. 80ರಷ್ಟು ಮಂದಿ ರೈತವರ್ಗಕ್ಕೆ ಸೇರಿದವರಾಗಿದ್ದಾರೆ. ಈ ಕಾರಣದಿಂದ ರೈತ ದಿನಾಚರಣೆ ಅರ್ಥಪೂರ್ಣವಾಗಬೇಕೆಂದರೆ ಸರ್ಕಾರದ ವಿವಿಧ ಯೋಜನೆಗಳು ಪರಿಣಾಮಕಾರಿಯಾಗಿ ರೈತರಿಗೆ ತಲುಪಬೇಕು ಎಂದು ಅಭಿಪ್ರಾಯಪಟ್ಟರು.ಗ್ಯಾರಂಟಿ ಸಮಿತಿಯ ಅಧ್ಯಕ್ಷ ಧರ್ಮಶೇಖರ್ ಮಾತನಾಡಿ, ಸರ್ಕಾರವು ರೈತರಿಗಾಗಿ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಆದರೆ ಆ ಯೋಜನೆಗಳನ್ನು ತಾಲೂಕು ಮಟ್ಟಕ್ಕೆ ತಂದು ರೈತರಿಗೆ ನೇರವಾಗಿ ತಲುಪಿಸುವಲ್ಲಿ ಶಾಸಕರ ಪಾತ್ರ ಅಪೂರ್ವವಾಗಿದೆ, ರೈತರಿಗೆ ಅಗತ್ಯವಿರುವ ವಿದ್ಯುತ್, ನೀರು ಹಾಗೂ ಸರ್ಕಾರದ ಯಂತ್ರೋಪಕರಣಗಳು ಸಮಯಕ್ಕೆ ಸರಿಯಾಗಿ ದೊರಕುವಂತೆ ಸಮರ್ಥವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಪ್ರಶಂಶಿಸಿದರು.
ಒಂದು ಕಾಲದಲ್ಲಿ ಬರಪೀಡಿತ ಪ್ರದೇಶವಾಗಿದ್ದ ತಾಲೂಕನ್ನು ವಿವಿಧ ಮೂಲಗಳಿಂದ ನೀರನ್ನು ತರಿಸುವ ಮೂಲಕ ನೀರಾವರಿ ತಾಲೂಕಾಗಿಸುವ ಕಾರ್ಯವನ್ನು ಪ್ರಾಮುಖ್ಯತೆಯಿಂದ ಕೈಗೊಳ್ಳಲಾಗಿದ್ದು, ಇದರಿಂದ ರೈತ ಸಮುದಾಯಕ್ಕೆ ಭಾರೀ ಅನುಕೂಲವಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸ್ವಸಹಾಯ ಸಂಘಗಳ ಮಹಿಳೆಯರಿಗೆ ರು. 50,000 ಸ್ವತ್ತು ನಿಧಿ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಂತೋಷ್ ಕುಮಾರ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ದಯಾನಂದ್, ಟಿಪಿಎಂಸಿ ಅಧ್ಯಕ್ಷ ಕುಮಾರ್, ತಾಲೂಕು ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು, ಜಂಟಿ ಕೃಷಿ ನಿರ್ದೇಶಕರು, ರೈತ ಸಂಘಗಳ ಪದಾಧಿಕಾರಿಗಳು, ಸ್ವಸಹಾಯ ಸಂಘಗಳ ಮಹಿಳೆಯರು ಹಾಗೂ ನೂರಾರು ರೈತರು ಭಾಗವಹಿಸಿದ್ದರು.